Advertisement

ಮತ್ತೆ ಅತಂತ್ರವಾಗುತ್ತಿದೆ ಕಲಾವಿದರ ಬದುಕು

08:24 PM Apr 26, 2021 | Team Udayavani |

ಶಿರಸಿ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ವೀಕೆಂಡ್‌ ಕರ್ಫ್ಯೂ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿಷೇಧದ ಕಾರಣದಿಂದ ಕಲಾಕ್ಷೇತ್ರ ಅತಂತ್ರವಾಗುತ್ತಿದೆ. ಬದಲಿ ಉದ್ಯೋಗವೂ ಇಲ್ಲದೇ, ಇತ್ತ ಕಲಾ ಪ್ರದರ್ಶನವೂ ಇಲ್ಲದೇ ಬದುಕು ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿ ದಿನ ದೂಡುವಂತೆ ಆಗಿದೆ ಕಲಾವಿದರ ಬದುಕು.

Advertisement

ಕಳೆದ ವರ್ಷದ ಮಾರ್ಚ್‌ನಲ್ಲಿ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಹೇರಲಾದ ಲಾಕ್‌ಡೌನ್‌ ಕಾರಣದಿಂದ ಹಾಗೂ ಮೊದಲ ಅಲೆಯ ಸಂಕಷ್ಟದಿಂದ ಹತ್ತು ತಿಂಗಳ ಬಳಿಕ ನಿಧಾನವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಚೇತರಿಕೆಯಾಗುತ್ತಿದ್ದವು. ಉತ್ತರ ಕನ್ನಡದಂತಹ ಸಾಂಸ್ಕೃತಿಕ ಜಿಲ್ಲೆಯಲ್ಲಿ ಕಲೆಯ ಸಂಭ್ರಮ ಮನೆ ಮಾಡುತ್ತಿತ್ತು. ಅದರ ಬೆನ್ನಿಗೇ ಅಪ್ಪಳಿಸಿದ ಕೊರೊನಾದ ಎರಡನೇ ಅಲೆ ಮತ್ತೆ ಕಲಾವಿದರನ್ನು, ಅದನ್ನೇ ನಂಬಿದ ಎಲ್ಲ ಕ್ಷೇತ್ರಗಳೂ ಸಂಕಷ್ಟಕ್ಕೆ ಬಿದ್ದಿವೆ.

ಯಕ್ಷಗಾನ, ಸಂಗೀತ, ಭರತನಾಟ್ಯ, ನಾಟಕ ಸಹಿತವಾದ ಸಾಂಸ್ಕೃತಿಕ ಕಲಾ ಪ್ರದರ್ಶನಗಳಿಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರೇಕ್ಷಕರಿದ್ದಾರೆ. ಕಲಾವಿದರೂ ಇದ್ದಾರೆ. ಹಳೆ ತಲೆಮಾರಿನ ಜೊತೆಗೆ ಹೊಸ ತಲೆಮಾರೂ ಇದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಕಲಾವಿದರು ಸಹ ಇದ್ದಾರೆ. ಆದರೆ, ಈಗ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಲಾವಿದರು ಆನ್‌ ಲೈನ್‌ ತರಗತಿಗಳತ್ತ ಮತ್ತೆ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ಪ್ರತಿವರ್ಷ ಸಾವಿರಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿದ್ದವೆ.

ಒಂದು ಸಾವಿರದಷ್ಟು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು. ಭರತನಾಟ್ಯ, ಸಂಗೀತ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಸಾವಿರಾರು ಕಲಾವಿದರು ಕಲಾ ಪ್ರದರ್ಶನಗಳಿಂದಲೇ ಬದುಕು ನಡೆಸುತ್ತಿದ್ದರು. ಯಕ್ಷಗಾನ ಕಲಾವಿದರಂತೂ ರಾತ್ರಿ ರಂಗು ರಂಗಿನ ಬೆಳಕಿನ ಪ್ರದರ್ಶನ ನೀಡಿ, ಹಗಲು ವಿಶ್ರಾಂತಿ ಪಡೆಯುತ್ತಿದ್ದರು. ಸಾಧನೆ ಮಾಡಿದ ಸಂಗೀತ ಕಲಾವಿದರು ರಸದೌತಣ ನೀಡುತ್ತಿದ್ದರು. ಕಳೆದ ವರ್ಷ ಪ್ರವೇಶ ಕೊಟ್ಟ ಕೊರೊನಾದ ಬಳಿಕ ಕಳೆದ ಡಿಸಂಬರ್‌ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೊಂದೇ ಆರಂಭವಾಗಿದ್ದವು. ಯಕ್ಷಗಾನ ಪ್ರದರ್ಶನಗಳು, ಮೇಳದ ತಿರುಗಾಟಗಳು, ಮನೆಯಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಶುರುವಾಗಿದ್ದವು. ಧಾರ್ಮಿಕ ಕಾರ್ಯಕ್ರಮಗಳಲ್ಲೂ ಸಾಂಸ್ಕೃತಿಕ ಆಯಾಮಗಳೂ ಸಿಕ್ಕಿದ್ದವು. ಮೊದಲಿನಷ್ಟು ವೇಗ ಇಲ್ಲದಿದ್ದರೂ ಬದುಕಿಗೆ ಆಸರೆಯಾಗುವ ಹಂತಕ್ಕೆ ಸ್ಥಿತಿ ನಿರ್ಮಾಣ ಆಗಿದ್ದವು.

ಯಕ್ಷಗಾನ, ನಾಟಕ, ಸಂಗೀತ, ನಾಟ್ಯಕಲಾ ಪ್ರದರ್ಶನ ಎಂದರೆ ನೂರಾರು ಮಂದಿ ಪ್ರೇಕ್ಷಕರು ಪಾಲ್ಗೊಳ್ಳುವುದು ಸಹಜವಾಗಿದೆ. ಆದರೆ ಹೀಗೆ ಸೇರುವ ಜನರಲ್ಲಿ ಮಾರಕ ಕಾಯಿಲೆ ಹರಡಬಹುದು ಎಂಬ ಕಾರಣಕ್ಕೆ ಸರಕಾರ ಪ್ರಾರಂಭದಲ್ಲಿ ನಿರ್ಬಂಧಗಳನ್ನು ಮತ್ತು ನಂತರದಲ್ಲಿ ನಿಷೇಧ ಹೇರಿದ್ದು ಸರಿಯಾಗಿದೆ. ಈ ಮಧ್ಯೆ ಕೆಲವರು ನಿಗದಿ ಮಾಡಿದ್ದ ಕಾರ್ಯಕ್ರಮವನ್ನೂ ರದ್ದುಗೊಳಿಸಿದ್ದಾರೆ.

Advertisement

ಕಲಾವಿದರು ಮಾತ್ರವಲ್ಲ, ಪ್ರಸಾದನ ವ್ಯವಸ್ಥೆ ಮಾಡುವವರು, ಲೈಟ್‌, ಮೈಕ್‌, ಶಾಮಿಯಾನ, ಖುರ್ಚಿ ವ್ಯವಸ್ಥೆ ಮಾಡುವವರಿಗೆ ಕೂಡ ಇದರ ಪರಿಣಾಮ ಉಂಟಾಗಿದೆ. ಆದರೆ, ಕಲಾಕ್ಷೇತ್ರವನ್ನೇ ನಂಬಿದವರ ಸ್ಥಿತಿ ಸಂಕಟಕ್ಕೆ ತಂದಿದೆ. ಬೆರಳೆಣಿಕೆಯಷ್ಟು ಕಲಾವಿದರಿಗೆ ಮಾತ್ರ ಅಷ್ಟೊಂದು ಏಟಾಗದೇ ಇದ್ದರೂ ಬಹುಪಾಲು ಸಂಕಷ್ಟಕ್ಕೆ ದೂಡಿದೆ ಎನ್ನುತ್ತಾರೆ ಕಲಾವಿದರು. ಸರಕಾರ ಏನಾದರೂ ಮಾಡಿ ಕಲಾಕ್ಷೇತ್ರಕ್ಕೂ ನೆರವಾಗಬೇಕು ಎಂಬ ಆಗ್ರಹ ಕೂಡ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next