ಶಿರಸಿ: ಕಲಾವಿದರುಗಳಿಗೆ, ಸಾಹಿತಿಗಳಿಗೆ ನೀಡಲಾಗುವ ಮಾಸಾಶನವನ್ನು ರಾಜ್ಯ ಸರಕಾರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದು ಕಲಾವಿದರ ಬದುಕಿಗೆ ಒಂದಿಷ್ಟು ನೆರವಿನ ಊರುಗೋಲಾಗಲಿದೆ. ಸರಕಾರದ ನೂತನ ಆದೇಶದ ಪರಿಣಾಮ ಈವರೆಗೆ ಮಾಸಾಶನವನ್ನು ಪಡೆಯುತ್ತಿದ್ದ ಕಲಾವಿದರು, ಸಾಹಿತಿಗಳು 1500 ರೂ. ಬದಲಿಗೆ ಇನ್ಮುಂದೆ ಮಾಸಿಕ ಎರಡು ಸಾವಿರ ರೂ. ಪಡೆಯಲಿದ್ದಾರೆ.
ಬೇಡಿಕೆ ಈಡೇರಿಕೆ: ಕಳೆದ ಹಲವು ವರ್ಷಗಳಿಂದ ಮಾಸಾಶನ ಹೆಚ್ಚಳ ಮಾಡುವಂತೆ ಅನೇಕ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರಕಾರವನ್ನು ಆಗ್ರಹಿಸುತ್ತಲೇ ಇದ್ದವು. ಆದರೆ, ಬೇರೆ ಬೇರೆ ಕಾರಣ, ಆರ್ಥಿಕಹೊರೆಯನ್ನು ಮುಂದಿಟ್ಟು ಸರಕಾರ ಅನುಮೋದನೆ ನೀಡುತ್ತಿರಲಿಲ್ಲ. ಸರಕಾರದ ಮುಂದೆ ಪ್ರಸ್ತಾಪಿತ ಸಾಂಸ್ಕೃತಿಕ ನೀತಿಯಲ್ಲೂ ಈ ಹೆಚ್ಚಳಕ್ಕೆ ಪ್ರಸ್ತಾವನೆ ನೀಡಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಶಕ್ತ ಕಲಾವಿದರು ಹಾಗೂ ಸಾಹಿತಿಗಳಿಗೆ ವೃದ್ಧಾಪ್ಯದಲ್ಲಿ ನೆರವಾಗುವ ಕಾರಣದಿಂದ ಮಾಸಾಶನವನ್ನು ನೀಡುತ್ತಿತ್ತು.ಗೌರವಯುತವಾಗಿ ಬದುಕು ನಡೆಸಲು ಈ ಮಾಸಾಶನ ನೆರವಾಗುತ್ತಿತ್ತು. ಕೊಡುವುದು ಕೇವಲ 1500 ರೂ. ಸಾಕಾಗದೇ ಇದ್ದರೂ ಕನಿಷ್ಠ ಆರೋಗ್ಯ ನೆರವಿಗಾದರೂ ಅನುಕೂಲ ಆಗುತ್ತದೆ ಎಂದು ಪಡೆದುಕೊಳ್ಳುತ್ತಿದ್ದರು.
ಕಷ್ಟ ತಪ್ಪಿರಲಿಲ್ಲ: ಯೌವನದಲ್ಲಿ ರಂಗದಲ್ಲಿ ಮಿಂಚಿದ್ದವರು, ರಾಜನಾಗಿ ಮೆರೆದಿದ್ದವರು ವೃದ್ಧಾಪ್ಯದಲ್ಲಿ ಕಷ್ಟ ಅನುಭವಿಸುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಿದ್ದ ಅನೇಕರಿಗೆ ವೃದ್ಧಾಪ್ಯದಲ್ಲಿ ಬರೆಯಲಾಗದೇ ಆದಾಯ ಕೊರತೆ ಅನುಭವಿಸುತ್ತಿದ್ದರು. ಇಂಥವರಿಗೆ ನೆರವಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಶನದ ಮೂಲಕ ನೆರವಾಗುವ ಯತ್ನ ಮಾಡಿತ್ತು. ಯೋಜನೆ ಆರಂಭದಲ್ಲಿ ಮಾಸಿಕ 200, 300 ರೂ. ಪಡೆದವರೂ ಇದ್ದರು.
ದಿನದಿಂದ ದಿನಕ್ಕೆ ಏರಿಕೆಯಾದ ಬೆಲೆಗಳಿಗೆ ಸರಕಾರ ನೀಡುವ ಈ ಮೊತ್ತ ಏನಕ್ಕೂ ಸಾಲದು ಎಂಬ ಬೇಡಿಕೆಯ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದರು. 2013ರಲ್ಲಿ 1500 ರೂ.ಗೆ ಏರಿಸಲಾಗಿತ್ತು. ಇದೀಗ ಸರಕಾರಕ್ಕೆಕನ್ನಡ ಮತ್ತು ಸಂಸ್ಕೃತಿ ಇಲಾಖೆಯುಸಾಂಸ್ಕೃತಿಕ ನೀತಿಯ ಅನುಮೋದನೆಯಂತ ಮಂಡಿಸಿದ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಕ್ಕಿದೆ. ಮಾಸಿಕ 500 ರೂ. ಹೆಚ್ಚಳ ಮಾಡಿ
ಆದೇಶ ಹೊರಡಿಸಲಾಗಿದೆ. ಮಾಸಿಕ 1500ರಿಂದ 2000 ರೂ.ಗೆ ಏರಿಸಿದಾಗ ಸರಕಾರಕ್ಕೆ 8,21,82,000 ರೂ. ಹೆಚ್ಚುವರಿ ಹೊರೆ ಬೀಳಲಿದೆ. ವರ್ಷಕ್ಕೆ 6000ಸಾವಿರ ರೂ.ಗಳನ್ನು. 13,697 ಕಲಾವಿದರು, ಸಾಹಿತಿಗಳು ಪಡೆದುಕೊಳ್ಳಲಿದ್ದಾರೆ. ಸರಕಾರದ ಅಧೀನ ಕಾರ್ಯದರ್ಶಿ ಪಿ.ಎಸ್. ಮಾಲತಿ ಅವರು ಕಳೆದ 16ರಂದು ಈ ಆದೇಶ ಹೊರಡಿಸಿದ್ದಾರೆ.
ಇನ್ನೂ ಅರ್ಜಿಗಳಿವೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಂದೆ ಪ್ರತಿ ದಿನವೂ ಮಾಸಾಶನಕ್ಕೆ ಅರ್ಜಿ ಬರುತ್ತಲೇ ಇವೆ.ಇಲಾಖೆ ಮಾಹಿತಿ ಪ್ರಕಾರ ವರ್ಷಕ್ಕೆ 25-30 ಸಾವಿರ ಅರ್ಜಿಗಳು ಬರಲಿವೆ. ಆದರೆ, ಸರಕಾರದ ಹಣಕಾಸಿನ ಮಿತಿ ಆಧರಿಸಿ ಅರ್ಜಿಗಳನ್ನು ಪರಿಶೀಲಿಸಿ ಮಾಸಾಶನಕ್ಕೆ ಅನುಮೋದನೆ ನೀಡಲಾಗುತ್ತಿದೆ. ಅನೇಕ ಕಲಾವಿದರು, ಸಾಹಿತಿಗಳು ಇಲಾಖೆಬಾಗಿಲಿಗೆ ಅಲೆಯುವುದೂ ಆಗಿದೆ, ಇನ್ನೂ ಸಿಕ್ಕಿಲ್ಲ ಎಂದು ದೂರುವವರೂ ಇದ್ದಾರೆ. ಸರಕಾರ ಈ ಅರ್ಜಿಗಳಿಗೂ ಮಾನ್ಯ ನೀಡಬೇಕು, ಎಲ್ಲ ಅರ್ಹ ಸಾಹಿತಿ, ಕಲಾವಿದರಿಗೂ ನೆರವು ಸಿಗಬೇಕು ಎಂಬುದು ಹಕ್ಕೊತ್ತಾಯವಾಗಿದೆ.