Advertisement

ಕಲಾ ವೈಭವದ ಚರ್ಚ್‌!

09:33 AM Jun 15, 2019 | keerthan |

ವಿಜಯಪುರದ ಐತಿಹಾಸಿಕ ಗಗನಮಹಲ್ ಹಿಂದಿರುವ ಈ ಚರ್ಚ್‌ ದ್ವಾರದ ಮೇಲಿನ ಕಮಾನಿನಲ್ಲಿ ‘ಸಿಎಸ್‌ಐ ಆಲ್ ಸೇಂಟ್ಸ ಚರ್ಚ್‌’ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಆ ಚರ್ಚಿಗೆ ‘ಆಂಗ್ಲಿಕನ್‌ ಚರ್ಚ್‌’ ಎಂಬ ಇನ್ನೊಂದು ಅಡ್ಡ ಹೆಸರೂ ಇದೆ. 400 ವರ್ಷದಷ್ಟು ಹಳೆಯದು ಇದು. ಆಗಿನ ಕಾಲದಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಲು, ಉನ್ನತ ಅಧಿಕಾರಿಗಳು ಆ ಚರ್ಚಿಗೆ ಬರುತಿದ್ದರಂತೆ. ಅಷ್ಟೇ ಅಲ್ಲ, ಅದು ಉನ್ನತ ಅಧಿಕಾರಿಗಳಿಗೆ ಮಾತ್ರ ಈ ಚರ್ಚ್‌ ಮೀಸಲಾಗಿತ್ತಂತೆ.

Advertisement

‘ಈ ಚರ್ಚಿನ ಕೆಲವು ಭಾಗಗಳು ಶಿಥಿಲಾವಸ್ಥೆಯನ್ನು ತಲುಪಿವೆ. ಮುಟ್ಟಿದರೆ ಸಾಕು; ಗೋಡೆಯ ಗಿಲಾಯಿ  ಬಣ್ಣ ಉದುರುತ್ತದೆ. ಹಾಗಾಗಿ, ಚರ್ಚಿನ ಆಯುಷ್ಯ ಮುಗಿಯುತ್ತಿರಬಹುದೇ?’ ಹೀಗಂತ ಅನುಮಾನ ಪಡುವ ಅವಶ್ಯಕತೆ ಇಲ್ಲ. ಅದರ ನವಿರಾದ ಕೆತ್ತನೆ, ಅದಕ್ಕೆ ಲೇಪಿಸಿದ ಬಣ್ಣದ ತಾಜಾತನ ಇನ್ನೂ ಮಾಸಿಲ್ಲ. ಅದನ್ನು ವೀಕ್ಷಣೆಗೆ ಮುಕ್ತವಾಗಿಟ್ಟರೆ ಎಲ್ಲಿ ಹಾಳಾಗಿ ಹೋಗುವುದೋ ಎಂಬ ಭಯ, ಆ ಚರ್ಚಿನ ಪಾದ್ರಿ ರೆವೆರಂಡ್‌ ಬಾಲರಾಜ ಸುಚಿತ್‌ಕುಮಾರ ಅವರಿಗಿದೆ.

ಈ ಚರ್ಚ್‌ ಪ್ರವೇಶದ್ವಾರದಲ್ಲಿ ಒಂದು ಬಹುಭಾರವಾದ ಕಲಾಕೃತಿ ಇದೆ. ಅದನ್ನು ನಿರ್ಮಿಸಲು ಯಾವ ಲೋಹ/ಶಿಲೆಯನ್ನು ಬಳಸಿದ್ದಾರೆ ಎಂಬುದು ಗೊತ್ತಿಲ್ಲ. ಅದನ್ನು ಸುಂದರವಾದ ಕಟ್ಟಿಗೆಯ ಚೌಕಟ್ಟಿನಲ್ಲಿಡಲಾಗಿದೆ. ಅದು ಪ್ರವೇಶದ್ವಾರಕ್ಕೆ ಪರದೆಯಂತೆ ನಿಂತುಕೊಂಡಿದೆ. ಅದನ್ನು ಕಟ್ಟಿಗೆಯ ಬಂಧನದಿಂದ ಬಿಡಿಸಿ, ನೇತುಹಾಕಿ ಬಾರಿಸಿದರೆ ಮನಮೋಹಕ ಧ್ವನಿ ಹೊರಡುತ್ತದೆ. ಅಲುಗಿಸಲೂ ಆಗದಷ್ಟು ಭಾರವಿರುವ ಅದನ್ನು ನೇತುಹಾಕು­ವುದು ಸಾಧ್ಯವಾಗದ ಮಾತು. ಈಗಂತೂ ಅದರ ಧ್ವನಿಯನ್ನು ಕೇಳಿದವರು ಯಾರೂ ಇಲ್ಲ. ಈ ಕಲಾಕೃತಿಯನ್ನು ತಮ್ಮ ದೇಶಕ್ಕೆ ಕೊಂಡೊಯ್ಯುವ ಹಲವು ಪ್ರಯತ್ನಗಳನ್ನು ಬ್ರಿಟಿಷರು ಮಾಡಿದ್ದರು ಎನ್ನುತ್ತಾರೆ ಬಾಲರಾಜ.

ಈ ಕಟ್ಟಡದ ಕೆಳ ಅಂತಸ್ತಿನಲ್ಲಿ ಸುಂದರವಾದ ವರ್ಣರಂಜಿತ ಪ್ರಾರ್ಥನಾ ಮಂದಿರವಿದೆ. ಜನ ಕುಳಿತುಕೊಳ್ಳಲು ಭಾರವಾದ ಹಾಗೂ ಮಜಬೂತಾದ ಸಾಗುವಾನಿ ಕಟ್ಟಿಗೆಯ 6 ಆಸನಗಳಿವೆ. ಒಂದೊಂದು ಆಸನದಲ್ಲೂ 5 ಜನರಂತೆ 30 ಜನ ಆರಾಮಾಗಿ ಕುಳಿತುಕೊಳ್ಳಬಹುದು. ಅವುಗಳ ಎದುರಿಗಿರುವ ಡೆಸ್ಕ್ಗಳಲ್ಲಿ ಬೈಬಲ್ ಗ್ರಂಥಗಳಿವೆ. ಫಾದರ್‌, ಬಿಷಪ್‌ ಸೇರಿ 35 ಜನ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಬಹುದು.

ಮೇಲಂತಸ್ತಿನಲ್ಲಿ ಅಧಿಕಾರಿಗಳು ವಿಶ್ರಮಿಸಲು ಕೆಲವು ಕೋಣೆಗಳಿವೆ. ಅಲ್ಲಿರುವ ಛಾವಣಿ, ಗೋಡೆ, ಕಂಬಗಳಲ್ಲೂ ನವಿರಾದ ಕೆತ್ತನೆಯ ಕಲಾಕುಸುರಿ ಇದೆ. ಅದೆಲ್ಲ ಆಕರ್ಷಕವಾಗಿದೆ. ಈಗ ಆ ಕೋಣೆಗಳನ್ನು ಯಾರೂ ಬಳಸುತ್ತಿಲ್ಲ. ಅವು ನಿರುಪಯುಕ್ತ ವಸ್ತುಗಳ ಸಂಗ್ರಹಾಗಾರವಾಗಿ ಬಳಕೆಯಾಗುತ್ತಿವೆ.

Advertisement

ಈ ಚರ್ಚ್‌ ಕಟ್ಟಡದ ವಿನ್ಯಾಸವೇ ವಿಶಿಷ್ಟ. ಬಿರುಬಿಸಿಲಿನ ವಿಜಯಪುರದ ಬೇಸಿಗೆಯಲ್ಲೂ ಇದರ ಒಳಾಂಗಣ ತಂಪಾಗಿರುತ್ತದೆ. ಎತ್ತರದ ಛಾವಣಿ, ಕಿಟಕಿಗಳ ವೈಜ್ಞಾನಿಕ ವಿನ್ಯಾಸ ಅಲ್ಲಿರುವ ತಣ್ಣಗಿನ ವಾತಾವರಣಕ್ಕೆ ಕಾರಣವಾಗಿದೆ.

ಕ್ರಿಶ್ಚಿಯನ್‌ ಅಧಿಕಾರಿಗಳ ಪ್ರಾರ್ಥನೆಗಾಗಿ, ಆಗಿನ ಮುಸ್ಲಿಂ ದೊರೆ ಆದಿಲ್ಶಾಹನು ಈ ಚರ್ಚ್‌ ಅನ್ನು ಕೊಡುಗೆಯಾಗಿ ನೀಡಿದನೆಂಬ ಪ್ರತೀತಿ ಇದೆ. ಅಂದಹಾಗೆ, ಈ ಆಂಗ್ಲಿಕನ್‌ ಚರ್ಚಿನಲ್ಲಿ ಈಗ ಕನ್ನಡದಲ್ಲೂ ಪ್ರಾರ್ಥಿಸುವ ಅವಕಾಶವಿದೆ. •

ಸುಭಾಸ ಯಾದವಾಡ

Advertisement

Udayavani is now on Telegram. Click here to join our channel and stay updated with the latest news.

Next