Advertisement

ಏಕಾಂಗಿ ಧರ್ಮಸ್ಯ

04:19 AM Mar 29, 2019 | mahesh |

ಅಂತೂ ಇಂತೂ “ಧರ್ಮಸ್ಯ’ ಚಿತ್ರ ಪ್ರೇಕ್ಷಕರ ಮುಂದೆ ಈ ವಾರ ಬರುತ್ತಿದೆ. ತುಂಬ ತಡವಾಗಿ ಆಗಮಿಸುತ್ತಿರುವ ಚಿತ್ರವನ್ನು ಅಷ್ಟೇ ಪ್ರೀತಿಯಿಂದ ಬಿಡುಗಡೆ ಮಾಡಲು ಉತ್ಸಾಹ ತೋರಿಸಿದೆ ಚಿತ್ರತಂಡ. ಆದರೆ, ಚಿತ್ರದ ಪ್ರಚಾರಕ್ಕಾಗಲಿ, ಪತ್ರಿಕಾಗೋಷ್ಠಿಗಾಗಲಿ ಚಿತ್ರದ ನಾಯಕ ನಟ ಸೇರಿದಂತೆ ಇತರೆ ಕಲಾವಿದರು ಬಾರದಿರುವುದು ಚಿತ್ರತಂಡಕ್ಕೆ ಸಹಜವಾಗಿಯೇ ಬೇಸರ ತರಿಸಿದೆ. ಇದನ್ನು ಹೇಳಿಕೊಳ್ಳಲಾಗದೆ, ಚಿತ್ರತಂಡ ಪರಿತಪಿಸುತ್ತಿತ್ತು. ಆಡಿಯೋ ಸಿಡಿ ಬಿಡುಗಡೆ ಅಂದಮೇಲೆ, ಚಿತ್ರದ ನಾಯಕ ಇರದಿದ್ದರೆ ಹೇಗೆ? ಅವರ ಅನುಪಸ್ಥಿತಿಯಲ್ಲಿಯೇ ಆಡಿಯೋ ಹೊರಬಂತಾದರೂ, ಅಂದು ಲಹರಿ ಆಡಿಯೋ ಸಂಸ್ಥೆ ಮಾಲೀಕ ವೇಲು ಅವರು, “ಒಂದು ಸಿನಿಮಾ ಅಂದಮೇಲೆ, ಅದು ಬಿಡು­ಗಡೆ ಆಗುವ­ವರೆಗೂ ಚಿತ್ರ ಕಲಾವಿ­ದರು ಜೊತೆ­ಯಲ್ಲಿ­ರಬೇಕು. ಯಾವುದೇ ನಟ, ನಟಿಯರಿದ್ದರೂ, ಆ ಚಿತ್ರದ ಪ್ರಚಾರಕ್ಕೆ ಬರುವುದು ಅವರ ಕೆಲಸ. ಹೊರರಾಜ್ಯದಿದ ಬಂದು ಸಿನಿಮಾ ನಿರ್ಮಿಸಿರುವ ನಿರ್ಮಾಪಕರ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಹಣ ಹಾಕಿ ಸಿನಿಮಾ ನಿರ್ಮಾಣ ಮಾಡುವುದು ಎಷ್ಟು ಕಷ್ಟ ಎಂಬುದು ನಿರ್ಮಾಪಕರಿಗಷ್ಟೇ ಗೊತ್ತು. ಯಾವುದೇ ಹೀರೋ, ಹೀರೋಯಿನ್‌ ಇರಲಿ, ನಿರ್ಮಾಪಕರ ಪರ ನಿಲ್ಲಬೇಕು. ತನ್ನ ಸಿನಿಮಾ ಎಂಬ ಪ್ರೀತಿ ಬೆಳೆಸಿಕೊಳ್ಳಬೇಕು. ಇನ್ನು ಮುಂದಾದರೂ ಹೀಗೆ ತಪ್ಪಾಗದಿರಲಿ’ ಎಂದು ಬಾರದ ಕಲಾವಿದರ ಬಗ್ಗೆ ಬೇಸರಿಸಿಕೊಂಡರು.

Advertisement

ಅಂದು ನಾಯಕ ವಿಜಯರಾಘವೇಂದ್ರ ಆಗಮಿಸಿರಲಿಲ್ಲ. ಚಿತ್ರದಲ್ಲಿ ಖಳನಟರಾಗಿ ನಟಿಸಿರುವ ಸಾಯಿಕುಮಾರ್‌ ಕೂಡ ಇರಲಿಲ್ಲ. ಪ್ರಜ್ವಲ್‌ದೇವರಾಜ್‌ ಸಹ ಕಾಣಿಸಿಕೊಳ್ಳಲಿಲ್ಲ. ಕಾರಣ ಕೇಳಿದ್ದಕ್ಕೆ ಚಿತ್ರೀಕರಣ ಬಿಜಿಯಂತೆ ಎಂಬ ಮಾತು ಕೇಳಿಬಂತು. ನಿರ್ದೇಶಕ ವಿರಾಜ್‌ ಅವರಿಗೆ ನೀವು ಮೊದಲೇ ಆಡಿಯೋ ಸಿಡಿ ಬಿಡುಗಡೆ ಕುರಿತು ನಟರಿಗೆ ತಿಳಿಸಿರಲಿಲ್ಲವೇ? ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿಬಂತು. ಆಗ ಉತ್ತರಿಸಿದ ನಿರ್ದೇಶಕರು, “ನಾವು ಮೊದಲೇ ಎಲ್ಲರಿಗೂ ತಿಳಿಸಿದ್ದೆವು. ಆದರೆ, ಯಾರೂ ಬಂದಿಲ್ಲ. ಇದು ಬೇಸರ ತರಿಸಿದೆ. ಕಷ್ಟಪಟ್ಟು ಚಿತ್ರ ಮಾಡಿದ್ದೇವೆ. ಸಾಕಷ್ಟು ಒದ್ದಾಡಿ ಈಗ ಬಿಡುಗಡೆ ಹಂತಕ್ಕೆ ಬಂದಿದ್ದೇವೆ. ಆದರೂ, ಪ್ರಚಾರಕ್ಕೆ ಯಾರೂ ಇಲ್ಲ. ಹಾಗಂತ, ಇದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎನ್ನುತ್ತಲೇ ನಿರ್ದೇಶಕರು, ಇಲ್ಲಿ ಸಾಧುಕೋಕಿಲ ಯಕ್ಷಗಾನ ಕಲಾವಿದರಾಗಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿ ಎಂದರು ನಿರ್ದೇಶಕರು. ನಾಯಕಿ ಶ್ರಾವ್ಯ ಕೂಡ ಕಾರ್ಯಕ್ರಮದ ಕೊನೆಯ ಸಮಯಕ್ಕೆ ಎಂಟ್ರಿಯಾಗಿ, ತಡವಾಗಿದ್ದಕ್ಕೆ ಕ್ಷಮೆ ಇರಲಿ, ಎಂದಷ್ಟೇ ಹೇಳಿ ಸುಮ್ಮನಾದರು. ನಿರ್ಮಾಪಕ ಅಕ್ಷರ ತಿವಾರಿ ಚಿತ್ರಕ್ಕೆ ಪ್ರೋತ್ಸಾಹ ಇರಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next