Advertisement
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂಗಾರು ಮಳೆ-2 ಚಿತ್ರದಲ್ಲಿ ನಾಯಕಿಯರ ಪೈಕಿ ಒಬ್ಬಳಾಗಿ ಚಿತ್ರರಂಗಕ್ಕೆ ಪರಿಚಯವಾದ ಶಿಲ್ಪಾ ಮಂಜುನಾಥ್ ಅಪ್ಪಟ ಕನ್ನಡದ ಪ್ರತಿಭೆ.ಮುಂಗಾರು ಮಳೆ-2 ಚಿತ್ರದ ಬಳಿಕ ಪರಭಾಷೆಯತ್ತ ಮುಖ ಮಾಡಿದ ಶಿಲ್ಪಾ ಮಂಜುನಾಥ್ ಕಳೆದ ಮೂರು ವರ್ಷಗಳಲ್ಲಿ ತಮಿಳಿನ ಇಸ್ಪದೆ ರಾಜೂವಂ ಇದಾಯ ರನಿಯುಂ, ಕಾಲಿ, ಮಲೆಯಾಳದ ರೊಸಾಪೋ, ತೆಲುಗಿನ ಕಾಸಿ, ಕನ್ನಡದಲ್ಲಿ ನೀವು ಕರೆ ಮಾಡಿದ ಚಂದಾದಾರರು, ಮತ್ತು ಇತ್ತೀಚೆ ತೆರೆಕಂಡ ಸ್ಟ್ರೈಕರ್ ಸೇರಿದಂತೆ ಸುಮಾರು ನಾಲ್ಕು ಭಾಷೆಗಳಲ್ಲಿ, ಏಳಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡುವ ಶಿಲ್ಪಾ ಮಂಜುನಾಥ್, “ಸದ್ಯ ನನ್ನ ಗಮನ ಚಿತ್ರರಂಗದಲ್ಲಿದೆ. ಒಳ್ಳೆಯ ಚಿತ್ರಗಳಲ್ಲಿ ಕಾಣಿಸಿ ಕೊಳ್ಳಬೇಕು, ಒಳ್ಳೆಯ ಪಾತ್ರಗಳನ್ನು ಮಾಡಬೇಕು ಎಂಬ ಆಸೆಯಿದೆ. ನನ್ನ ವೃತ್ತಿ ಜೀವನದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರೂ ಬೇಜಾರಿಲ್ಲ. ಆದ್ರೆ ಜನರಿಗೆ ಬೋರ್ ಆಗದಂಥ ಚಿತ್ರಗಳಲ್ಲಿ, ಪಾತ್ರಗಳಲ್ಲಿ ಅಭಿನಯಿಸಬಾರದು. ಆಡಿಯನ್ಸ್ ನನ್ನನ್ನು ಅಭಿನಯದ ಮೂಲಕ ಗುರುತಿಸುವಂತಾಗಬೇಕು. ಆದ್ರೆ ನನಗೆ ಇಷ್ಟವಾಗುವ ಪಾತ್ರಗಳು ಸಿಕ್ಕರೆ ಮಾಡ್ತೀನಿ. ಗ್ಲಾಮರ್ ಪಾತ್ರಗಳು ಮಾತ್ರ ಮಾಡಬೇಕು, ಡಿ-ಗ್ಲಾಮರ್ ಇರಬಾರದು ಅಂತೇನೂ ಇಲ್ಲ’ ಎನ್ನುತ್ತಾರೆ. ಶಿಲ್ಪಾ ಮಂಜುನಾಥ್ ಅವರನ್ನು ನೋಡಿದ ಅನೇಕರು ಈ ಹುಡುಗಿಗೆ ಜಂಭ ಜಾಸ್ತಿ, ಆ್ಯಟಿಟ್ಯೂಡ್ ಇದೆ ಎಂದು ಭಾವಿಸಿರುವುದು ಉಂಟಂತೆ! ಶಿಲ್ಪಾ ತನಗೆ ಸಂಬಂಧಿಸಿರದ ವ್ಯಕ್ತಿಗಳು, ವಿಷಯಗಳ ಬಗ್ಗೆ ಅನಗತ್ಯವಾಗಿ ಮಾತನಾಡಲು ಹೋಗುವುದಿಲ್ಲವಂತೆ. ಹಾಗಾಗಿ, ಚಿತ್ರರಂಗದಲ್ಲಿ ಅನೇಕರು ತನ್ನ ಬಗ್ಗೆ ತಪ್ಪು ಭಾವಿಸಿದ್ದಾರೆ ಎಂಬ ಅಳಲು ಶಿಲ್ಪಾ ಅವರದ್ದು.