ಇತ್ತೀಚೆಗಷ್ಟೇ ಕಲಾವಿದರ ಸಂಘದ ಕಟ್ಟಡಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದು ಗೊತ್ತೇ ಇದೆ. ಭಾನುವಾರ ಆ ನೂತನ ಕಟ್ಟಡದಲ್ಲಿ ತಾರೆಗಳ ಸಂಭ್ರಮ ಮೇಳೈಸಿತ್ತು. ಸಂಘದ ಅಧ್ಯಕ್ಷ ಅಂಬರೀಷ್ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಟ್ಟಡಕ್ಕೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟ,ನಟಿಯರು ಭೇಟಿ ನೀಡಿ, ಕನ್ನಡ ಕಲಾವಿದರ ಗುಣಗಾನ ಮಾಡಿದರು.
ತೆಲುಗಿನ ಮೆಘಾಸ್ಟಾರ್ ಚಿರಂಜೀವಿ, ಮೋಹನ್‌ಬಾಬು, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ, ತಮಿಳು ನಟ ನಾಜರ್, ಸರಿತಾ ಸೇರಿದಂತೆ ಇತರೆ ಭಾಷೆಯ ಕಲಾವಿದರು ನೂತನ ಕಟ್ಟಡ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಇವರೊಂದಿಗೆ ನೂತನ ಕಟ್ಟಡದಲ್ಲಿ ಮೊದಲ ಸಲ ಕನ್ನಡ ಚಿತ್ರರಂಗದ ಕಲಾವಿದರೆಲ್ಲರೂ ಒಟ್ಟುಗೂಡಿದ್ದು ವಿಶೇಷ.
ಹಿರಿಯ ಕಲಾವಿದೆ ಬಿ. ಸರೋಜಾದೇವಿ, ಸುಮಿತ್ರಾ, ಸುಮಲತಾ ಅಂಬರೀಷ್, ರಾಜೇಂದ್ರಸಿಂಗ್ ಬಾಬು, ರಾಕ್‌ಲೈನ್ ವೆಂಕಟೇಶ್, ಜಗ್ಗೇಶ್, ಶಿವರಾಜಕುಮಾರ್, ಹಂಸಲೇಖ, ಶ್ರುತಿ, ತಾರಾ, ಅನುಪ್ರಭಾಕರ್, ರಘುಮುಖರ್ಜಿ, ಪ್ರಮೀಳಾ ಜೋಷಾಯ್, ಪುನೀತ್‌ರಾಜಕುಮಾರ್, ದರ್ಶನ್, ಯಶ್,
ವಿಜಯರಾಘವೇಂದ್ರ, ಅಜೇಯ್‌ರಾವ್, ರವಿಶಂಕರ್, ಸಾಧುಕೋಕಿಲ, ಹೇಮಾ ಚೌಧರಿ, ನೆನಪಿರಲಿ ಪ್ರೇಮ್, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಗೂ ಕಲಾವಿದರು ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷ. ನಿರ್ದೇಶಕರ ಸಂಘ, ನಿರ್ಮಾಪಕರ ಸಂಘದ ಪದಾಧಿಕಾರಿಗೂ ಇದ್ದರು.
ಅಂಬಿ ಕರೆದ ಮೇಲೆ ಬರದೇ ಇರಲು ಸಾಧ್ಯವೇ? ನಾನೂ ಕನ್ನಡದಲ್ಲಿ ನಟಿಸಿದ್ದೇನೆ. ಬೆಂಗಳೂರು ನನ್ನ ಫೇವರೇಟ್, ಇಲ್ಲಿನ ಜನ ನನಗಿಷ್ಟ. ಈ ಕಟ್ಟಡ ನೋಡಿ ಖುಷಿಯಾಯ್ತು. ಭಾರತದಲ್ಲೇ ಕಲಾವಿದರ ಸಂಘಕ್ಕೆ ಇಂತಹ ದೊಡ್ಡ ಕಟ್ಟಡವಿಲ್ಲ. ಅಂಬರೀಷ್ ಪ್ರಯತ್ನಕ್ಕೆ ಕೃತಜ್ಞತೆ. ತೆಲುಗು ಕಲಾವಿದರಿಗೂ ಇಂಥದ್ದೊಂದು ಕಟ್ಟಡ ಮಾಡುವ ಆಸೆ ಇದೆ. ಆ ಪ್ರಯತ್ನ ಮಾಡುತ್ತೇವೆ.
-ಚಿರಂಜೀವಿ, ತೆಲುಗು ನಟ
ಅಂಬರೀಷ್, ವಿಷ್ಣುವರ್ಧನ್ ನನ್ನ ಆತ್ಮೀಯ ಗೆಳೆಯರು. ಒಳ್ಳೆಯ ಪ್ರಯತ್ನ ಮಾಡಿ, ವಿಶಾಲವಾದ ಕಟ್ಟಡ ಕಟ್ಟಲಾಗಿದೆ. ಕಲಾವಿದರಿಗೆ ಇಂಥದ್ದೊಂದು ವಾತಾವರಣ ನಿರ್ಮಾಣ ಮಾಡಿದ ಮನಸುಗಳಿಗೆ ಧನ್ಯವಾದ
-ಮೋಹನ್‌ಬಾಬು, ತೆಲುಗು ನಟ
ಅಂಬರೀಷ್ ನನ್ನ ಹಿರಿಯಣ್ಣ ಇದ್ದಂಗೆ. ಹಾಗೆಯೇ ನನಗೆ ಅವರು ಸಾಕಷ್ಟು ತೊಂದರೆ ಕೊಟ್ಟಿದ್ದಾರೆ ಕೂಡ. ನಿನ್ನ ಎದುರು ವಿಷ್ಣು ನಿಲ್ಲಿಸಿ ಬಿಡ್ತೀನಿ ಅಂತ ತಮಾಷೆ ಮಾಡುತ್ತಿದ್ದ ಅಂಬರೀಷ್, ಸ್ನೇಹಜೀವಿ. ಈ ಸಂಘಕ್ಕೆ ಒಂದು ಕೋಟಿಯಲ್ಲ, ಅಂಬರೀಷ್ ಮೇಲಿನ ಪ್ರೀತಿಗೆ ಇನ್ನೂ ಹೆಚ್ಚು ಹಣ ಕೊಡ್ತೀನಿ. ಯೋಗ, ಜಿಮ್ ವ್ಯವಸ್ಥೆಗೆ ಬೇಕಾಗಿದ್ದನ್ನು ಒದಗಿಸುತ್ತೇನೆ.
-ಅನಂತ್‌ಕುಮಾರ್, ಕೇಂದ್ರ ಸಚಿವ