Advertisement

“ಕಲಾವಿದರು, ಮಾಧ್ಯಮಗಳಿಂದ ಸಮಾಜದಲ್ಲಿ ನೆಮ್ಮದಿ’

07:20 PM Dec 16, 2019 | Sriram |

ಕುಂಬಳೆ: ನೆಮ್ಮದಿಯ ಸಮಾಜ ನಿರ್ಮಿಸುವ ಮಹಾನ್‌ ಕೊಡುಗೆ ನೀಡುವವರಲ್ಲಿ ಕಲಾವಿದರು, ಮಾಧ್ಯಮಗಳು ಎಂದಿಗೂ ಮುನ್ನೆಲೆಯಲ್ಲಿರುತ್ತವೆ. ಸಮಷ್ಟಿ ಹಿತಚಿಂತನೆಯ ಪರಿಕಲ್ಪನೆಯನ್ನು ಹುಟ್ಟುಹಾಕುವ, ಸಮಾಜದ ನೋವು-ನಲಿವುಗಳನ್ನು ದಾಖಲಿಸುವಲ್ಲಿ ಪತ್ರಿಕಾ ಮಾಧ್ಯಮಗಳ ಅಹರ್ನಿಶಿ ಕಾರ್ಯತತ್ಪರತೆಯು ಸಮೃದ್ಧ ಸಮಾಜ ನಿರ್ಮಾಣಕ್ಕೆ ಎಂದಿಗೂ ಕೈದೀವಿಗೆಯಾಗಿರುತ್ತದೆ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ. ಉಮೇಶ ಸಾಲ್ಯಾನ್‌ ಕಾಸರಗೋಡು ಅವರು ಹೇಳಿದರು.

Advertisement

ಪೆರ್ಮುದೆಯಿಂದ ಪ್ರಕಟಗೊಳ್ಳುವ ಸಾಹಿತ್ತಿಕ-ಸಾಂಸ್ಕೃತಿಕ ಮಾಸಪತ್ರಿಕೆ ಪೊಸಡಿಗುಂಪೆಯ ಪ್ರಥಮ ವಾರ್ಷಿಕ ಸಂಭ್ರಮದ ಅಂಗವಾಗಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವೈವಿಧ್ಯಮಯ ಸಮಾರಂಭದ ಅಂಗವಾಗಿ ನಡೆದ ಸಮಾರೋಪ ಸಮಾರಂಭ, ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪೊಸಡಿಗುಂಪೆಯ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗಡಿನಾಡಿನ ಸಾಹಿತ್ತಿಕ, ಸಾಂಸ್ಕೃತಿಕ, ಸಾಮಾಜಿಕ ಅನನ್ಯಗಳು ಇತರೆಡೆಗಳಿಗಿಂತ ವಿಭಿನ್ನವಾಗಿ ಅಪೂರ್ವವಾದುದಾಗಿವೆ. ನಾಡಿನ ಉದ್ದಗಲ ವಿವಿಧ ಸಾಧನೆಗಳಲ್ಲಿ ತೆರೆಮರೆಯಲ್ಲಿ ಕಾರ್ಯವೆಸಗುವವರನ್ನು ಗುರುತಿಸಿ ನಾಡಿಗೆ ಪರಿಚಯಿಸುವ, ಯುವ ತಲೆಮಾರಿಗೆ ಧನಾತ್ಮಕ ಪ್ರೇರಣೆ ನೀಡುವಲ್ಲಿ ಪೊಸಡಿಗುಂಪೆ ಪತ್ರಿಕೆ ಕೊಡುಗೆಗಳನ್ನು ನೀಡುತ್ತಿದೆ. ಯುವ ಬರಹಗಾರರನ್ನು, ಕವಿ, ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಗಡಿನಾಡಿನ ತುಳು-ಕನ್ನಡ ಭಾಷೆಗಳ ಬೆಳವಣಿಗೆಗಳಿಗೆ ಪೂರಕವಾಗಿದೆ ಎಂದು ಅವರು ಈ ಸಂದರ್ಭ ಹೇಳಿದರು.

ಸಾಮಾಜಿಕ, ಧಾರ್ಮಿಕ ಮುಖಂಡ, ಮೀಯಪದವು ವಿದ್ಯಾವರ್ಧಕ ಹೈಯರ್‌ ಸೆಕೆಂಡರಿ ಶಾಲಾ ಕಾರ್ಯ ನಿರ್ವಹಣಾಧಿಕಾರಿ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಸ್ಥಿತ್ಯಂತರಗಳು ಕಾಲದ ಪರಿಣಾಮವೇ ಆದರೂ ಕ್ರಿಯಾಶೀಲ ಸಮಾಜವನ್ನು ಸತ್ಪಥದಲ್ಲಿ ಮುನ್ನಡೆಸುವ ಜವಾಬ್ದಾರಿಯ ನಾಗರಿಕ ಪ್ರಪಂಚದಲ್ಲಿ ಮಾಧ್ಯಮಗಳ ಕೊಡುಗೆ ಎಂದಿಗೂ ಮಹತ್ವ ಕಳಕೊಳ್ಳದು. ಆದರೆ ಅಂತಹ ಮಾಧ್ಯಮಗಳನ್ನು ಕೈನೀಡಿ ಪ್ರೋತ್ಸಾಹಿಸುವ, ಬೆಳೆಸುವ ಕರ್ತವ್ಯವೂ ಸಮಾಜದ್ದೇ ಆಗಿದೆ ಎಂದರು. ಪುಸ್ತಕ, ಪತ್ರಿಕೆಗಳ ಓದು ಜೀವಂತ ಸಮಾಜದ ಪ್ರತೀಕಗಳು. ಇಂದಿನ ತಲೆಮಾರು ಓದುವಿಕೆಯಿಂದ ವಿಮುಖಗೊಳ್ಳುತ್ತಿರುವುದರ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಆದರೆ ಆಧುನಿಕ ತಂತ್ರಜ್ಞಾನ ಆಧಾರಿತ ಓದು ಬಹುಶಃ ತಪ್ಪೆನ್ನಲು ಸಾಧ್ಯವಾಗದು. ಆದರೂ ಪುಸ್ತಕಗಳ ಓದಿಗೆ ಸಮವಾಗದ ಅವುಗಳನ್ನು ಮಿತ ಪ್ರಮಾಣದಲ್ಲಿ ಬಳಸಿಕೊಂಡು ಪರಂಪರೆಯ ಓದು-ಬರಹಗಳಿಗೆ ತೊಡಗಿಸುವ ಹೊಸ ಚಿಂತನೆಯ ಮಾರ್ಗಗಳ ಬಳಕೆ ಮಾಧ್ಯಮಗಳ ಮೂಲಕ ಮೂಡಿಬರಲಿ ಎಂದು ಅವರು ಆಶಯ ವ್ಯಕ್ತಪಡಿಸಿ, ಕೊಂಡು ಓದುವ ಮನೋಸ್ಥಿತಿ ಪ್ರತಿಯೊಬ್ಬರಲ್ಲಿ ಇರಲಿ ಎಂದು ತಿಳಿಸಿದರು.

ಪೆರ್ಮುದೆ ಸೈಂಟ್‌ ಲಾರೆನ್ಸ್‌ ಚರ್ಚ್‌ ಧರ್ಮಗುರು ಮೆಲ್ವಿನ್‌ ಫೆರ್ನಾಂಡಿಸ್‌ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಮಾಧ್ಯಮಗಳ ಹುಟ್ಟು ಬೆಳವಣಿಗೆಗಳ ಬಗ್ಗೆ ಮಾತನಾಡಿ, ಸ್ಥಳೀಯ ವರ್ತಮಾನ, ಬೆಳವಣಿಗೆಗಳ ಮಾಹಿತಿ ನೀಡುವ ಮಾಧ್ಯಮಗಳ ಯಶಸ್ಸಿಗೆ ಬೆಂಬಲ ನೀಡುವ ಸುಮನಸ್ಸು ಸಮಾಜದ್ದಾಗಿರಲಿ ಎಂದರು.

Advertisement

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯ ಪ್ರಬಂಧಕ ಎನ್‌. ಶಂಕರನಾರಾಯಣ ಭಟ್‌, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಎನ್‌.ಮಹಾಲಿಂಗ ಭಟ್‌, ಹೈಸ್ಕೂಲ್‌ ಮುಖ್ಯೋಪಾಧ್ಯಾಯ ಎ.ಎಚ್‌. ಗೋವಿಂದ ಭಟ್‌ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾಂಞಂಗಾಡ್‌ ವಲಯ ಸಂಚಾರಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಪರಮೇಶ್ವರ ನಾಯ್ಕ ಉಪಸ್ಥಿತರಿದ್ದರು.

ಚಂದ್ರಹಾಸ ಕಯ್ನಾರ್‌ ಸ್ವಾಗತಿಸಿದರು. ಪೊಸಡಿಗುಂಪೆ ಪತ್ರಿಕೆಯ ಸಂಪಾದಕ ಜಾನ್‌ ಡಿ’ಸೋಜ ವಂದಿಸಿದರು. ಸಹ ಸಂಪಾದಕ ಲವಾನಂದ ಎಲಿಯಾಣ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಕೋಡಿಮೂಲೆ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಕ್ಯಾಂಪ್ಕೋ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸಿದರು.

ಪೆರಿಯ ಕೇಂದ್ರೀಯ ವಿವಿ ಕನ್ನಡ ವಿಭಾಗ ಮುಖ್ಯಸ್ಥ ಡಾ| ಸ್ವಾಮಿ ನಾ. ಕೋಡಿಹಳ್ಳಿ ಮುಖ್ಯ ಅತಿಥಿಯಾಗಿದ್ದರು. ಬಳಿಕ ನಡೆದ ಕವಿಗೋಷ್ಠಿಗೆ ಪ್ರಭಾವತಿ ಕೆದಿಲಾಯ ಚಾಲನೆ ನೀಡಿದರು.

ಶಾಂತಾ ಕುಂಟಿನಿ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯ ಬಳಿಕ ಯಕ್ಷಗಾನ ತಾಳಮದ್ದಳೆ, ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಭಾÅಮರಿ ಕಲಾವಿದೆರ್‌ ಉಪ್ಪಳ ತಂಡದಿಂದ ಮುರಳಿ “ಈ ಪಿರ ಬರೊಲಿ’ ತುಳು ನಾಟಕ ಪ್ರದರ್ಶನ ನಡೆಯಿತು.

ಸಾಧಕರಿಗೆ ಅಭಿನಂದನೆ
ಸಮಾರಂಭದಲ್ಲಿ ದೈಗೋಳಿಯ ಸಾಯಿ ಸೇವಾಶ್ರಮದ ಡಾ| ಉದಯಕುಮಾರ್‌ (ಸೇವೆ), ತಿಮ್ಮಣ್ಣ ಭಟ್‌ (ಸಾಹಿತ್ಯ-ಅಧ್ಯಾಪನ), ಹೆನ್ರಿ ಡಿ’ಸಿಲ್ವ ಸುರತ್ಕಲ್‌ (ಕೊಂಕಣಿ ಚಲನಚಿತ್ರ), ರಾಮಪ್ಪ ಮಂಜೇಶ್ವರ (ಸಮಾಜಸೇವೆ), ಪರಿಮಳಾ ರಾವ್‌ ಸುರತ್ಕಲ್‌ (ನೃತ್ಯ), ಕಕ್ವೆ ಶಂಕರ ರಾವ್‌ ಧರ್ಮತ್ತಡ್ಕ (ಸಮಾಜಸೇವೆ), ಪ್ರಸನ್ನ ವಿ. ಚೆಕ್ಕೆಮನೆ (ಸಾಹಿತ್ಯ), ಸದಾಸನಡ್ಕ ರಾಮ ಕುಲಾಲ್‌ (ಯಕ್ಷಗಾನ), ಸೀತಾರಾಮ ಕುಲಾಲ್‌ ಬಾಲಡ್ಕ (ಪಶು ನಾಟಿ ವೈದ್ಯಕೀಯ), ಅಲ್ವಿನ್‌ ವಿನೇಜಸ್‌ ಕುಲಶೇಖರ (ಸಮಾಜ ಸೇವೆ) ಸಾಧಕರನ್ನು ಗೌರವಿಸಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next