ಧಾರವಾಡ: ಕಲಾ ಸೇವೆ ಮಾಡುತ್ತ ಬಂದಿರುವ ಅಧಿಕೃತ ಸಾಂಸ್ಕೃತಿಕ ಸಂಘಟನೆಗಳಿಗೆ ಹಾಗೂ ಕಲಾವಿದರಿಗೆ ಸರ್ಕಾರ 2018-19ನೇ ಸಾಲಿನ ಧನಸಹಾಯ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲೆಯ ಸಾಂಸ್ಕೃತಿಕ ಸಂಘಟನೆಗಳು ಹಾಗೂ ಕಲಾವಿದರ ಪುರೋಭಿವೃದ್ಧಿ ಒಕ್ಕೂಟದಿಂದ ಜಿಲ್ಲಾಕಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ ವರ್ಷ ಕಲಾವಿದರಿಗೆ ಒಂದಿಷ್ಟು ಧನ ಸಹಾಯ ಸಿಕ್ಕಿದ್ದು ಬಿಟ್ಟರೆ ಈ ಹಿಂದಿನ ವರ್ಷಗಳಲ್ಲೂ ಕಲಾವಿದರೂ ತಮ್ಮ ಕೈಯಿಂದಲೇ ಹಣ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡಿದ್ದರು. ಇದೀಗ ಮತ್ತದೇ ಚಾಳಿಯನ್ನು ಸರ್ಕಾರ ಮುಂದುವರಿಸಿದೆ. 2017-18ನೇ ಸಾಲಿನಲ್ಲಿ ಸಂಘ-ಸಂಸ್ಥೆಗಳಿಗೆ ಧನಸಹಾಯ ಹಾಗೂ ವೇಷಭೂಷಣ ವಾದ್ಯಪರಿಕರಗಳ ಖರೀದಿಗೆ ರಾಜ್ಯ ಸರಕಾರದ ಧನಸಹಾಯ ಯೋಜನೆಯಡಿ ಹಣ ಬಿಡುಗಡೆ ಮಾಡುತ್ತಿಲ್ಲ. ಇದು ಕಲಾವಿದರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯ: ಕಲಾವಿದರು ಮತ್ತು ಕಲಾ ಸಂಘಟನೆಗಳಿಗೆ ನೀಡುವ ಅನುದಾನ ದಕ್ಷಿಣ ಕರ್ನಾಟಕ ಭಾಗದ ತಂಡ ಮತ್ತು ಸಂಘ-ಸಂಸ್ಥೆಗಳಿಗೆ ಅಧಿಕವಾಗಿ ಹೋಗುತ್ತಿದೆ. ಸರಕಾರ ಮಾತ್ರ ಉತ್ತರ ಕರ್ನಾಟಕ ಕಲಾವಿದರ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಷಾದಿಸಿದರು.
2017-18ನೇ ಸಾಲಿನ ವಾರ್ಷಿಕ ಧನಸಹಾಯವನ್ನು ರಾಜ್ಯ ಸರಕಾರ ಕೂಡಲೇ ಬಿಡುಗಡೆ ಮಾಡಬೇಕು. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಡೋಲು-ಕೋಲಾಟದ ಪ್ರತಿಭಟನೆ: ಸರ್ಕಾರದ ವಿರುದ್ಧ ತಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದ ಕಲಾವಿದರು ತಮ್ಮ ಕಲಾ ವಾದ್ಯಗಳನ್ನೇ ಬಾರಿಸುತ್ತ ನಗರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಸರ್ಕಾರದ ವಿರುದ್ಧ ಅದರಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾತ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಜಾನಪದ ವಿದ್ವಾಂಸರಾದ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ, ಆಯೇಷಾ ಸೈಯದ್, ಬಿ.ಎಂ. ಈಳಿಗೇರ, ಕಲ್ಲಪ್ಪ ಹಂಚಿನಮನಿ, ಫಕ್ಕೀರಪ್ಪ ಮಾದರ, ನಾಗರತ್ನ ಅಮ್ಮಿನಬಾವಿ, ಶಾಂತವ್ವ ಕಾರ್ಡಕೊಪ್ಪ, ಭೀಮಪ್ಪ ಹಡಪದ, ಬಸಮ್ಮ ಅಂಗಡಿ, ಮಹಾದೇವ ದೊಡ್ಡಮನಿ ಇನ್ನಿತರರಿದ್ದರು.