Advertisement
ರಂಗಭೂಮಿ ತಂಡಗಳನ್ನು ಮತ್ತು ಕಲಾವಿದರನ್ನು ಪೋತ್ಸಾಹಿಸಿ, ಪೋಷಿಸುವ ನಿಟ್ಟಿನಲ್ಲಿ ಇಲಾಖೆ ಪ್ರತಿವರ್ಷ ನಾಟಕ, ರಂಗೋತ್ಸವಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತದೆ.ಆದರೆ ಈ ರಂಗೋತ್ಸವ ಮತ್ತು ನಾಟಕಗಳು ಮುಗಿದ ತಕ್ಷಣ, ಕಲಾ ತಂಡಗಳಿಗೆ ನೀಡಬೇಕಾದ ಸಂಭಾವನೆ ನೀಡುವುದನ್ನೇ ಮರೆತು ಬಿಡುತ್ತದೆ.
Related Articles
Advertisement
ಈ ವಿಷಯವನ್ನು ರಂಗ ತಂಡಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ, ಇಲ್ಲಿಯವರೆಗೂ ಯಾವುದೇ ಪ್ರಯೋಜನಯಾಗಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದರೂ ಸಂಭಾವನೆ ಬಿಡುಗಡೆ ಬಗ್ಗೆ ಮಾತನಾಡುತ್ತಿಲ್ಲ. ಪ್ರತಿದಿನ ಒಂದಲ್ಲ, ಒಂದು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸದ ರಂಗಕಲಾವಿದರೊಬ್ಬರು ದೂರುತ್ತಾರೆ.
ಪ್ರಯೋಜಕತ್ವದ ಹಣ ಕೊಡಿ: ಕಳೆದ ಮಾರ್ಚ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯೋಜಕತ್ವದಲ್ಲಿ ರಂಗ ಸಂಪದ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ “ಸಂದರ್ಭ’, ಎಂಬ ನಾಟಕವನ್ನು ಪ್ರದರ್ಶಿಸಿತು.ಇದಕ್ಕೂ ಮೊದಲು 25 ಸಾವಿರ ರೂ. ಗಳ ಪ್ರಯೋಜಕತ್ವದ ಸಂಭಾವನೆ ನೀಡುವ ಭರವಸೆ ನೀಡಿತ್ತು.
ಹೀಗಾಗಿ 6,360 ರೂ. ನೀಡಿ ರಂಗಸಂಪದ ತಂಡ ವತಿಯಿಂದ ರವೀಂದ್ರ ಕಲಾಕ್ಷೇತ್ರವನ್ನು ಮುಂಗಡವಾಗಿ ಬುಕ್ ಮಾಡಲಾಗಿತ್ತು. ಆದರೆ ಪ್ರದರ್ಶನ ಮುಗಿದ ಮೇಲೆ ಇಲಾಖೆ ಸಂಭಾವನೆ ನೀಡುವುದನ್ನೇ ಮರೆತಿದೆ ಎಂದು ರಂಗಸಂಪದ ತಂಡದ ನಾಗೇಶ್ ದೂರಿದ್ದಾರೆ. ಹಲವಾರು ತಂಡಗಳು ಕಚೇರಿಗೆ ಅಲೆದಾಡುತ್ತಿದ್ದು,ಇಲಾಖೆಯನ್ನು ನಂಬಿ ಕಾರ್ಯಕ್ರಮ ನೀಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸಚಿವರಿಗೆ ಪತ್ರ: ಕಲಾವಿದರ ಈ ಅಳಲು ಇದೀಗ ಕರ್ನಾಟಕ ನಾಟಕ ಅಕಾಡೆಮಿ ಮೆಟ್ಟಿಲೇರಿದೆ. ರಂಗಭೂಮಿ ಕಲಾವಿದರ ಆಸರೆಗೆ ಬಂದಿರುವ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರಿಗೆ ಪತ್ರ ಬರೆದಿದೆ. ರಾಜ್ಯದ ಹಲವೆಡೆಗಳಲ್ಲಿರುವ ಕಲಾವಿದರು ಸಾಲ ಮಾಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಕಲಾವಿದರುಗಳಿಗೆ ಸಂಭಾವನೆ ನೀಡದೇ ಅಲೆದಾಡಿಸುವ ಪರಿ ಸರಿಯಲ್ಲ. ಹೀಗಾಗಿ, ಆರ್ಥಿಕ ಸಂಕಷ್ಟದಲ್ಲಿ ರಂಗಭೂಮಿ ಕಲಾವಿದರ ನೆರವಿಗೆ ಬರುವಂತೆ ಮನವಿ ಮಾಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಲಿ ನಿರ್ದೇಶಕರಾಗಿರುವ ವಿಶುಕುಮಾರ್ ಅವರು ನವೆಂಬರ್‌ನಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದು, ಅದಕ್ಕೂ ಮೊದಲು ಕಲಾವಿದರುಗಳಿಗೆ ನೀಡಬೇಕಾದ ಸಂಭಾವನೆ ಬಿಡುಗಡೆ ಮಾಡಬೇಕು ಎಂಬುದು ಕಲಾವಿದರ ಅಳಲು.
ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯೋಜಕತ್ವದಲ್ಲಿ ನಡೆದ ರಂಗೋತ್ಸವಗಳಲ್ಲಿ ಭಾಗವಹಿಸಿದ ಕಲಾವಿದರಿಗೆ, ಸಂಭಾವನೆ ನೀಡುವಂತೆ ಅಕಾಡೆಮಿ ವತಿಯಿಂದ ಸಚಿವರಿಗೆ ಪತ್ರ ಬರೆಯಲಾಗಿದೆ. -ಜೆ.ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ * ದೇವೇಶ ಸೂರಗುಪ್ಪ