Advertisement
ಆಂಧ್ರ ಪ್ರದೇಶದ ಚಿತ್ತೂರು ಮತ್ತು ಸುತ್ತಮುತ್ತಲಿನ ಟೊಮೆಟೊ ಬೆಳೆಗಾರರಿಗೆ ಖುಷಿಯೋ ಖುಷಿ. ಯಾಕೆಂದರೆ, ಒಂದು ಜಿಲ್ಲೆ – ಒಂದು ಉತ್ಪನ್ನ (ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ – ಒಡಿಒಪಿ) ಯೋಜನೆಯ ಜಾರಿಗಾಗಿ ಕೇಂದ್ರ ಸರಕಾರ ಆಯ್ಕೆ ಮಾಡಿದ ಜಿಲ್ಲೆಗಳಲ್ಲಿ ಚಿತ್ತೂರು ಸಹ ಸೇರಿತ್ತು.ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟಕ್ಕೆ ಕೇಂದ್ರ ಸರಕಾರ ಆ ಯೋಜನೆಯ ಅನುಸಾರ ನೆರವು ನೀಡಲಿದೆ ಎಂದು 2018ರ ಕೇಂದ್ರ ಬಜೆಟ್ ಭಾಷಣದಲ್ಲಿ ವಿತ್ತ ಸಚಿವರು ಘೋಷಿಸಿದ್ದರು.
Related Articles
Advertisement
ಸರಕಾರವು ಇಷ್ಟೆಲ್ಲ ಪ್ರಯತ್ನ ಮಾಡಿದರೂ, ಆಂಧ್ರಪ್ರದೇಶದ ರೈತರು ಟೊಮೆಟೊ ಫಸಲಿಗೆ ಕನಿಷ್ಠ ಬೆಲೆ ಪಡೆಯಲಿಕ್ಕೂ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಚೀನಾದಿಂದ ಆಮದಾಗುತ್ತಿರುವ ರಾಶಿರಾಶಿ ಟೊಮೆಟೊ ಪಲ್ಪ್, ನಮ್ಮ ದೇಶದ ಟೊಮೆಟೊ ಆಧರಿಸಿದ ಉದ್ಯಮ ಬೆಳೆಯಲು ಅವಕಾಶವನ್ನೇ ನೀಡುತ್ತಿಲ್ಲ. ನಾವು ಈ ಕ್ಷೇತ್ರದಲ್ಲಿ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಘಟಕಗಳು ಗಂಟೆಗೆ 10ರಿಂದ 15 ಟನ್ ಟೊಮೆಟೊ ಸಂಸ್ಕರಿಸಲು ಸಾಧ್ಯ. ಆದರೆ ಚೀನಾದ ಘಟಕಗಳು ಗಂಟೆಗೆ 300ರಿಂದ 400 ಟನ್ ಟೊಮೆಟೊ ಸಂಸ್ಕರಿಸುತ್ತವೆ ಎನ್ನುತ್ತಾರೆ ವಿ. ಪ್ರದೀಪ್ ಕುಮಾರ್, ತಾಂತ್ರಿಕ ನಿರ್ದೇಶಕ, ವರ್ಷ ಫುಡ್ಸ್, ರೇನಿಗುಂಟ, ಚಿತ್ತೂರು.
ಚೀನಾದಲ್ಲಿ ಟೊಮೆಟೊ ಕೊಯ್ಲು ಯಂತ್ರಗಳಿಂದಲೇ ನಡೆಯುತ್ತದೆ. ಆದ್ದರಿಂದ, ಅವರ ಟೊಮೆಟೊ ಪಲ್ಪ್ ಅಗ್ಗ (ಅವರು ರಫ್ತು ಮಾಡಿದಾಗಲೂ); ಅದರ ಮೇಲೆ ಭಾರತ ಸರಕಾರ ಶೇ.35 ತೆರಿಗೆ ವಿಧಿಸಿದ್ದರೂ ಇಲ್ಲಿ ಅದು ಅಗ್ಗ. ಈ ಕಾರಣದಿಂದಾಗಿ ಇಲ್ಲಿ ಟೊಮೆಟೊ ಪಲ್ಪ್ ಉತ್ಪಾದನೆ ಲಾಭದಾಯಕವಾಗಿಲ್ಲ. ಹಾಗಾಗಿ, ಈಗ ವರ್ಷ ಫುಡ್ಸ್ ಪಲ್ಪಿಗೆ ಬೇಕಾದ ಟೊಮೆಟೊ ಬೆಳೆಸುತ್ತಿಲ್ಲ; ಬದಲಾಗಿ ಹಣ್ಣುಗಳ ರಸ ಮತ್ತು ಪಲ್ಪ್ ತಯಾರಿಸಿ ಮಾರುತ್ತಿದೆ.
ಮಾರ್ಚ್‌ನಲ್ಲಿ ಟೊಮೆಟೊ ಬೆಲೆ ಕಿಲೋಕ್ಕೆ ಎಂಟು ರೂಪಾಯಿ ಆಗಿತ್ತು. ಇದು ಉದ್ಯಮಕ್ಕೆ ಸಹಕಾರಿಯಲ್ಲ ಎನ್ನುತ್ತಾರೆ ಕಾಪ್ರಿಕಾರ್ನ್ ಫುಡ್ಸ್‌ನ ಜನರಲ್ ಮ್ಯಾನೇಜರ್ ಜಿ. ಚಂದ್ರಶೇಖರ್. ನಾವು ಚೀನಾದೊಂದಿಗೆ ಸ್ಪರ್ಧಿಸಬೇಕಾದರೆ ನಮಗೆ ಕಿಲೋಕ್ಕೆ ನಾಲ್ಕು ರೂಪಾಯಿ ರೇಟಿನಲ್ಲಿ ಟೊಮೆಟೊ ಸಿಗಬೇಕು ಎಂಬುದವರ ಅಭಿಪ್ರಾಯ.
ಚಿತ್ತೂರಿನಲ್ಲಿ ಈಗ ಬೆಳೆಯುವ ಶೇ.80ರಷ್ಟು ಟೊಮೆಟೊ ಮನೆಬಳಕೆಗೆ ಸೂಕ್ತ; ಆದರೆ ಪಲ್ಪ್ ತಯಾರಿಗೆ ಸೂಕ್ತವಲ್ಲ. ಆದ್ದರಿಂದ, ಅಲ್ಲಿನ ರೈತರು ಸಂಸ್ಕರಣೆಗೆ ಸೂಕ್ತವಾದ ಟೊಮೆಟೊ ಬೆಳೆದರೆ ಬೇಡಿಕೆ ಹೆಚ್ಚಾದೀತು. ಆದರೆ, ಯೋಜನಾಬದ್ಧವಾಗಿ ಅಲ್ಲಿ ಟೊಮೆಟೊ ಕೃಷಿ ಮಾಡುವುದು ಕಷ್ಟಸಾಧ್ಯ ಎನಿಸುತ್ತದೆ. ಇದಕ್ಕೆ ಕಾರಣ, ರೈತರು ಮತ್ತು ಉದ್ಯಮಿಗಳ ನಡುವಿನ ಅವಿಶ್ವಾಸ.
“ನಮ್ಮ ಕಂಪೆನಿ ಗುಣಮಟ್ಟದ ಟೊಮೆಟೊ ಬೆಳೆಯಲು ರೈತರಿಗೆ ಒಳಸುರಿಗಳನ್ನು ಕೊಟ್ಟಿತು. ಆದರೆ ರೈತರು ತಮ್ಮ ಫಸಲನ್ನು ನಮಗೆ ಕೊಡಲಿಲ್ಲ’ ಎನ್ನುತ್ತಾರೆ ಚಂದ್ರಶೇಖರ್. ಪಲ್ಪ್ ಉದ್ಯಮಿಗಳೆಲ್ಲ ಒಟ್ಟು ಸೇರಿ ಕೊಯ್ಲಿನ ಸಮಯದಲ್ಲಿ ಟೊಮೆಟೊದ ಬೆಲೆ ಇಳಿಸುತ್ತಾರೆ ಎಂಬುದು ರೈತ ಸಂಘಟನೆಗಳ ಫೆಡರೇಷನಿನ ಮುಖ್ಯಸ್ಥ ಎಂ. ಗೋಪಾಲ ರೆಡ್ಡಿ ಅವರ ಹೇಳಿಕೆ.
ಟೊಮೆಟೊ ಕೃಷಿಯ ಒಳಸುರಿಗಳ ವೆಚ್ಚ ಎಕರೆಗೆ ಸುಮಾರು ರೂ.1,80,000. ಇದನ್ನು ನಮ್ಮ ರೈತರು ಭರಿಸುವುದು ಸುಲಭವಿಲ್ಲ. ಆದ್ದರಿಂದಲೇ ಸಣ್ಣ ರೈತರು ತಮ್ಮ ಜಮೀನನ್ನು ಟೊಮೆಟೊ ಬೆಳೆಯಲು ಲೀಸಿಗೆ ಕೊಡುತ್ತಾರೆ. ಟೊಮೆಟೊದ ಬೆಲೆಯ ಏರಿಳಿತವಂತೂ ವಿಪರೀತ. 2017ರಲ್ಲಿ ಒಂದು ಕಿಲೋಕ್ಕೆ 80 ರೂಪಾಯಿ ಬೆಲೆಯಿದ್ದರೆ, 2018ರಲ್ಲಿ ಕಿಲೋಕ್ಕೆ 2ರಿಂದ 10 ರೂಪಾಯಿ ಬೆಲೆ ಇತ್ತು ಎಂದು ಅವಲತ್ತುಕೊಳ್ಳುತ್ತಾರೆ ಮದನಪಲ್ಲಿಯ ರೈತ ಎಸ್. ನರಸಿಂಹ ರೆಡ್ಡಿ.
ಟೊಮೆಟೊ ಬೆಳೆಗಾರರ ಸಮಸ್ಯೆಗಳ ಪರಿಹಾರದ ದಾರಿಗಳು ಎರಡು: ದೊಡ್ಡ ಉಗ್ರಾಣಗಳ ನಿರ್ಮಾಣ ಮತ್ತು ಟೊಮೆಟೊ ಮೌಲ್ಯವರ್ಧನೆಯ ವ್ಯವಸ್ಥೆ. ಅಂತಿಮವಾಗಿ, ಚೀನಾದ ಟೊಮೆಟೊ ಪಲ್ಪ್ ಖರೀದಿಸಿದರೆ, ನಾವು ಚೀನಾದ ರೈತರು ಮತ್ತು ಉದ್ಯಮಿಗಳ ಹಿತ ರಕ್ಷಿ$ಸಿದಂತಾಗುತ್ತದೆ. ಅದರ ಬದಲಾಗಿ, ನಾವು ನಮ್ಮ ಟೊಮೆಟೊ ಬೆಳೆಗಾರರ ಹಿತ ಕಾಯಬೇಕು ಅಲ್ಲವೇ?
— ಅಡ್ಡೂರು ಕೃಷ್ಣರಾವ್