ಮಂಗಳೂರು: ಮಂಗಳೂರು ನಗರದಲ್ಲಿ ಬಿರುಸಿನ ಮಳೆ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಇಲ್ಲಿನ ಕಸಬಾ ಬೆಂಗ್ರೆ ಪ್ರದೇಶದ ನದಿ ತೀರದ ಕೆಲವು ಭಾಗಗಳಲ್ಲಿಕೃತಕ ನೆರೆ ಆವರಿಸಿದೆ. ಇದೇ ಭಾಗದಲ್ಲಿ ಸಾಗರಮಾಲ ಯೋಜನೆಯ ಕೋಸ್ಟಲ್ ಬರ್ತ್ ಕಾಮಗಾರಿಯ ಕೆಳಭಾಗದಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ಮತ್ತು ಸಹರಾ ಶಾಲೆಯ ಆವರಣ ಗೋಡೆಯ ಒಳಭಾಗಗಳಲ್ಲಿ ಮಳೆ ನೀರುನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಯೋಜನೆಯ ಕಡೆಯಿಂದ ನೀರು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೇ ಇರುವುದು ಇದಕ್ಕೆ ಕಾರಣ. ಸದ್ಯಕ್ಕೆ ಎತ್ತರದಲ್ಲಿರುವ ಕಾಮಗಾರಿಯ ಪಕ್ಕ ನೀರು ಹೋಗಲು ಮಾಡಿರುವ ವ್ಯವಸ್ಥೆ ತಗ್ಗು ಪ್ರದೇಶದ ನೀರು ಸರಿಯಾಗಿ ಹೋಗದೆ ಅಲ್ಲಲ್ಲಿ ನೀರು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ವಾರಗಳ ಹಿಂದೆ ಈ ಬಗ್ಗೆ ಪೋರ್ಟ್ ಸಹ ಕಾರ್ಯ ನಿರ್ವಾಹಕ ಪ್ರವೀಣ್ ಅವರ ಗಮನಕ್ಕೆ ನೀಡಿದ್ದು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ತಿಳಿಸಲಾಗಿದೆ. ನೀರು ನಿಲ್ಲುವ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಕ್ಕೆ ಮರಳು ಹಾಕಿ ಕೊಡುವುದಾಗಿ ತಿಳಿಸಿದ್ದಾರೆ ಮತ್ತೆ ಪೂರ್ಣಪ್ರಮಾಣದಲ್ಲಿ ನೀರು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದ್ದು ಮುಂದೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜು.18 ರಂದು ತುಂಬೆ ಅಣೆಕಟ್ಟಿನ ನೀರಿನ ಪ್ರಮಾಣ ಏರಿಕೆಯಾಗಿದ್ದು, ಎಲ್ಲಾ ಗೇಟ್ ತೆರೆದು ನೀರು ಬಿಡಲಾಗಿದೆ. ಅದೇರೀತಿ ಪಾವೂರು ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರೆದಿದ್ದು ನದಿಭಾಗದ ಪ್ರದೇಶಗಳಲ್ಲಿ ನೀರು ಹೆಚ್ಚಾಗಿದೆ. ಈಗಾಗಲೇ ಮಳೆನೀರು ನಿಲ್ಲುವ ಜಾಗಗಳಿಗೆ ಅಣೆಕಟ್ಟಿನ ನೀರು ಬಿಟ್ಟ ಬಳಿಕ ಜು.19 ರಂದು ನದಿ ಭಾಗದ ಬೆಂಗ್ರೆ ಪ್ರದೇಶ ಮುಳುಗುವ ಭೀತಿಯಲ್ಲಿದೆ ಈ ಹಿನ್ನೆಯಲ್ಲಿ ಕೋಸ್ಟಲ್ ಬರ್ತ್ ಕಾಮಗಾರಿಯನ್ನು ತಡೆ ಹಿಡಿದು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಜನರ ನೆರವಿಗೆ ಬರಬೇಕಾಗಿ ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ತಯ್ಯೂಬ್ ಬೆಂಗ್ರೆ ಮತ್ತು ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷ ಹನೀಪ್ ಬೆಂಗ್ರೆ ಆಗ್ರಹಿಸಿದ್ದಾರೆ