Advertisement

Artificial Intelligence; ಕಂಬಳಕ್ಕೆ AI ಎಂಟ್ರಿ; ಕೋಣಗಳ ಚಲನವಲನ ಅರಿಯಲು ಹೊಸ ತಂತ್ರಜ್ಞಾನ

05:39 PM Feb 15, 2024 | ಕೀರ್ತನ್ ಶೆಟ್ಟಿ ಬೋಳ |

ಒಂಟಿಕರೆಯಿಂದ ಜೋಡು ಕರೆಯಾಗಿ, ಫ್ಲಡ್ ಲೈಟ್ ವ್ಯವಸ್ಥೆಯಿಂದ ಹಗಲು ರಾತ್ರಿಯ ಕೂಟ, ವಿಡಿಯೋ ಫಿನಿಶಿಂಗ್, ಸೆನ್ಸಾರ್ ಟೈಮಿಂಗ್ ಹೀಗೆ ಹಲವು ಹೊಸತನಕ್ಕೆ ಒಗ್ಗಿಕೊಂಡು ಬಂದ ತುಳುನಾಡಿದ ಜಾನಪದ ಕ್ರೀಡಾಚರಣೆ ಕಂಬಳವು ಇದೀಗ ಹೊಸ ಮಗ್ಗುಲಿಗೆ ಹೊರಳಿದೆ. ಅದುವೇ ಗೇಟ್ ಸಿಸ್ಟಂ.

Advertisement

ಗೇಟ್ ಸಿಸ್ಟಂ ಈಗಾಗಲೇ ಕಂಬಳದಲ್ಲಿ ಬಂದಿದೆ. ಫೆಬ್ರವರಿ 3ರಂದು ನಡೆದ ಐಕಳ ಕಂಬಳದಲ್ಲಿ ಗೇಟ್ ವ್ಯವಸ್ಥೆಯ ಪ್ರಾಯೋಗಿಕ ಪ್ರದರ್ಶನವೂ ನಡೆದಿದೆ. ಹೀಗಾಗಿ ಇದೀಗ ಇದರಲ್ಲಿ ವಿಶೇಷವೇನಿದೆ ಎನ್ನುವುದಾದರೆ, ಹೌದು ವಿಶೇಷವಿದೆ. ಅದು ಗೇಟ್ ಸಿಸ್ಟಂಗೆ ಕೃತಕ ಬುದ್ದಿಮತ್ತೆ ಅಂದರೆ ಎಐ (Artificial Intelligence) ಅಳವಡಿಕೆ.

ಕಂಬಳದಲ್ಲಿ ಸೆನ್ಸಾರ್ ಟೈಮಿಂಗ್ ನೊಂದಿಗೆ ಸಂಚಲನ ಮೂಡಿಸಿದ್ದ ಕಾರ್ಕಳದ ಸ್ಕೈ ವೀವ್ ಸಂಸ್ಥೆಯ ರತ್ನಾಕರ ನಾಯಕ್ ಅವರು ಗೇಟ್ ಅಭಿವೃದ್ದಿ ಪಡಿಸಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕೋಣಗಳನ್ನು ಓಟಕ್ಕೆ ಸಿದ್ದಪಡಿಸುವ ಜಾಗದಲ್ಲಿ ಗೇಟ್ ಅಳವಡಿಸಿ ನಿಗದಿತ ಸಮಯದಲ್ಲಿ ಏಕಕಾಲದಲ್ಲಿ ಗೇಟ್ ತೆರೆದುಕೊಳ್ಳುತ್ತದೆ. ಈ ತಂತ್ರಜ್ಞಾನವನ್ನು ಮತ್ತೆ ಅಭಿವೃದ್ದಿಗೊಳಿಸಲು ಮುಂದಾಗಿದ್ದಾರೆ ರತ್ನಾಕರ ನಾಯಕ್.

ಸದ್ಯ ಇರುವ ಗೇಟ್ ನಲ್ಲಿ ನೂರು ಸೆಕೆಂಡ್ ಗಳ ಕ್ಷಣಗಣನೆ (Count down) ಮುಗಿದ ಬಳಿಕ ಗೇಟ್ ತನ್ನಷ್ಟಕ್ಕೆ ತೆರೆದುಕೊಳ್ಳುತ್ತದೆ. ಈ ವೇಳೆ ಎರಡೂ ಕರೆಯಲ್ಲಿರುವ ಕೋಣಗಳನ್ನು ಸರಿಯಾದ ಸ್ಥಾನದಲ್ಲಿರಿಸಬೇಕು. ಇದು ಕೋಣಗಳನ್ನು ಹಿಡಿದುಕೊಂಡಿರುವವರ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಕೆಲವು ಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು. ಆ ಕ್ಷಣದಲ್ಲಿ ಕೋಣ ಸರಿ ನಿಲ್ಲದಿದ್ದರೆ, ಒಂದು ವೇಳೆ ಕೋಣಗಳು ಮೂತ್ರ ಮಾಡುತ್ತಿದ್ದರೆ ಆಗ ಹೇಗೆ ಸ್ಪರ್ಧೆ ಆರಂಭಿಸಲು ಸಾಧ್ಯ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಇದಕ್ಕೆ ಉತ್ತರ ಹುಡುಕುತ್ತಾ ಎಐ ತಂತ್ರಜ್ಞಾನ ಮೊರೆ ಹೋಗಿದ್ದಾರೆ ರತ್ನಾಕರ್ ನಾಯಕ್.

Advertisement

ಗೇಟ್ ರಚನೆಯಲ್ಲಿ ಉತ್ತಮ ದರ್ಜೆಯ ಕ್ಯಾಮರಾ ಅಳವಡಿಸಿ ಅದರಲ್ಲಿ ಕೋಣಗಳ ಚಲನವನ ಅರಿಯಲಾಗುತ್ತದೆ. ಕ್ಯಾಮರಾದಲ್ಲಿ ಗ್ರಿಡ್ ರಚನೆಯಾಗುತ್ತದೆ, ಆ ರೇಖೆಗಳ ಸಮಾನಂತರವಾಗಿ ಕೋಣಗಳನ್ನು ನಿಲ್ಲಿಸಬೇಕಾಗುತ್ತದೆ. ಕೋಣಗಳು ಸರಿಯಾಗಿ ನಿಂತ ಕೂಡಲೇ ಗೇಟ್ ತೆರೆದುಕೊಳ್ಳುತ್ತದೆ ಎಂದು ಮಾಹಿತಿ ನೀಡುತ್ತಾರೆ ರತ್ನಾಕರ್ ನಾಯಕ್.

ವಿವರವಾಗಿ ಹೇಳಬೇಕಾದರೆ, ಕೋಣಗಳನ್ನು ಸ್ಪರ್ಧೆಗೆ ಬಿಡುವ ಗಂತಿನಲ್ಲಿ ಅಳವಡಿಸುವ ಕ್ಯಾಮರಾದಲ್ಲಿ ಮೂರು ಸಮಾನಂತರ ರೇಖೆಗಳು ಮೂಡುತ್ತದೆ. ಇಲ್ಲಿ ಕೋಣಗಳು ಯಾವುದಾದರು ಒಂದು ರೇಖೆಗೆ ಸರಿಯಾಗಿ ನಿಲ್ಲಬೇಕು. ಒಂದು ಕರೆಯ ಕೋಣ ಆ ರೇಖೆಗೆ ಹಿಂದಿದ್ದರೆ ಆ ಕರೆಯ ಬದಿಯಲ್ಲಿ ಬೀಪ್ ಶಬ್ದವಾಗಿ ಸೂಚನೆ ನೀಡುತ್ತದೆ, ಆಗ ಕೋಣ ಹಿಡಿದುಕೊಂಡವರು ಕೋಣವನ್ನು ಸರಿಯಾಗಿ ನಿಲ್ಲಿಸಬೇಕು. ಕೋಣಗಳು ಸರಿಯಾದ ರೇಖೆಗೆ ಬಂದ ಕೂಡಲೇ (ಎರಡು ಜೋಡಿ ಕೋಣಗಳ ನೊಗಗಳು ಸಮಾನವಾಗಿ ಬಂದಾಗ) 3.2.1 ಕೌಂಟ್ ಡೌನ್ ಆಗಿ ಗೇಟ್ ತೆರೆದುಕೊಳ್ಳುತ್ತದೆ.

ಆಪ್ಟಿಕಲ್ ಸೆನ್ಸಾರ್, ಐಆರ್ ಸೆನ್ಸಾರ್, ಡಿಸ್ಟಾನ್ಸ್ ಸೆನ್ಸಾರ್ ಗಳನ್ನು ಬಳಸಲಾಗುತ್ತದೆ. ಸದ್ಯ ಇದು ಯೋಜನಾ ಹಂತದಲ್ಲಿದೆ. ಇದರ ಬಗ್ಗೆ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಿ ಒಂದು ಅಂತಿಮ ಮಾಡೆಲ್‌ ಹೊರತರುವ ವಿಶ್ವಾಸದಲ್ಲಿದ್ದಾರೆ.

ರತ್ನಾಕರ ನಾಯಕ್

ಆಳ್ವಾಸ್ ಬೆಂಬಲ: ರತ್ನಾಕರ್ ನಾಯಕ್ ಅವರು ಯೋಜನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಬೆಂಬಲವಾಗಿ ನಿಂತಿದೆ. ಐಕಳ ಕಂಬಳದಲ್ಲಿ ಗೇಟ್ ಮಾದರಿಯನ್ನು ಗಮನಿಸಿದ್ದ ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಅವರು ರತ್ನಾಕರ ನಾಯಕ್ ಅವರಿಗೆ ಬೆಂಬಲ ಸೂಚಿಸಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಗೇಟ್ ಅಭಿವೃದ್ದಿಗೆ ಕೈಜೋಡಿಸಿದ್ದಾರೆ. ಹೀಗಾಗಿ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದೀಗ ಎಐ ತಂತ್ರಜ್ಞಾನ ಅಳವಡಿಕೆಗೆ ಕೆಲಸ ಮಾಡುತ್ತಿದ್ದಾರೆ.

ಈ ಕಂಬಳ ಸೀಸನ್ ನಲ್ಲಿ ಹೊಸ ತಂತ್ರಜ್ಞಾನದ ಬಳಕೆ ಕಷ್ಟ. ಇನ್ನಷ್ಟು ಅಧ್ಯಯನ ನಡೆಸಿ ಕಂಬಳಕ್ಕೆ ಅನುಕೂಲವಾಗುವಂತೆ ಕೆಲಸ ನಡೆಸುತ್ತಿದ್ದೇವೆ. ಮುಂದಿನ ಸೀಸನ್ ನಲ್ಲಿ ಇದನ್ನು ಜಾರಿಮಾಡುತ್ತೇವೆ ಎನ್ನುತ್ತಾರೆ ರತ್ನಾಕರ್ ನಾಯಕ್.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next