Advertisement

ಉಡುಪಿಯಲ್ಲಿ ಅಂಗವಿಕಲರಿಗೆ ದೊರೆಯಲಿವೆ ಕೃತಕ ಅವಯವಗಳು

11:48 PM May 08, 2019 | sudhir |

ಉಡುಪಿ: ಉಡುಪಿ ಜಿಲ್ಲೆಯ ಅಂಗವಿಕಲರು ಕೃತಕ ಆವಯವಗಳ ಹುಡುಕಾಟಕ್ಕೆ ಶ್ರಮ ಪಡಬೇಕಿಲ್ಲ, ಖಾಸಗಿಯಲ್ಲಿ ದುಬಾರಿ ದರ ತೆರುವ ಆವಶ್ಯಕತೆಯಿಲ್ಲ. ಇವರು ಸಾಮಾನ್ಯರಂತೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅನುಕೂಲವಾಗುವಂತಹ ಕೃತಕ ಅವಯವಗಳು ಇನ್ನು ಉಡುಪಿಯಲ್ಲಿಯೇ ದೊರೆಯಲಿವೆ. ಪ್ರಸ್ತುತ ಉಡುಪಿ ರೆಡ್‌ಕ್ರಾಸ್‌ ಭವನದಲ್ಲಿ ಈ ಕೃತಕ ಆವಯವ ತಯಾರಿಕೆ ಮತ್ತು ಜೋಡಣಾ ಕೇಂದ್ರ ಮೇ 8ರಂದು ಆರಂಭವಾಗಿದೆ.

Advertisement

20 ಲಕ್ಷ ರೂ. ವೆಚ್ಚದ ಕೇಂದ್ರ

ಸುಮಾರು 20 ಲ.ರೂ. ವೆಚ್ಚದಲ್ಲಿ ಆರಂಭವಾಗಿರುವ ಈ ಕೇಂದ್ರದಲ್ಲಿ ಮೊದಲ ಹಂತದಲ್ಲಿ ಕಾಲಿಗೆ ಸಂಬಂಧಿಸಿದ ಕೃತಕ ಅವಯವಗಳ ತಯಾರಿಕೆ ಮತ್ತು ಜೋಡಣೆ ನಡೆಯುತ್ತಿದೆ. ಈ ಅವಯವಗಳನ್ನು ಜೋಡಣೆಗೆ ಮುಂಚೆ ಅವುಗಳನ್ನು ಬಳಕೆ ಬಗ್ಗೆ ಫ‌ಲಾನುಭವಿಗಳಿಗೆ ಸೂಕ್ತ ತರಬೇತಿ ನೀಡಿ ಅನಂತರ ಅವುಗಳನ್ನು ಜೋಡಿಸಲಾಗುವುದು. ಇದರಿಂದ ಅಂಗವಿಕಲರು ಸಾಮಾನ್ಯರಂತೆ ಓಡಾಡಲು ನೆರವಾಗಲಿದೆ.

ಈ ಕೇಂದ್ರದಲ್ಲಿ ಉಡುಪಿ ಜಿಲ್ಲೆಯ ಅಂಗವಿಕಲರಿಗೆ ಮಾತ್ರ ಕೃತಕ ಅವಯವ ನೀಡಲಿದ್ದು, ಬಿಪಿಎಲ್ಕಾರ್ಡ್‌ ಹೊಂದಿದವರಿಗೆ ಸಂಪೂರ್ಣ ಉಚಿತವಾಗಿ ಮತ್ತು ಇನ್ನಿತರರಿಗೆ ರಿಯಾಯಿತಿ ದರದಲ್ಲಿ ಈ ಅವಯವಗಳನ್ನು ತಯಾರಿಸಿ ಕೊಡಲಾಗುವುದು. ಇದುವರೆಗೆ ಮಣಿಪಾಲದ ಕೆಎಂಸಿ, ಮಂಗಳೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಇಂತಹ ಆವಯವಗಳು ದೊರೆಯುತ್ತಿತ್ತು.

ಮೊಣಕಾಲು ಮಡಚಲು ಅಗತ್ಯವಿರುವ ಕೃತಕ ಕಾಲು, ಮೊಣಕಾಲಿನಿಂದ ಕೆಳಗೆ ಅಳವಡಿಸಬಹುದಾದ ಕೃತಕ ಕಾಲುಗಳನ್ನು ಪ್ರಸ್ತುತ ತಯಾರಿಸಲಾಗುತ್ತಿದೆ. ಈಗಾಗಲೇ 8 ಕಾಲುಗಳನ್ನು ತಯಾರಿಸಲಾಗಿದೆ. 80 ಲಕ್ಷ ರೂ. ವೆಚ್ಚದಲ್ಲಿ ಉನ್ನತೀಕರಣ.

Advertisement

ಜಿಲ್ಲೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಮನೆ ಮನೆ ಭೇಟಿ ಮೂಲಕ ಅಂಗವಿಕಲರನ್ನು ಗುರುತಿಸುವ ಕೆಲಸ ಮಾಡಿದ್ದು, ಸುಮಾರು 17,000 ಅಂಗವಿಕಲರನ್ನು ಗುರುತಿಸಲಾಗಿದೆ. ಇವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ವಿವಿಧ ಸ್ವೋದ್ಯೋಗ ತರಬೇತಿ, ಪುರ್ನವಸತಿ ಕಾರ್ಯಕ್ರಮ ನಡೆಸಲಾಗುತ್ತಿದೆ, ಮುಂದಿನ ಹಂತದಲ್ಲಿ ಈ ಕೃತಕ ಅವಯವ ತಯಾರಿಕೆ ಮತ್ತು ಜೋಡಣಾ ಕೇಂದ್ರದಲ್ಲಿ, ಕೈ, ಬೆನ್ನು ಸೇರಿದಂತೆ ದೇಹದ ಇತರ ಎಲ್ಲ ಭಾಗಗಳಿಗೆ ಅಗತ್ಯವಿರುವ ಕೃತಕ ಅವಯವ ತಯಾರಿಸಲು ಈ ಕೇಂದ್ರವನ್ನು 80 ಲಕ್ಷರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು ಎಂದು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯ ಬಸ್ರೂರು ರಾಜೀವ್‌ ಶೆಟ್ಟಿ ತಿಳಿಸಿದರು.

ಈ ಕೃತಕ ಅವಯವ ತಯಾರಿಕಾ ಕೇಂದ್ರದಲ್ಲಿ ಹಿಂದೆ ಕೆಎಂಸಿಯಲ್ಲಿ ಕೃತಕ ಅವಯವ ತಯಾರಿಕೆಯಲ್ಲಿ ಅಪಾರ ಅನುಭವ ಹೊಂದಿ ನಿವೃತ್ತರಾಗಿರುವ, ಕೃತಕ ಅವಯವ ತಯಾರಿಕೆ ಎಂಜಿನಿಯರ್‌ ಸತೀಶನ್‌ ಮತ್ತು ಪದ್ಮನಾಭ ಆಚಾರ್ಯ ಕಾರ್ಯ ನಿರ್ವಹಿಸಲಿದ್ದಾರೆ. ಅಗತ್ಯ ಕಚ್ಚಾ ವಸ್ತು ಮತ್ತು ಬಿಡಿಭಾಗಗಳು ಪುಣೆಯಿಂದ ಕಡಿಮೆ ದರದಲ್ಲಿ ಸರಬರಾಜಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next