ವಿಧಾನಸಭೆ: ಉಡುಪಿ ಜಿಲ್ಲೆಯ ಕುಂದಾಪುರ, ರಾಯಚೂರು ಜಿಲ್ಲೆಯ ಸಿಂಧನೂರು ಅಥವಾ ಲಿಂಗಸುಗೂರು, ವಿಜಯಪುರದ ಇಂಡಿ ಅಥವಾ ಸಿಂಧಗಿ, ವಿಜಯಪುರದ ಮುದ್ದೇಬಿಹಾಳ, ದಾವಣಗೆರೆಯ ಹೊನ್ನಾಳಿ ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ತೆರೆಯಲು ಪ್ರಸ್ತಾವ ಸ್ವೀಕೃತಗೊಂಡಿವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಬುಧವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ತೆರೆಯುವ ಸಂಬಂಧ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಆಯುಕ್ತರಿಂದ ಐದು ಪ್ರಸ್ತಾವನೆ ಸ್ವೀಕೃತಗೊಂಡಿವೆ. ಹೊಸ ಕಚೇರಿ ತೆರೆಯಲು ಕನಿಷ್ಠ 50 ಕಿ.ಮೀ. ಅಂತರವಿರಬೇಕು. ಬಸವನ ಬಾಗೇವಾಡಿಯು ಕೇವಲ 40 ಕಿ.ಮೀ. ಅಂತರದಲ್ಲಿರುವ ಕಾರಣ ಕಚೇರಿ ಆರಂಭಿಸಲಾಗದು ಎಂದು ತಿಳಿಸಿದರು.
ಇದಕ್ಕೂ ಮೊದಲು ಶಿವಾನಂದ ಪಾಟೀಲ್, ಬಸವನ ಬಾಗೇವಾಡಿ ತಾಲ್ಲೂಕು ಕೇಂದ್ರದಲ್ಲಿ ಸಹಾಯಕ ಸಾರಿಗೆ ಅಧಿಕಾರಿ ಕಚೇರಿ ಅಗತ್ಯವಿದೆ. ಮುದ್ದೇಬಿಹಾಳ ಬದಲಿಗೆ ಬಸವನ ಬಾಗೇವಾಡಿಯಲ್ಲೇ ಕಚೇರಿ ಆರಂಭಿಸುವುದು ಸೂಕ್ತವಾಗಿದೆ. ಹಾಗಾಗಿ ಮುದ್ದೇಬಿಹಾಳದಲ್ಲಿ ಕಚೇರಿ ತೆರೆಯುವ ಪ್ರಸ್ತಾವ ತಡೆ ಹಿಡಿಯಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ :ಮಾರ್ಚ್ 20 – 21ರಂದು ನಿಗದಿಯಾಗಿದ್ದ ಎಸ್‌ಡಿಎ ಪರೀಕ್ಷೆ ಮುಂದೂಡಿಕೆ
ಇದಕ್ಕೆ ಉತ್ತರಿಸಿದ ಲಕ್ಷ್ಮಣ ಸವದಿ, ಮುದ್ದೇಬಿಹಾಳಕ್ಕೆ ಹಂಚಿಕೆಯಾಗಿರುವ ಕಚೇರಿ ಪ್ರಸ್ತಾವ ತಡೆಹಿಡಿಯುವುದು ಸೂಕ್ತವೆನಿಸದು. ಬಸವನ ಬಾಗೇವಾಡಿಗೆ ಅಗತ್ಯವಿದ್ದರೆ ಕಚೇರಿ ಆರಂಭಿಸುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು ಎಂದು ಹೇಳಿದರು.