Advertisement

Special Interview: ಕೃತಕ ಬುದ್ಧಿಮತ್ತೆಯೇ ಆಧುನಿಕ ಜಗತ್ತಿನ ಭವಿಷ್ಯ

02:48 PM Oct 09, 2023 | Team Udayavani |

ಎತ್ತರದ ಕಾಯ, ಉದ್ದದ ಮುಖ, ಬಿಳಿಯ ಗಡ್ಡ, ಹೆಗಲಲ್ಲಿ ಒಂದು ಜೋಳಿಗೆಯನ್ನು ಏರಿಸಿ  ಜನಸಾಮಾನ್ಯರಂತೆ, ತಮ್ಮ ಪಾಡಿಗೆ ತಾವು ಇರುವವರಿವರು. ಯಾರೇ ಆದರೂ ಮೊದಲಿಗೆ ಇವರನ್ನು ನೋಡಿದರೆ ಎಲ್ಲರಂತೆ ಸಾಮಾನ್ಯ ಎಂದು ಭಾವಿಸುವುದು ಸಹಜ.  ಇದೇ ವ್ಯಕ್ತಿ ಗಣಕ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಯನ್ನು ತಿಳಿದರೆ “ಇವರು ಅವರಾ?’ ಎಂದು ಆಶ್ಚರ್ಯಗೊಳ್ಳದೆ ಇರುವುದಿಲ್ಲ. ಇಂದು ನಾವು ಕಂಪ್ಯೂಟರ್‌ನಲ್ಲಿ ಕನ್ನಡ ಅಕ್ಷರಗಳನ್ನು ಟೈಪ್‌ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಅಡಿಪಾಯ ಹಾಕಿದವರು ಕೆ.ಪಿ.ರಾವ್‌.  ಬಹುಶ್ರುತ ವಿದ್ವಾಂಸರಾಗಿರುವ ಕಿನ್ನಿಕಂಬಳ ಪದ್ಮನಾಭ ರಾವ್‌ ಅವರು ಕೆ.ಪಿ.ರಾವ್‌ ಎಂದೇ  ಪರಿಚಿತರು. ತಂತ್ರಜ್ಞಾನದಿಂದ, ರಸಾಯನಶಾಸ್ತ್ರದ ವರೆಗೂ ಇವರು ತನ್ನನ್ನು ವಿಸ್ತರಿಸಿಕೊಂಡಿದ್ದಾರೆ. ಲಿಪಿ ತಜ್ಞರಾಗಿರುವ ಕೆ.ಪಿ.ರಾವ್‌  ಇಂದಿಗೂ ಲಿಪಿಯ ವಿವಿಧ ಸಂಶೋಧನೆಗಳಲ್ಲಿ  ತೊಡಗಿಕೊಂಡಿದ್ದಾರೆ. ಉದಯವಾಣಿ ಯುವಿ ಫ್ಯೂಷನ್‌ನ 100ನೇ ಸಂಚಿಕೆಯ ಸಂದರ್ಭ  ಕನ್ನಡದ ಗಣಕ ಕ್ಷೇತ್ರ, ಭಾಷೆ, ಕೃತಕ ಬುದ್ಧಿಮತ್ತೆ, ಚಾಟ್‌ ಜಿಪಿಟಿ ಮುಂತಾದವುಗಳ ಕುರಿತು  ಅವರು ಮಾತನಾಡಿದ್ದಾರೆ.

Advertisement

content-img

1. ಭಾಷೆಯ ಇತಿಹಾಸದ ಪುಟಗಳು ಮತ್ತೆ ಮರುಕಳಿಸುತ್ತಿವೆ ಎಂದೆನಿಸುತ್ತದೆಯೇ? ಉದಾಹರಣೆಗೆ, ಭಾಷೆಯು ಮೊದಮೊದಲು ಮೌಖಿಕ ರೂಪದಲ್ಲಿತ್ತು. ಬಳಿಕ ಲಿಖಿತರೂಪಕ್ಕೆ ಅಭಿವೃದ್ಧಿ ಹೊಂದಿ  ಈಗ ಮತ್ತೆ ವಾಪಸಾಗುತ್ತಿದೆಯೇ? “ವಾಯ್ಸ ಮೆಸೇಜ್‌’ ಇತ್ಯಾದಿ.

ಭಾಷೆ ಯಾವುದು ಎನ್ನುವುದೇ ಒಂದು ದೊಡ್ಡ ಪ್ರಶ್ನೆ. ಸಂಗೀತ ಭಾಷೆಯೋ? ನಾದರೂಪ ಭಾಷೆಯೋ? ಶಬ್ದ ಮಾಡಿದರೆ ಅದು ಭಾಷೆಯೋ? ಅಥವಾ ಬರೆದರೆ ಭಾಷೆಯೋ? ಅದರ ಬಗ್ಗೆ ಹೇಳಲು ಪದಗಳೇ ಸಾಲದು. ಸಂಕ್ಷಿಪ್ತವಾಗಿ ಮತ್ತು ಸರಳವಾಗಿ ಹೇಳುವುದಾದರೆ, ಭಾಷೆ ಎಂದರೆ ನಮ್ಮ ಮೆದುಳು. ನಾವು ಬರೆದದ್ದನ್ನು ಓದಿರಬಹುದು, ನಡೆಯುತ್ತಿರುವುದನ್ನು ನೋಡುತ್ತಿರಬಹುದು, ಕೇಳುತ್ತಾ ಇರುವುದನ್ನು ಆಲಿಸುತ್ತಿರಬಹುದು. ಇವೆಲ್ಲವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಕ್ರೋಢೀಕರಿಸುವುದು ಮತ್ತು ಅದಕ್ಕೆ ಬೇಕಾದ ಪ್ರತಿಕ್ರಿಯೆಯನ್ನು ಹುಡುಕಿಕೊಳ್ಳುವುದು ಎಲ್ಲವೂ ನಡೆಯುವುದು ಮೆದುಳಿನಲ್ಲಿ. ಆದುದರಿಂದ ಮೆದುಳಿಗೆ ಯಾವುದು ಅರ್ಥವಾಗುತ್ತದೆಯೋ ಅದುವೇ ಭಾಷೆ. ನಾವೊಂದು ಶಬ್ದ ಮಾಡಿದರೆ ನಿಜವಾಗಿ ಅದಕ್ಕೆ ಏನೂ ಅರ್ಥವಿಲ್ಲದೆ ಇರಬಹುದು. ಆದರೆ ಅದೂ ಒಂದು ಭಾಷೆಯಾಗಬಹುದು. ಹೇಗೆಂದರೆ  ನಾವು ಯಾರಲ್ಲಿ  ವ್ಯವಹರಿಸುತ್ತಿದ್ದೇವೋ ಅವರ ಜತೆಗೆ ನಮಗೆ ಮೊದಲೇ ತಿಳಿವಳಿಕೆ ಇದ್ದರೆ, ನಾವು ಮಾಡುತ್ತಿರುವ ಶಬ್ದವೂ ಒಂದು ಭಾಷೆಯಾಗಬಲ್ಲದು.

ಕ್ರಿ.ಪೂ. 18-19ನೇ ಶತಮಾನದಲ್ಲಿಯೇ “ಉದ್ಗಾರ ಮತ್ತು ಉದ್ಘೋಷ’ ಎಂಬ ಭಾಷೆಯ ಎರಡು ಪ್ರಕಾರಗಳನ್ನು ಪರಿಚಯಿಸಲಾಗಿತ್ತು. ಅದರಂತೆ ನಾವು ಕೆಮ್ಮುವುದು ಅಥವಾ  ಕೈ ಚಪ್ಪಾಳೆ ತಟ್ಟುವುದೂ ಒಂದು ರೀತಿಯ ಉದ್ಗಾರ. ಅದಕ್ಕೆ ಅರ್ಥ ಇರಬೇಕೆಂದಿಲ್ಲ. ಆದರೆ ಯಾವಾಗ ಅದು ಹೇಳಿದವನಿಗೆ ಮತ್ತು ಕೇಳಿದವನಿಗೆ ಸಮಾನವಾಗಿ ಅರ್ಥವಾಗುತ್ತದೆಯೋ ಆಗ ಅದು ಭಾಷೆ ಎಂದಾಗುತ್ತದೆ. ಭಾಷೆ ಎಂದರೆ ಸಂಭಾಷಣೆಯ ಒಂದು ವಿಧಾನ ಅಥವಾ ಸಂವಹನದ ಒಂದು ಸಾಧ್ಯತೆ. ಮಾತಿನ ಒಂದು ಅನನುಕೂಲ ಎಂದರೆ ಅದು ಗಾಳಿಯಲ್ಲಿ ಹಾರಿಹೋಗುತ್ತದೆ. ಒಬ್ಬರು  ಮಾತಾಡಿದ್ದು ಮತ್ತೂಂದು ಘಳಿಗೆಯಲ್ಲಿ ಹಾಗಿರುವುದಿಲ್ಲ. ಅವರು ಅದನ್ನು ಹೇಳಲೇ ಇಲ್ಲ ಅಂತಲೇ ಹೇಳಬಹುದು (ಈಗಿನ ರೆಕಾರ್ಡಿಂಗ್‌ ಪದ್ಧತಿಯನ್ನು ಹೊರತುಪಡಿಸಿ). ಆದರೆ ಬರಹ ಹಾಗಲ್ಲ, ಹೇಳಿದ ಮಾತು ಉಳಿಯದೇ ಇದ್ದರೂ ಬರೆದದ್ದು ಉಳಿಯುತ್ತದೆ. ಉದಾಹರಣೆಗೆ ಎಂದೋ ಬರೆದ ಅಶೋಕನ ಶಾಸನಗಳು  ಇಂದಿಗೂ ಉಪಯೋಗವಾಗುತ್ತಿವೆ. ಅಶೋಕನು ಆಡಿದ ಮಾತುಗಳು ಸಿಗುವುದಿಲ್ಲ ಆದರೆ ಅವೆಲ್ಲವೂ ಲಿಖೀತ ರೂಪದಲ್ಲಿವೆ. ಕಾಳಿದಾಸನ ನಾಟಕಗಳೂ ಅಷ್ಟೇ.

Advertisement

ಇವೆಲ್ಲವು ಬರಿಯ ಮಾತಿನ ರೂಪದಲ್ಲಿಯೇ ಇರುತ್ತಿದ್ದರೆ ಯಾವಾಗಲೋ ಕಳೆದು ಹೋಗುತ್ತಿತ್ತೋ ಏನೋ. ಬಹುಶಃ ವೇದಗಳೊಂದೇ ಬಾಯಿಂದ ಬಾಯಿಗೆ ಬಂದು ಉಳಿದಿರುವಂತಹದ್ದು. ಅವುಗಳು ಆಗಿನ ಜಾನಪದ ಸಾಹಿತ್ಯದ ಸಂಗ್ರಹವಾದರೂ ಅವುಗಳನ್ನು ಪಠಿಸುವ ಕ್ರಮ, ವಿಚಾರ ಮಾಡುವ ಕ್ರಮಗಳಿಂದಾಗಿ ಇಂದಿಗೂ ಉಳಿದಿದೆ. ಅದಕ್ಕೆ ಆರು ಬೇರೆ ಬೇರೆ ಕ್ರಮಗಳನ್ನು ನೆನಪಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದರಿಂದ ಮಾತಿನಲ್ಲಿ ಇರುವಂತಹ ಕೆಲವು ಗುಣಗಳು ಬೇರೆ ಯಾವ ರೀತಿಯಲ್ಲೂ ಉಳಿಯವು. ನಾವು ಗಟ್ಟಿಯಾಗಿ ಹೇಳಿದ್ದೇವೆಯೋ, ಮೃದುವಾಗಿ ಹೇಳಿದ್ದೇವೆಯೋ ಅಥವಾ ವೇಗವಾಗಿ ಹೇಳಿದ್ದೇವೆಯೋ, ನಿಧಾನವಾಗಿ ಹೇಳಿದ್ದೇವೆಯೋ ಅಥವಾ ನಾವು ಹೆಣ್ಣು ಧ್ವನಿಯಲ್ಲಿ ಹೇಳಿದ್ದೇವೆಯೋ, ಗಂಡು ಧ್ವನಿಯಲ್ಲಿ ಹೇಳಿದ್ದೇವೆಯೋ ಎಂಬುದೆಲ್ಲ ಮಾತಿನಲ್ಲಿ ಹೇಳಿದರೆ ಉಳಿಯುವುದಿಲ್ಲ. ಅದಕ್ಕಾಗಿ ಬರಹ ಅತೀ ಅಗತ್ಯ. ಆದರೆ ಈಗ ಬರಹದ ಮೂಲ ರೂಪವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ.

ಇನ್ನೂ ಒಂದು ದೊಡ್ಡ ಸಮಸ್ಯೆ ಎಂದರೆ ಎಲ್ಲ ಭಾಷೆಗಳು ಕೂಡ ಆಯಾ ಕಾಲಕ್ಕೆ ಅಥವಾ ಆ ಸನ್ನಿವೇಶದಲ್ಲಿ  ಪ್ರಚಲಿತವಾಗಿರುವಂತಹ ಜನರ ಮಧ್ಯದಲ್ಲಿ ಬೆರೆತು ಆ ಕಾಲದ ಸಂವಹನಕ್ಕೆ ಸಂವಹನ ಸಾಧ್ಯವಿರುವಂತಹ ಶಬ್ದಗಳನ್ನು ಬಳಸಿಕೊಂಡಿದೆ. ಅದನ್ನು ಲೋಕಭಾಷೆ ಎಂದು ಪಾಣಿನಿಯವರು ಕರೆದಿದ್ದಾರೆ. ವೇದಗಳ ಭಾಷೆ ಬೇರೆ, ಲೋಕಭಾಷೆ ಬೇರೆ. ಕೆಲವು ಸ್ವರಗಳು ಮಾತನಾಡಲು ಬರುತ್ತವೆ, ಆದರೆ ಬರೆಯಲು ಬರುವುದಿಲ್ಲ. ಉದಾಹರಣೆಗೆ  ಒಬ್ಬರು ಚಪ್ಪಾಳೆ ತಟ್ಟಿದ್ದನ್ನು, ಅವರು ಚಪ್ಪಾಳೆ ತಟ್ಟಿದರು ಎಂದು ಬರೆಯಬಹುದಷ್ಟೇ ಹೊರತು ಅದರ ಸತ್ಯತೆಯನ್ನು ಬರೆಯಲು ಅಸಾಧ್ಯ. ಒಂದು ನಾಯಿ ಬೊಗಳಿದರೆ ಅದು ಬೊಗಳಿತು ಎನ್ನಬಹುದು. ಆದರೆ ಹೇಗೆ ಬೊಗಳಿತು ಎನ್ನಲು ಬೇರೆಯೇ ಭಾಷೆ ಬೇಕು. ಅಂತಹ ಸ್ವರಗಳನ್ನು  ಬರೆದಿ ಡಲೂ ಸಾಧ್ಯವಿಲ್ಲ ಅದುದರಿಂದ ಮಾತು ಕಾಲಕಾಲಕ್ಕೆ ಬದಲಾಗುತ್ತದೆ, ಅದರ ಮೂಲ ಸ್ವರೂಪದಲ್ಲಿಯೇ ಉಳಿಯವು. ಎಂದಿದ್ದರೂ  ಮಾತಿಗಿರುವಂತಹ ಶಕ್ತಿ ವಿಶೇಷ.

ವಾಯ್ಸ್ ಮೆಸೇಜ್‌ಗಳೂ ಸಮಸ್ಯೆಗಳನ್ನು ಎದುರಿಸುತ್ತವೆ. ಅದುವೇ ಅನಾಮಧೇ ಯತೆ. ಸ್ವರಗಳಲ್ಲಿ  ಸಾಕಷ್ಟು ಉಪಯೋಗಗಳು ಹಾಗೂ ನ್ಯೂನತೆಗಳಿವೆ. ಕೆಲ ವೊಮ್ಮೆ ವಾಯ್ಸ ಮೆಸೇಜ್‌ಗಳಲ್ಲಿ ಹೇಳಿದ್ದು ಅರ್ಥವಾಗದೆ ಇದ್ದರೆ ಹೇಳಿದ್ದನ್ನು ಬರೆಯಲೇಬೇಕು.  ವಾಯ್ಸ ಮೆಸೇಜ್‌ಗಳೂ ಪರಿಪೂರ್ಣವಲ್ಲ. ಅದನ್ನು ನಾವು ಈ ಎಲೆಕ್ಟ್ರಾನಿಕ್‌ ರೂಪಗಳಲ್ಲಿ ಬಳಸುತ್ತಿದ್ದರೂ ಅದೆಷ್ಟು ಸತ್ಯ, ವ್ಯಾಪಕ ಎನ್ನಲು ಆಗದು. ಆದರೆ ನಾವು ಅದನ್ನೇ ಬರೆದರೆ, ಭಾಷೆ ತಿಳಿದವರಿಗೆ ಅರ್ಥಮಾಡಿಸಲು ಸುಲಭ.

2. ಕನ್ನಡ ಗಣಕ ಕ್ಷೇತ್ರವು ಭವಿಷ್ಯದಲ್ಲಿ ಇನ್ನೂ ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆಯೇ?

ಸಂಶಯವೇ ಇಲ್ಲ. ಹೇಗೆ ಗಣಕಯಂತ್ರಗಳಲ್ಲಿ ಅಭಿವೃದ್ಧಿಯಾಗುತ್ತದೋ ಹಾಗೆಯೇ ಗಣಕ ಭಾಷೆಯಲ್ಲೂ ಅಭಿವೃದ್ಧಿ ಖಚಿತ. ಆದರೆ ಗಣಕಯಂತ್ರಗಳ ಉಪಯೋಗಗಳು ಮೊದಲಿಗಿಂತ ಎಷ್ಟೋ ವೇಗವಾಗಿ ಸುಧಾರಿಸುತ್ತಿವೆ. ಇದು ಆಧುನಿಕ ಕೃತಕಬುದ್ಧಿಮತ್ತೆಯ ಕಾಲ. ಕಂಪ್ಯೂಟರ್‌ಗೆ ಈಗ ಬಂದಿರುವ ಈ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನಿಂದ ಒಂದು ಹೊಸ ರೀತಿಯ ಬುದ್ಧಿ ಬಂದಿದೆ.  ಮೊದಲೆಲ್ಲ ಒಂದು ಸಮಯದಲ್ಲಿ ಕಂಪ್ಯೂಟರ್‌ಗೆ ಒಂದು ಚಿತ್ರ ನೋಡಿದರೆ ಅದಕ್ಕೆ ಬರೀ ಬಿಟ್‌ಗಳು, ಬಣ್ಣಗಳು ಮತ್ತು ಆಕಾರಗಳನ್ನು ಹೊರತುಪಡಿಸಿ ಉಳಿದದ್ದು ಏನೂ ಅರ್ಥವಾಗುತ್ತಿರಲಿಲ್ಲ. ಆದರೆ ಇಂದು ಎಐ ಬಂದ ಮೇಲೆ ಬಿಟ್‌ಗಳ ಜತೆಗೆ ಒಂದು ಚಿತ್ರದಲ್ಲಿ ಯಾರಿದ್ದಾರೆ, ಅವರು ಏನು ಮಾಡುತ್ತಿದ್ದಾರೆ? ಹೇಗೆ ಕಾಣುತ್ತಿದ್ದಾರೆ ಎಂಬುದನ್ನು ಗೊತ್ತು ಮಾಡಿಕೊಳ್ಳುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಈಗೀಗ ಈ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅನ್ನು  ಬರವಣಿಗೆಗಾಗಿ ಉಪಯೋಗಿಸುತ್ತಿರುವುದರಿಂದ ಇದು ಭವಿಷ್ಯದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ನಾವು ಈಗ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅನ್ನು “ಸಮಗ್ರ ಭಾಷಾ ಮಾದರಿ’ಗಳೆಂದು ಕರೆಯುತ್ತೇವೆ. ಇದರ ಅರ್ಥ ಗಣಕ ಜಗತ್ತಿನಲ್ಲಿ ಈಗಾಗಲೇ ಅಸಂಖ್ಯಾಕ ಗ್ರಂಥಗಳು ಅಥವಾ ಮಾಹಿತಿಗಳು ಸೇರಿಕೊಂಡಿವೆ. ಇದನ್ನು ಯಾವಾಗಲಾದರೂ, ಯಾರಾದರೂ ತಮ್ಮ ಬಳಕೆಗೆ ಉಪಯೋಗಿಸಿ ಕೊಳ್ಳಬಹುದು. ಹಾಗಾಗಿ ಭವಿಷ್ಯದಲ್ಲಿ ಇದೇ ಮೇಲಗೈ ಸಾಧಿಸಲಿದೆ.

3. ಭಾಷಾ ಸ್ವರೂಪದಲ್ಲಿನ ಬದಲಾವಣೆ ಭಾಷೆಯ ಬೆಳವಣಿಗೆಗೆ ವಿಷಮವಾಗಿ ಪರಿಣಮಿಸಬಹುದೇ?

ಮಗುವಿನ ಅಳು ಎನ್ನುವುದು ಎಲ್ಲ ಕಡೆ ಒಂದೇ ರೀತಿ ಎಂದುಕೊಂಡಿದ್ದೆ. ಬೇರೆ ಬೇರೆ ಭಾಷೆ ಮಾತನಾಡುವ ಮಕ್ಕಳು ಅಳುವುದು ಒಂದೇ ರೀತಿ ಎಂದು ಭಾವಿಸಿದ್ದೆ. ಆದರೆ ಈಗಿನ ಸಂಶೋಧನೆಗಳು ಇದನ್ನು ಸುಳ್ಳಾಗಿಸಿವೆ. ಸಂಶೋಧನೆಗಳ ಪ್ರಕಾರ ಮಗುವಿನ ಅಳುವಿಗೂ, ಮಗುವಿನ ಮಾತೃ ಭಾಷೆಗೂ ಸಂಬಂಧವಿದೆ. ಮಗುವಿನ ಮೊದಲ ಅಳು ಅದರ ತಾಯಿ ಯಾವ ಭಾಷೆಯನ್ನು ಮಾತನಾಡುತ್ತಾಳ್ಳೋ ಅದೇ ಭಾಷೆಯ ಗತಿಯಲ್ಲಿ ಇರುತ್ತದಂತೆ. ಅಂದರೆ ಇದನ್ನು ಬಹುಶಃ ಮಗು ಗರ್ಭಾವಸ್ಥೆಯಲ್ಲೇ ಕಲಿ ಯಬಹುದು. ಇದರಿಂದ ಮಗು ಹುಟ್ಟಿದ ಅನಂತರ ಭಾಷೆಯನ್ನು ಕಲಿಯುವುದಲ್ಲ, ಬದಲಾಗಿ ಹುಟ್ಟುವ ಮೊದಲೇ ತಾಯಿಯ ಗರ್ಭದಲ್ಲಿರುವಾಗಲೇ ಅದನ್ನು ಗ್ರಹಿಸುತ್ತದೆ. ಮಗು ಹುಟ್ಟಿದ ಮೇಲೆ ಒಂದು ವರ್ಷ ಮೂರು ತಿಂಗಳಾಗುವವರೆಗೆ ಮಗು ಒಂದು ರೀತಿಯಲ್ಲಿ “ವಿಶ್ವದ ಪ್ರಜೆ’ಯಂತೆ. ಯಾವ ಭಾಷೆಯನ್ನೂ  ಕಲಿಸ ಬಹುದು, ಶೀಘ್ರವಾಗಿ ಕಲಿತುಬಿಡುತ್ತದೆ. ಮಗು ತಾಯಿಯಿಂದ ಹೆಚ್ಚು ಭಾಷೆಯನ್ನು ಕಲಿಯುತ್ತದೆ. ಆದರೆ ಬರೀ ತಾಯಿಯಿಂದ ಮಾತ್ರವೇ ಅಲ್ಲ. ತನ್ನ ಸುತ್ತಮುತ್ತಲಿನ ಪರಿಸರದಿಂದ ಕೂಡ ಕಲಿಯುತ್ತದೆ. ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ  ಮಗು ಕಲಿಕೆಯೆಡೆಗೆ ತನ್ನನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತದೆ. ಇತ್ತೀಚೆಗೆ ನಡೆದ ಒಂದು ಸಂವಾದದಲ್ಲಿ ವಿಶ್ವದ ಅತೀ ದೊಡ್ಡ ವಿದ್ವಾಂಸರ ಮಧ್ಯೆ ಒಂದು ಚರ್ಚೆಯಾಯಿತು. ಭಾಷಾ ವಿಜ್ಞಾನಿ, ಪಾಣಿನಿಯ ಪರಮಭಕ್ತ ಚಾಮಿÕ$R ಮತ್ತು ಮೊಟ್ಟ ಮೊದಲಿಗೆ “ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌’ ಎಂಬ ಶಬ್ದವನ್ನು ಕಂಡುಹಿಡಿದ  ಮಾರ್ವಿನ್‌ ಮಿನ್ಸಿ$R ಅವರ ಮಧ್ಯೆ.  ಮಾರ್ವಿನ್‌ ಮಿನ್ಸಿ$R ಪ್ರಕಾರ ಭಾಷೆ ಎನ್ನುವಂತಹದ್ದು ಒಂದು ಮನುಷ್ಯನ ನಡವಳಿಕೆಯ ಒಂದು ಕ್ರಮ ಅಥವಾ ಉದ್ಗತಿ ಹೊರತು ಅದು ಎಲ್ಲಿಯೂ ಸ್ವಾಭಾವಿಕವಾಗಿ ಹುಟ್ಟುವುದಿಲ್ಲ.

ಮಗು ಹುಟ್ಟುವಾಗ ಸ್ವಚ್ಛ ಖಾಲಿ ಹಾಳೆಯಂತಿರುತ್ತದೆ. ಅದು ತಾಯಿ ಹಾಗೂ ಪರಿಸರದಿಂದ ಅಥವಾ ಸ್ವತಃ ಕೇಳಿಕೊಂಡು, ಒಂದರಿಂದ ಒಂದು ಅಭಿವೃದ್ಧಿಪಡಿಸಿಕೊಂಡು, ಸುಧಾರಿಸಿಕೊಂಡು ಕಲಿಯುತ್ತದೆ. ಭಾಷೆ ಎನ್ನುವಂತಹದ್ದು ಕೂಡ ಇಂತಹದ್ದೇ ಒಂದು ಅಭ್ಯಾಸವಷ್ಟೇ. ಆದರೆ ಚಾಮಿÕ$R ಇದನ್ನು ಒಪ್ಪುವುದಿಲ್ಲ. ಚಾಮ್ಸ್ಕಿ ಅವರ ಪ್ರಕಾರ, ಭಾಷೆ ಎನ್ನುವುದು ಅನುವಂಶೀಯವಾಗಿ ಬರುವುದು. ಇದಕ್ಕೆ ಅವರು ಒಂದು ಸುಂದರ ಉದಾಹರಣೆ ನೀಡುತ್ತಾರೆ. ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವ ಮೌಂಟನ್‌ ಗೋಟ್‌ ಎಂದು ಹೇಳುವ ಅಥವಾ ನೀಲ್‌ಗಾಯ್‌ ಎಂದು ಹೇಳುವ ಪ್ರಾಣಿ ಮರಿ ಹಾಕುತ್ತದೆ. ತಾಯಿ ಮತ್ತು ಮರಿ ಸಾಗುವಾಗ ಹಾದಿಯಲ್ಲಿ ಅಡ್ಡಲಾಗಿ ಒಂದು ಕೊರಕಲು ಸಿಕ್ಕಿದರೆ ತಾಯಿ ಅದನ್ನು ಹಾರಿ ಸಾಗುತ್ತದೆ. ಚಿಕ್ಕದಿರುವ ಮರಿಗೆ ಅದನ್ನು ಹಾರಲಾಗದು. ಆದರೆ ಮರಿ ಕೊರಕಲಿನ ಸುತ್ತ ದಾರಿ ಹುಡುಕಿಕೊಂಡು ತಾಯಿಯನ್ನು ಸೇರುತ್ತದೆ. ನೀಲ್‌ಗಾಯ್‌ ಮರಿಗಳು ಹುಟ್ಟಿದ ಕೂಡಲೇ ನಡೆಯಲು ಆರಂಭಿಸುತ್ತದೆ. ಇತರ ಪ್ರಾಣಿಗಳಂತಲ್ಲ. ಇದು ಹೇಗೆ ಬಂತು? ಚಾಮಿÕ$R ಅವರ ಪ್ರಕಾರ, ಇದು ಆನುವಂಶೀಯವಾಗಿ ಬಂದದ್ದಿರಬಹುದು, ಬದುಕಬೇಕಾದರೆ ತಾಯಿಯ ಹಿಂದೆ ಹೋಗಬೇಕು. ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಜೀನ್‌ಗಳ ಸಹಾಯದಿಂದ ಹುಟ್ಟಿನಿಂದಲೇ ಕಲಿತು ಬಂದಿರಬಹುದು. ಆದರೆ ಈಗಿನ ಸಂಶೋಧನೆಗಳ ಪ್ರಕಾರ ಹುಟ್ಟಿನಿಂದಲೇ ಕೇಳಿರುವ, ನೋಡಿರುವ, ಗ್ರಹಿಸುವಿಕೆಯಿಂದ ಅಥವಾ ವಾಸನೆಯಿಂದಲೂ ಆಗಿರಬಹುದು. ತಾಯಿ ಏನನ್ನು ಗ್ರಹಿಸಿದ್ದಾಳೆ, ಕೇಳಿದ್ದಾಳೆ, ನೋಡಿದ್ದಾಳೆ ಅಥವಾ ವಾಸನೆ ಅನುಭವಿಸಿದ್ದಾಳ್ಳೋ ಅದನ್ನು ಪರೋಕ್ಷವಾಗಿ ಮಗುವೂ ಅನುಭವಿಸಿರುವ ಸಾಧ್ಯತೆಗಳಿವೆ. ದೇಹದೊಳಗಿರುವಾಗಲೇ ನ್ಯೂರಲ್‌ ಸರ್ಕ್ನೂಟ್‌ಗಳಿಂದ ಈ ಎಲ್ಲ ಅಂಶಗಳು  ಮಗುವಿಗೆ ಹೋಗಿರಬಹುದು. ತಾಯಿಯ ವಾಸನೆ ಏನು ಎಂಬುದೂ ಅದಕ್ಕೆ  ತಿಳಿದಿರಬಹುದು. ಹಾಗಾಗಿಯೇ ಅದು ಅದರ ತಾಯಿಯ ಹಿಂದೆಯೇ ಹೋಗಿರುವಂತಹದ್ದು. ಕೊರಕಲಿನ ಸುತ್ತಲಾಗಿ ಹೋದದ್ದು ಕೇವಲ ಆಕಸ್ಮಿಕವಾ ಗಿರಬಹುದು ಮತ್ತು ಈ ಬಗ್ಗೆ ಸಾಧ್ಯತೆಗಳಿವೆ ಎನ್ನುವಂತಹದ್ದು. ರಸ, ರೂಪ, ಗುಣ, ಗಂಧಗಳು ಏನಿವೆಯೋ ಇವೆಲ್ಲವೂ ಭಾಷೆಯ ವಿವಿಧ ಅಂಗಗಳಿದ್ದಂತೆ.

ನಮ್ಮ ಅಜ್ಜನ ಕಾಲದಲ್ಲಿ ಬಸ್ಸು, ಕಾರುಗಳು ಇರಲಿಲ್ಲ ಆದರೆ ತಂದೆಯವರ ಕಾಲದಲ್ಲಿ  ಅವರು ಬಸ್ಸು, ಕಾರುಗಳನ್ನು ನೋಡಿದರು. ಹಾಗಾಗಿ ಅವರಿಗೆ ಬಸ್ಸು, ಕಾರು ಎಂಬ ಶಬ್ದಗಳು ತಿಳಿದವು. ಬ್ರಿಟಿಷರ ಆಳ್ವಿಕೆ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೂ ಇಂಗ್ಲಿಷ್‌ ಭಾಷೆ/ ಶಬ್ದಗಳನ್ನು ಕಲಿಯದೆ ಬೇರೆ ಆಯ್ಕೆ ಇರಲಿಲ್ಲ. ಅದನ್ನು ಅಪಭ್ರಂಶ ಮಾಡಿಯಾದರೂ  ಇಂಗ್ಲಿಷ್‌ ಶಬ್ದಗಳನ್ನು ಬಳಸಲು ಪ್ರಾರಂಭಿಸಿದರು. ಭಾಷೆ ಬದಲಾವಣೆಯಾಯಿತು. ಹಾಗೆಂದು ಇಂಗ್ಲಿಷ್‌ನ ಹಲವು ಶಬ್ದಗಳು ಈಗಲೂ ನಾವು ಬಳಸುವ ಭಾಷೆಯಲ್ಲಿವೆ. ಅದನ್ನು ಬಿಡುವಂತಿಲ್ಲ. ಎಲ್ಲ ಕಾಲಕ್ಕೂ ಭಾಷೆಯ ಬದಲಾವಣೆ ಅನಿವಾರ್ಯ. ಆಲಂಕಾರಿಕ ಭಾಷೆಗಳಿಗಿಂತ ಅಥವಾ ಸಾಹಿತ್ಯಿಕವಾಗಿ ಹೆಚ್ಚು ಶ್ರೀಮಂತವಾದ ಭಾಷೆಗಿಂತ ಆಡಳಿತಾತ್ಮಕ ಅಥವಾ ಜನರು ಹೆಚ್ಚು ಯಾವ ಭಾಷೆ ಯನ್ನು  ನಿತ್ಯದ ವ್ಯವಹಾರದಲ್ಲಿ ಬಳಸುತ್ತಾರೋ ಆ ಭಾಷೆ ಹೆಚ್ಚು ಬೆಳೆಯುತ್ತದೆ. ಅವನ್ನೇ ಲೋಕ ಭಾಷೆ ಎನ್ನುವುದು. ಇದರಲ್ಲಿ ವಿಷಮವಾಗುವಂತಹದ್ದು ಇಲ್ಲ.

4. ಚಾಟ್‌ ಜಿಪಿಟಿ ತಂತ್ರಜ್ಞಾನ ಪರ – ವಿರೋಧದ ಚರ್ಚೆ ಚಾಲ್ತಿಯ ಲ್ಲಿದೆ. ಏನು ಹೇಳುತ್ತೀರಿ? ಅದು ನೀಡುವ ಮಾಹಿತಿ ಎಷ್ಟು ಸತ್ಯ?

ಈಗ ಐನ್‌ರ್‍ಯಾಂಡ್‌ ಅವರು ಬರೆಯುವ ರೀತಿ ಒಂದು ಕಥೆ ಬರೆದುಕೊಡು ಎಂದು ಹೇಳಿದರೆ ಗಣಕಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನ ಸಹಾಯದಿಂದ ಕ್ಷಣಮಾತ್ರದಲ್ಲಿಯೇ ಬರೆದುಕೊಡಬಹುದು.  ಕಥೆಯ ಭಾಷೆ ಅದರದ್ದೇ ಆಗಿರ ಹುದು, ಶೈಲಿ ಐನ್‌ರ್‍ಯಾಂಡ್‌ನ‌ದ್ದಾಗಿರುತ್ತದೆ. ಇಂತಹ ವಿಷಯಗಳನ್ನು ಈಗ ಸೃಷ್ಟಿಸಲು ಸಾಧ್ಯವಿದೆ. ಅದೇ ಕಥೆಯನ್ನು ಪುನಃ ಆಗಾತ ಕ್ರಿಸ್ಟಿ ಅವರ ಶೈಲಿಯಲ್ಲಿ ಬರೆದುಕೊಡು ಎಂದು ಹೇಳಿದರೂ ಅದು ಬರೆದುಕೊಡಬಹುದು. ಆದರೆ ಇದನ್ನು ನಮ್ಮ ಕನ್ನಡ ಲೇಖಕರೋ ಅಥವಾ ಪ್ರಾದೇಶಿಕ ಲೇಖಕರು ಬರೆಯುವ ಶೈಲಿಯಲ್ಲಿ ಬರೆದುಕೊಡು ಎಂದರೆ  ಸಾಧ್ಯವಾಗದು. ಯಾಕೆಂದರೆ ಕನ್ನಡದ ಅಷ್ಟು ಸಾಹಿತ್ಯಗಳು ಗಣಕಗಳಲ್ಲಿಲ್ಲ ಮತ್ತು ಕನ್ನಡ ಭಾಷೆಯ ಸಾಹಿತ್ಯಗಳನ್ನು ಅರ್ಥ ಮಾಡಿಕೊಳ್ಳುವಂತಹ ಶಕ್ತಿಯೂ ಅವುಗಳಲ್ಲಿಲ್ಲ. ಯಾಕೆ ಹೀಗೆ ಎಂದರೆ ಒಂದು ಹಳೆಯ ನುಡಿ ಮತ್ತು ಬರಹಗಳಲ್ಲಿ ಬಳಸಲಾದ ಕನ್ನಡ ಕ್ರಮಗಳು ಮತ್ತು ಈಗ ಹೆಚ್ಚಿನ ಎಲ್ಲರೂ ಅವೆಲ್ಲವನ್ನು ಬಿಟ್ಟು ಯೂನಿಕೋಡ್‌ ಅನ್ನೇ ಬಳಸುತ್ತಿದ್ದೇವೆ. ಯೂನಿಕೋಡ್‌ ಎನ್ನುವಂತಹದ್ದು ಬಂದದ್ದೇ ಎಲ್ಲರೂ ಅದನ್ನೇ ಬಳಸಬೇಕು ಎನ್ನುವ ಉದ್ದೇಶದಿಂದ. ಆದರೆ ಅದು ಬಂದದ್ದರಿಂದ ಅದರಲ್ಲಿ ಇಲ್ಲದ್ದನ್ನು ಈಗ ನಾವು ಬಯಸಲೂ ಆಗದು. ಹಾಗಾಗಿಯೇ ನುಡಿಯಲ್ಲಿಯೂ  “ಯೂನಿಕೋಡ್‌ನ‌ಲ್ಲಿ ಸೇವ್‌ ಮಾಡು’ ಎಂಬ ಆಯ್ಕೆ ಬರಲು ಸಾಧ್ಯವಾಯಿತು. ಯೂನಿಕೋಡ್‌ನ‌ಲ್ಲಿ ಇಲ್ಲದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಇತ್ತೀಚೆಗೆ ನಾನು ಇಂಗ್ಲಿಷ್‌ನಲ್ಲಿ  ಎಂಟು ಸಾಲುಗಳನ್ನು ಮೀರದ ಒಂದು ಶಿವನ ಬಗ್ಗೆ ಸ್ತೋತ್ರ ಬರೆಯಲು ಚಾಟ್‌ಜಿಪಿಟಿಯಲ್ಲಿ ಹೇಳಿದೆ. ಸಾಧಾರಣ ಮಟ್ಟಿಗೆ ಚೆನ್ನಾಗಿಯೇ ಬಂತು. ಅದು ರಾಮಾನುಜಂನ “ಸ್ಪೀಕಿಂಗ್‌ ಆಫ್ ಶಿವ’ ತರಹವೇ ಇತ್ತೆಂದು ಹೇಳಬಹುದು. ಬಳಿಕ ಎಂಟು ಸಾಲುಗಳನ್ನು ಮೀರದ ಒಂದು ಸಂಸ್ಕೃತ ಸ್ತೋತ್ರವನ್ನು ಬರೆಯಲು ಹೇಳಿದೆ. ಫ‌ಲಿತಾಂಶವಂತೂ ಅದ್ಭುತವಾಗಿತ್ತು. ಯಾಕೆ ಹೀಗೆಂದರೆ ಗಣಕಗಳಲ್ಲಿ ಸಂಸ್ಕೃತದ ಬೇಕಾದಷ್ಟು ಸಾಹಿತ್ಯಗಳು ಈಗಾಗಲೇ ಇದೆ. ಅದಾದ ಬಳಿಕ ಕನ್ನಡದಲ್ಲಿ ಬರೆಯಲು ಹೇಳಿದೆ. ಆಗ ಅದು ಏನು ಬರೆಯಿತೋ ಅದಕ್ಕೆ ತಿಳಿಯಬೇಕಷ್ಟೇ. ಆ ಮಟ್ಟದಲ್ಲಿತ್ತು. ನೈಜತೆಯಲ್ಲಿ ಅದೊಂದು ಸ್ತೋತ್ರರೂಪದಲ್ಲಿಯೂ ಇರಲಿಲ್ಲ. ಅಣಕು ಸ್ತೋತ್ರರೂಪದಲ್ಲಿತ್ತು ಎಂದು ಹೇಳಬಹುದು. ಯಾಕೆಂದರೆ ಕನ್ನಡ ಭಾಷೆಯ ಡೇಟಾಗಳು ಗಣಕಗಳಲ್ಲಿ ಇಂದಿಗೂ ಬೇಕಾದಷ್ಟು ಇಲ್ಲ. ಎಷ್ಟು ಹೆಚ್ಚಿದೆಯೋ ಅಷ್ಟು ಅದು ನೀಡುವ ಗುಣಮಟ್ಟ ಚೆನ್ನಾಗಿರುತ್ತದೆ ಮತ್ತು ಹೆಚ್ಚು ವ್ಯಾಪಕವಾಗಿ ಬೆಳೆಯಲು ಸಾಧ್ಯವಿದೆ. ಹೌದು, ಚಾಟ್‌ಜಿಪಿಟಿಯನ್ನು ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ಉಪಯೋಗಿಸುತ್ತಾರೆ. ಅದರಿಂದ ನಕಾರಾತ್ಮಕವಾಗಿ ಅವರ ಬೆಳವಣಿಗೆಗೆ ಕಾರಣವಾಗಬಹುದು ಎಂಬ ಚರ್ಚೆಯಿದೆ. ಆದರೆ ನನ್ನ ಪ್ರಕಾರ ಅದರ ಉಪಯೋಗ ಖಂಡಿತ ತಪ್ಪಲ್ಲ. ಅದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೇಗೆ ಹಿಂದುಳಿಯುತ್ತಾರೆ? ಚಾಟ್‌ಜಿಪಿಟಿಯನ್ನು ಬಳಸಲು ಒಂದು ಸಾಮಾನ್ಯ ಪರಿಪೂರ್ಣತೆಯ ಭಾಷೆ  ತಿಳಿದಿರಬೇಕಲ್ಲವೇ? ಅದು ತಿಳಿಯದೆ  ಚಾಟ್‌ಜಿಪಿಟಿ ಯಿಂದ ಉತ್ತರ  ನಿರೀಕ್ಷಿಸಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. “ಭಾಷಾ ಜ್ಞಾನ’ ಅನ್ನುವಂ ತಹದ್ದು ಚಾಟ್‌ಜಿಪಿಟಿಯನ್ನು ಬಳಸಲು ಬಹಳ ಮುಖ್ಯವಾದದ್ದು. ಇನ್ನು ಪ್ರಸ್ತುತ ಚಾಟ್‌ಜಿಪಿಟಿಯಲ್ಲಿ ಕನ್ನಡವನ್ನು ಬಳಸಿ ನಿಖರವಾದ ಉತ್ತರವನ್ನು ಬಯಸಲಾಗದು.  ನಮಗೆ ಬೇಕಾದ ರೀತಿಯಲ್ಲಿ ಖಂಡಿತಾ ಬರದು. ಯಾವ ಭಾಷೆಯಾದರೂ ಅದರ ಸಾಹಿತ್ಯಗಳ ಡೇಟಾ ಈಗಾಗಲೇ ಇಲ್ಲ ಎಂದಾದಲ್ಲಿ ಆ ಭಾಷೆಯಲ್ಲಿ ನೀವು ಏನೇ ಪರಿಪೂರ್ಣವಾದದ್ದನ್ನು ಬಯಸುವುದರಲ್ಲಿ ಅರ್ಥವಿಲ್ಲ.

5. ವ್ಯಾಪಿಸಿಕೊಳ್ಳುತ್ತಿರುವ ಚಾಟ್‌ ಜಿಪಿಟಿ, ಕೃತಕ ಬುದ್ಧಿಮತ್ತೆಯು ಭಾಷೆಯ ಅಳಿವು – ಉಳಿವಿನ ಮೇಲೆ ಬೀರುವ ಪರಿಣಾಮ?

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಯಾಕೆ  ಮುಖ್ಯ ಎನ್ಮುವುದಾದರೆ ಈಗ ಒಂದು ಪ್ರಶ್ನೆಯನ್ನು ನನ್ನಲ್ಲಿ ಕೇಳಿದರೆ, ನೀವು ಒಬ್ಬರಲ್ಲಿ ಕೇಳಿದಂತಾಗುತ್ತದೆ. ಅದೇ ಪ್ರಶ್ನೆಯನ್ನು ನೀವು ಚಾಟ್‌ಜಿಪಿಟಿಯಲ್ಲಿ ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನಲ್ಲಿ  ಕೇಳಿದರೆ ನೂರಾರು ಜನ ಪಂಡಿತರ ಮಂಡಳಿ ಜತೆ ಕೇಳಿದ ಹಾಗೆ. ಪ್ರತಿಯೊಬ್ಬ ಪಂಡಿತರ ಮುಖ್ಯ ವಾದಗಳನ್ನು ಸೇರಿಸಿ ಅದ್ಭುತ ಉತ್ತರವನ್ನು ಅದು ನೀಡುತ್ತದೆ. ಅದು ಅದರ ಪ್ರಾಬಲ್ಯ. ನಾಳೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಇಡೀ ಲೋಕವನ್ನು ಆಳಲಿದೆ. ಯಾಕೆಂದರೆ ಅದು ಕೇವಲ ಒಬ್ಬನ ಜ್ಞಾನವಲ್ಲ, ಅದು ಸಾಮೂಹಿಕ ಜ್ಞಾನ. ಇಷ್ಟು ಮಂದಿಯ ಮಧ್ಯದಲ್ಲಿರುವಂತಹ ಜ್ಞಾನ. ಕನ್ನಡ ಕೂಡ ಆ ಹಂತಕ್ಕೆ ಬೆಳೆಯಲಿ ಎನ್ನುವುದೇ ನಮ್ಮ ಆಸೆ. ಆದರೆ ಅದು ಆಗಲು ಸಾಕಷ್ಟು ಅಡೆತಡೆ, ಸವಾಲುಗಳಿವೆ. ಅದೆಲ್ಲವನ್ನು ಮೀರಬೇಕು. ದೊಡ್ಡದೊಡ್ಡ ಸಂಸ್ಥೆಗಳಿದ್ದರೂ ಇವೆಲ್ಲವೂ ಎಣಿಸಿದ ಮಟ್ಟಿಗೆ ಆಗುತ್ತಿಲ್ಲ. ಆದ್ದರಿಂದಲೇ ಇದು ಇಷ್ಟು ಹಿಂದೆ ಬಿತ್ತು ಎನ್ನುವುದು ನನ್ನ ಯೋಚನೆ.

ಯೂನಿಕೋಡ್‌ ತಂದಾಗ ನನಗೆ ಒಂದು ಆಸೆ ಇತ್ತು. ಒಂದು ವೇಳೆ ಇದು ಮುಂದೆ ಹೋಗಬಹುದೆಂದು. ಹಾಗಾಗಿಯೇ ಸೇಡಿಯಾಪು ಮಾಡಿದಾಗಲೇ,  ಸೇಡಿಯಾಪುವಿನಲ್ಲಿ ನೀವೊಂದು ಫೈಲ್‌ ಸೇವ್‌ ಮಾಡಿದರೆ, ಕನ್ನಡ ಎಂದು ಬರೆದರೆ, ಅದು ಅಲ್ಲಿ ಕೆಎನ್‌ ಆ್ಯಂಡ್‌ ಎನ್‌ಡಿ ( kn-nಛ ) ಎಂದು ಬರುತ್ತಿತ್ತು. ಅದು ಯೂನಿಕೋಡ್‌ನ‌ ಪ್ರಾರಂಭ ಎಂದುಕೊಂಡಿದ್ದೆ. ಆ ಕಾಲದಲ್ಲಿ ನನಗಾಸೆ ಇದ್ದದ್ದು ನಾವು ಟೈಪ್‌ ಮಾಡಿದ್ದನ್ನು ಇನ್ನೂ ಸುಧಾರಿಸಿ, ಸಾರ್ವತ್ರಿಕವಾಗಿಸಬೇಕೆಂದು. ಇದನ್ನೇ ನೀವು ಹಿಂದಿಯಲ್ಲಿ ಓದಿದರೆ, ಹಿಂದಿ ಅಕ್ಷರಗಳಲ್ಲಿಯೂ ನಿಮಗೆ ತೋರಿಸಲು ಸಾಧ್ಯವಿದೆ ಎಂದು ತೋರಿಸಬೇಕೆಂಬ ಆಸೆ ಇತ್ತು. ಆಗಲಿಲ್ಲ. ಖಂಡಿತವಾಗಿಯೂ ಚಾಟ್‌ಜಿಪಿಟಿ ಸುದೀರ್ಘ‌ವಾಗಿ ಉಳಿಯುವುದರಲ್ಲಿ ಸಂಶಯವೇ ಬೇಡ. ಕ್ರಮೇಣ ಅವರು ನಿಗದಿತ ಬೆಲೆ ತೆತ್ತು ಚಂದಾದಾರರಾದರೆ ಮಾತ್ರ ನಮ್ಮ ಸೇವೆಯನ್ನು ನೀವು ಬಳಸಬಹುದು ಎನ್ನಲೂಬಹುದು. ಆಗ ಆಯ್ಕೆ ನಿಮ್ಮದು. ಚಾಟ್‌ಜಿಪಿಟಿಯು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಇರುವಂತಹ ಒಂದು ಅದ್ಭುತ ವೇದಿಕೆ.

6. ಲಿಪಿಯ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ನಿಮಗೆದುರಾದ ಸವಾಲುಗಳೇನು ಮತ್ತು ಹೇಗೆ ನಿಭಾಯಿಸಿದಿರಿ ?

“ದೇವರು ಮತ್ತು ಭಾಷೆ, ಅವೆರಡೂ ಮಾನವ ಸೃಷ್ಟಿತವಾದವು’. ಹಾಗೆಯೇ ಎಲ್ಲ ಲಿಪಿಗಳೂ ಮನುಷ್ಯ ಸೃಷ್ಟಿ. ಆದುದರಿಂದ ಯಾವ ಲಿಪಿಗಳೂ  ಪರಿಪೂರ್ಣವಾಗಿಲ್ಲ. ಅವರು ಅವರಿಗೆ ಎಷ್ಟು ಬೇಕೋ ಅಷ್ಟು ವ್ಯಂಜನಗಳೆಂದು ತೆಗೆದುಕೊಂಡಿದ್ದಾರೆ. ಲಿಪಿಗಳಲ್ಲಿ ಯಾವುದೂ ಒಂದೇ ತೆರನಾಗಿಲ್ಲ. ವಿಭಿನ್ನತೆಗಳಿಂದ ಕೂಡಿವೆ. ಪಾಣಿನಿಯವರು ಅಧ್ಯಯನ ಮಾಡುವಾಗ ಕೂಡ ಸ್ವರಗಳನ್ನು ಮಾತ್ರ ತೆಗೆದುಕೊಂಡು ಅಧ್ಯಯನ ಮಾಡಿದ್ದರು. ಅವರ ಪ್ರಕಾರ ಒಟ್ಟು ಒಂಬತ್ತೇ ಸ್ವರಗಳಿದ್ದವು. ಅವುಗಳಲ್ಲಿ ದೀರ್ಘ‌ಗಳು ಯಾವುದಕ್ಕೆಲ್ಲ ಇವೆ ಅವು ಮಾತ್ರ ಸ್ವರ, ಉಳಿದವು ಸ್ವರಗಳಲ್ಲ.

ನನ್ನ ಪುಸ್ತಕದಲ್ಲಿ ಲಗಧರು ಅವರ ಬಗ್ಗೆ ಉಲ್ಲೇಖೀಸಿದ್ದೆ. ಲಗಧರು ದೊಡ್ಡ ಜೋತಿಷರು. ಆಕಾಶದ ನಕ್ಷತ್ರಗಳ ಬಗ್ಗೆ  ಗೊತ್ತಿದ್ದವರು. ಅವಕಹಡ ಚಕ್ರ ಎಂದು ಜೋತಿಷದಲ್ಲಿದೆ. ಅದರ ಪ್ರಕಾರ ಅಗ್ನಿದೇವತೆ ಇದ್ದಾರೆ  ಎನ್ನಲಾಗುವ “ಕೃತಿಕಾ’ ನಕ್ಷತ್ರ ದಲ್ಲಿ  “ಅ’ ಸ್ವರ ಹುಟ್ಟುತ್ತದೆಂದು ಹೇಳಿದರು. “ಅ’ ಹೇಗೆ ಬೇರೆ ಬೇರೆ ರೀತಿಯಲ್ಲಿ ಅಭಿವೃದ್ಧಿ ಹೊಂದಿತು ಎಂದು ನಾನು ಅಧ್ಯಯನ ಮಾಡಿದ್ದೇನೆ. ಕೃತಿಕಾದಲ್ಲಿ ಒಟ್ಟು ಆರು ನಕ್ಷತ್ರಗಳು. ಅದನ್ನು  ನೀವು ಬ್ರಾಹ್ಮಿಯ “ಅ’ ಆಗಿ ಜೋಡಿಸಲು ಸಾಧ್ಯವಿದೆ. ಬ್ರಾಹ್ಮಿ “ಅ’ ದಿಂದ  ಕೆಲವು ಭಾಷೆಗಳಿಗೆ ಕೊನೇಪಕ್ಷ  ದೇವನಾಗರಿಯಲ್ಲಿ “ಅ’ ಹೇಗೆ ಹುಟ್ಟಿತು ಎಂದು ಹೇಳು ಸಾಧ್ಯವಿದೆ ಎಂದು ನಾನು ಲೆಕ್ಕಾಚಾರ ಮಾಡಿ “ಡಿಜಿಟಲ್‌ ಪ್ಯಾಲಿಯೋಗ್ರಫಿ’ ಎಂಬ ವಿಷಯದಲ್ಲಿ ಆಸಕ್ತಿ ತೋರಿಸಿದೆ.  ಕೊರಿಯಾದಲ್ಲಿ “ಹಂಗುಲ್‌’ ಎಂಬ ಲಿಪಿಯೊಂದಿದೆ. ಇದು ಒಂದೇ ಲಿಪಿ, ನಮ್ಮ ಬಾಯಿಯ ಅಂದರೆ, ನಾಲಿಗೆ, ಮೇಲು¤ಟಿ, ಕೆಳತುಟಿ, ಬಾಯಿಯೊಳಗಿನ ಮೇಲ್ಭಾಗ ಗಂಟಲಿನ ಭಾಗಗಳನ್ನೆಲ್ಲ ಬಳಸಿಕೊಂಡು ಯಾವ ರೀತಿಯಲ್ಲಿ  ಸ್ವರಗಳನ್ನು ಹೊರಡಿಸಬಹುದು ಎನ್ನುವಂತಹ ಒಂದು ಲಿಪಿಯನ್ನು ಸೃಷ್ಟಿಸಿದ್ದರು. ಆದರೆ ಅದು ಕೊರಿಯಾದಲ್ಲಿಯೂ ಉಳಿಯಲಿಲ್ಲ. ಅದರ ಹೊರತಾಗಿ ಯಾವ ಲಿಪಿಯೂ ಒಂದು ನಿಜವಾದ ಆಧಾರದಿಂದ ಅಥವಾ ಅನುಭವದಿಂದ ಹುಟ್ಟಲಿಲ್ಲ. ಪ್ರತಿಯೊಂದು ಸ್ವರಘಟಕಗಳಿಗೆ ಅಥವಾ ಶಬ್ಧ ಘಟಕಗಳಿಗೆ ಇರುವಂಥದ್ದು ಕಾಲ ಎಷ್ಟು ಬೇಕೆಂದು ಹೇಳುವಂಥದ್ದು. ಉದಾಹಾರಣೆಗೆ “ಸ್ವಂ’ ಎನ್ನಲು ಎಷ್ಟು ಸ್ವರ ಬೇಕಾಗುತ್ತದೆಯೋ ಅದುವೇ “ಗ’ ಕ್ಕೆ ಇರುವಂತಹ ಸ್ವರ ಅಥವಾ “ಗಾ’ಕ್ಕೆ ಬೇಕಾಗುವಂತಹ ಸ್ವರಕ್ಕೆ ಇರುವಂತಹ ದೀರ್ಘ‌ಕ್ಕೆ ಅಥವಾ ಪುÉತಕ್ಕೆ ಸಮವಾಗದು. ಇದನ್ನು ಲಿಪಿಯಲ್ಲಿ ತೋರಿಸುವಂತಹ ಕ್ರಮಗಳು ಇನ್ನೂ ಹುಟ್ಟಿಯೇ ಇಲ್ಲ. ಬರೇ ಸ್ವರದಿಂದ ಭಾಷೆಯಾಗದು, ಕಾಲವೂ ಆದರ ಅಂಶ.

7. ನಿಮಗೆ ಪಾಣಿನಿಯ ಬಗ್ಗೆ  ಆಸಕ್ತಿ ಮೂಡಲು ಕಾರಣವೇನು? ಪಾಣಿನಿಯು ಉಳಿದವರಿಗಿಂತ ಹೇಗೆ ಭಿನ್ನ?

ಗ್ರೊಟೋಫೊನೋಲಜಿ, ನಮ್ಮ ಗಂಟಲಿನಿಂದ ಸ್ವರಗಳು ಹೇಗೆ ಹುಟ್ಟುತ್ತವೆ, ಸ್ವರಗಳು ಯಾಕೆ ಅಲ್ಲಿಂದ ಹುಟ್ಟುತ್ತವೆ, ಯಾವ ರೀತಿ ಅಲ್ಲಿಂದ ಹುಟ್ಟುತ್ತವೆ ಎಂದು ನಾವು ಮಾತನಾಡುವ ಭಾಷೆಯಲ್ಲಿ, ಶಬ್ದದ ಭಾಷೆಯಲ್ಲಿ  ಎಲ್ಲದಕ್ಕೂ ಸಂಬಂಧವನ್ನು ಕಲ್ಪಿಸಿ ಗಂಟಲಿನಲ್ಲಿ ಹೊರಡುವ ಸ್ವರಗಳಿಗೂ, ನಮ್ಮ ಮನಸ್ಸಿನ ಯೋಚನೆಗಳನ್ನು ಸಂವಹನ ಮಾಡಲು ಅಗತ್ಯ ಇರುವ ಭಾಷೆಗೂ, ಮಾತಿನ ಭಾಷೆಗೂ ಸಂಬಂಧ ಇದೆ ಎಂದು ಕಂಡುಹುಡುಕಿದವರಲ್ಲಿ ಲೋಕದಲ್ಲೇ ಪ್ರಪ್ರಥಮ ಮತ್ತು ಅದ್ವಿತೀಯರಾದವರು ಪಾಣಿನಿ. ಅದನ್ನು ಇಡೀ ಸೂತ್ರರೂಪದಲ್ಲಿ ಕೊಟ್ಟದ್ದು ಒಂದು ಮಹಾಕಾರ್ಯ. ಹಾಗಾಗಿ ವೈಯಕ್ತಿಕವಾಗಿ ನನಗೂ ಪಾಣಿನಿ ಅವರೆಂದರೆ ಬಹಳ ಇಷ್ಟ. ಪಾಣಿನಿ  ಆ ಕಾಲದಲ್ಲಿಯೇ ಇಡಿಯನ್‌ ಸೂತ್ರರೂಪದಲ್ಲಿ ಕಲಿಸಿದರು. ಪಾಣಿನಿ ಅವರ ಸೂತ್ರಗಳನ್ನು ಕಲಿತರೆ ಏನು ಉಪಯೋಗ ಎಂದರೆ ಎಲ್ಲಿ ಭಾಷೆಗಳನ್ನಾಡುವಾಗ ಅಥವಾ ಬಳಕೆ ಮಾಡುವಾಗ ತಪ್ಪಾಗುತ್ತದೆ ಎಂದು ತಿಳಿಯಬಹುದು. ಆದ್ದರಿಂದ ಅದು ನಿಯಮಾತ್ಮಕವಾದಂತಹ ಭಾಷೆ ಹೊರತಾಗಿ ವಿವರಣಾತ್ಮಕವಾದದ್ದಲ್ಲ. ಪಾಣಿನಿಯ ಈ ಗ್ರಂಥ ಗಾತ್ರದಲ್ಲಿ  ನೂರು ಪುಟಗಳನ್ನೂ ಮೀರದೆ ಇರಬಹುದು ಆದರೆ ಒಳಗಿರುವ ವಿಚಾರಗಳು ಮಾತ್ರ ಅಗಾಧ.

8. ಅಲೆಕ್ಸಾ, ಸಿರಿಗಳಂತಹ ಹೊಸ ತಂತ್ರ ಜ್ಞಾನದಲ್ಲಿ ಬಳಕೆಯಾಗುವ ಭಾಷೆಗಳ ನಿಖರತೆ ಬಗ್ಗೆ?

ಅಲೆಕ್ಸಾ ಅಥವಾ ಸಿರಿಗಳೆಲ್ಲ ಮೂಲದಲ್ಲಿ ಇಟ್ಟುಕೊಂಡಿರುವಂಥದ್ದು  ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯನ್ನು. ನೀವು ಕೇಳಿದ್ದಕ್ಕೆ ಅದು ಇಂಗ್ಲಿಷ್‌ನಿಂದಲೇ ಭಾಷಾಂತರಿಸಿ ಹೇಳುವುದಲ್ಲದೆ ಬೇರೇನೂ ಅಲ್ಲ. ಕನ್ನಡದ ತೃತೀಯ ವಿಭಕ್ತಿಗಳು ಅಂದರೆ “ಅವನಿಂದ’ ಎನ್ನುವಾಗ ಮೂರು-ನಾಲ್ಕು ರೀತಿಯಲ್ಲಿ ಇಂಗ್ಲಿಷ್‌ಗೆ ಭಾಷಾಂತರ ಮಾಡಬಹುದುof, by, from ಯಾವುದೂ ಆಗುತ್ತದೆ. ಆದರೆ ಪುನಃ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡುವಾಗ, of, by, fromಗಳಿಂದ ಒಂದೇ ಅರ್ಥ ಬರದು. ದೊಡ್ಡ ಸಮಸ್ಯೆಯಾಗಿದೆ. ಈ ಭಾಷಾರೂಪ, ಭಾಷಾ ಸಮಸ್ಯೆ ಅಥವಾ  ಭಾಷೆಯ ಸ್ವರೂಪಗಳು ಹಾಗೆಯೇ ಉಳಿಯತ್ತವೆ. ಅದನ್ನು ಏನೂ ಮಾಡಲು ಸಾಧ್ಯವಿಲ್ಲವೆನ್ನುವುದು ಬೇಸರದ ಸಂಗತಿ. ಅಲೆಕ್ಸಾ, ಸಿರಿಗಳು ನಿಖರತೆ ಇರದಿದ್ದರೂ ನಮ್ಮಷ್ಟಕ್ಕೆ ಸಮಾಧಾನ ಮಾಡಿಕೊಳ್ಳಬೇಕಷ್ಟೇ.

9.ಆ್ಯಂಡ್ರಾಯ್ಡ, ಆ್ಯಪಲ್‌ ಐಒಎಸ್‌ ಹಾಗೂ ವಿಂಡೋಸ್‌ಗಳಲ್ಲಿ  ಕನ್ನಡ ಭಾಷೆಯನ್ನು ಒಂದೇ ರೀತಿಯಾಗಿ ಬಳಸುವುದು ಹೇಗೆ?

ಗಣಕಯಂತ್ರಗಳಿಗೆ “ಸಮಗ್ರ ಸಾಹಿತ್ಯ ಮಾದರಿ’ಯಲ್ಲಿ  “ನಾನ್‌-ಯೂನಿಕೋಡ್‌’ ಬರಹಗಳು ಇನ್ನು ಕೂಡ ಅರ್ಥವಾಗುತ್ತಿಲ್ಲ. ಅದಕ್ಕೆ ಅದು ಚಿತ್ರಗಳು/ ಕೋಡ್‌ ಆಗಿ ಉಳಿಯುತ್ತವೆ. ಅದನ್ನು ಭಾಷಾಂತರ ಮಾಡಿ ಕೊಡುತ್ತಿಲ್ಲ. ಇದು ಒಂದು ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಇದು ಎಲ್ಲರಿಗಿಂತ ಹೆಚ್ಚು ದೊಡ್ಡ ಸಮಸ್ಯೆಯಾಗಿರುವುದು ಆ್ಯಪಲ್‌ನವರಿಗೆ. ಅವರೇನು ಮಾಡಿದರೆಂದರೆ, ಕನ್ನಡ ಎಂದು ಅವರು ಸೇರಿಸಿದ್ದೆಲ್ಲ ಸುಮಾರು ಹತ್ತು ವರ್ಷ ಹಿಂದಿನ ಮಾದರಿಗಳು. ನಮ್ಮ ನುಡಿ 1.0 ದಿಂದ ಅವರು ಮುಂದೆ ಹೋಗಲೇ ಇಲ್ಲ. ಇದು ಯಾಕೆ ಇನ್ನೂ ಸುಧಾರಿಸಿಲ್ಲ ಅಂದರೆ ಕನ್ನಡಿಗರು ಯಾರೂ  ಕನ್ನಡ ಟೈಪ್‌ ಮಾಡಲು ಆ್ಯಪಲ್‌ ಉಪಕರಣಗಳನ್ನು ಬಳಸಲಿಲ್ಲ. ಬಳಸಿದರೂ ಸಣ್ಣ ಸಣ್ಣ ಕಾರಣಗಳಿಗೆ ಬಳಸುತ್ತಾರೆ ಹೊರತು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಿಲ್ಲ. ನುಡಿ 1.0 ಮಾಡಿದಾಗಲೂ ನಮ್ಮ ದೃಷ್ಟಿ ಇದ್ದದ್ದು ದಿನಪತ್ರಿಕೆಗಳು, ಗ್ರಂಥರಚನಕಾರರು ಅಥವಾ  ದೊಡ್ಡ ಪ್ರಮಾಣದಲ್ಲಿ ಕನ್ನಡ ಟೈಪ್‌ ಮಾಡಬಯಸುವವರು. ಆದರೆ ಕನ್ನಡ ಭಾಷೆಯನ್ನು ಗಣಕಗಳಿಗೆ ತರುವ ಕೆಲಸದಲ್ಲಿಯೇ ನಾವು ಒಂದು ಹೆಜ್ಜೆ ಹಿಂದುಳಿದೆವು.

-ಅವನೀಶ್‌ ಭಟ್‌, ಸವಣೂರು,  

-ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.