Advertisement
ಮೂಲತಃ ಸಂಗೀತ ಕುಟುಂಬದಲ್ಲಿ ಬೆಳೆದ ಯುವ ಗಾಯಕಿ ನಿನಾದಾಳಿಗೆ ಅಂಬೆಗಾಲಿಡುತ್ತಿದ್ದಾಗಲೇ ಸಂಗೀತದ ಸ್ವರಗಳು ಕಿವಿಗೆ ಅನುರಣಿಸುತ್ತಿದ್ದವು. ತೊದಲು ನುಡಿಯುತ್ತಿರುವಾಗಲೇ ಸಪ್ತ ಸ್ವರಗಳನ್ನು ಹೇಳುತ್ತಿದ್ದ ಈಕೆ ಈಗಾಗಲೇ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವಿಭಾಗದ ಪರೀಕ್ಷೆ ಮುಗಿಸಿದ್ದು, ಹಿಂದೂಸ್ಥಾನಿ ಕ್ಷೇತ್ರದಲ್ಲಿ ಸಂಗೀತ ಹೊಳೆಯನ್ನು ಹರಿಸಲು ಅಣಿಯಾಗುತ್ತಿದ್ದಾರೆ.
ಹೌದು 6ನೇ ವಯಸ್ಸಿಗೆ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಎದೆ ತುಂಬಿ ಹಾಡುವೆನು’ ಎಂಬ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೇ ತನ್ನ ಗಾನ ಪ್ರತಿಭೆಯಿಂದ ಕ್ವಾರ್ಟರ್ ಫೈನಲ್‌ವರೆಗೆ ತಲುಪಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಅಲ್ಲದೇ 12ನೇ ವಯಸ್ಸಿನಲ್ಲಿಯೇ ಕಿರುತೆರೆಯ ಮತ್ತೂಂದು ಹೆಸರಾಂತ ರಿಯಾಲಿಟಿ ಶೋ “ಸರಿಗಮಪ’ ಕಾರ್ಯಕ್ರಮದಲ್ಲಿ ಟಾಪ್ 8 ಪಟ್ಟಿಯಲ್ಲಿ ಈಕೆಯೂ ಗುರುತಿಸಿಕೊಂಡಿದ್ದಳು.
Related Articles
ಸುಮಾರು 11 ವರ್ಷಗಳ ಮತ್ತೆ ಗಾನ ಸುಧೆಯನ್ನು ಹರಿಸಲು ಸಜ್ಜಾಗುತ್ತಿರುವ ನಿನಾದಳಿಗೆ ಜೊತೆ ಜೊತೆಯಲಗಲಿ ಶೀರ್ಷಿಕೆ ದೊಡ್ಡ ಬ್ರೇಕ್ ಕೊಟ್ಟಿದ್ದು, “ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು’ ಎಂದು ಹಾಡಿ ಸಂಗೀತ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದರೊಂದಿಗೆ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಡು ಕರ್ನಾಟಕ ರಿಯಾಲಿಟಿ ಶೋ ಅಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ.
Advertisement
ಈಗಾಗಲೇ ಕಿರುತರೆಯಲ್ಲಿ ಒಂದು ಮಟ್ಟಿನ ಅಲೆ ಸೃಷ್ಟಿಸಿರುವ ನಿನಾದಾಳಿಗೆ ಹತ್ತು ಹಲವಾರು ಸಂಘ-ಸಂಸ್ಥೆಗಳಿಂದ ಸಮ್ಮಾನ, ಪುರಸ್ಕಾರಗಳು ಲಭಿಸಿವೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋ ಜೋ ಲಾಲಿ ಧಾರಾವಾಹಿಯ ಶೀರ್ಷಿಕೆ ಗೀತೆ ಗಾಯನಕ್ಕೆ ಕಿರುತರೆ ಇಂಡಸ್ಟ್ರಿಯಲ್ಲಿ ಬೆಸ್ಟ್ ಫಿಮೇಲ್ ಸಿಂಗರ್ ಪಟ್ಟವೂ ಧಕ್ಕಿದೆ. ಗಮಕ ಸಂಗೀತಕ್ಕೆ ರಾಜ್ಯಮಟ್ಟದಲ್ಲಿ ಗೌರವ ಲಭಿಸಿದ್ದು, ಜತೆ ಜತೆಯಲಿ, ಸರಾಯು, ಆನಂದ ಭೈರವಿ, ರಾಗ ಅನುರಾಗ, ಆದರ್ಶ ದಂಪತಿಗಳು ಸಹಿತ ಹಲವು ಧಾರಾವಾಹಿಗಳ ಶೀರ್ಷಿಕೆ ಗೀತೆಯನ್ನು ಹಾಡಿದ್ದು, 2005ರಿಂದ ಇಲ್ಲಿಯವರೆಗೆ ಕರ್ಮಷಿಯಲ್ ಆಲ್ಬಮ್‌ಗಳಿಗೆ ಸುಮಾರು 100 ಹಾಡುಗಳಿಗೆ ದ್ವನಿಯಾಗಿದ್ದಾರೆ. 500 ಕ್ಕೂ ಹೆಚ್ಚು ಕ್ಲಾಸಿಕಲ್, ಸೆಮಿ ಕ್ಲಾಸಿಕಲ್, ಗಮಕ ಮುಂತಾದ ಕಾರ್ಯಕ್ರಮಗಳಲ್ಲಿ ಸಂಗೀತ ಸುಧೆ ಉಣಬಡಿಸಿದ್ದಾರೆ. ಹಿರಿತೆರೆಯಲ್ಲಿಯೂ ಗಾಯನ
ಕನ್ನಡದ ಅನಂತ್ ವರ್ಸಸ್ ನುಸ್ರತ್, ಸೋಜಿಗ, ಚದುರಿದ ಕಾರ್ಮೋಡ, ಗಲ್ಲಿ ಬೇಕರಿ ಇತರ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ 15 ಹಾಡುಗಳನ್ನು ಹಾಡಿದ್ದು, ತುಳುವಿನ “ಗೋಲ್‌ಮಾಲ್’ ಚಲನಚಿತ್ರದಲ್ಲಿಯೂ 3 ಗೀತೆಗಳನ್ನು ಹಾಡುವುದರ ಮೂಲಕ ತಮ್ಮ ಝಲಕ್ ತೋರಿಸಿದ್ದಾರೆ. ಇದರ ಜತೆಗೆ ಇನ್ನೂ ಮೂರು ಚಿತ್ರಗಳ ಧ್ವನಿ ಸುರುಳಿ ಬಿಡುಗಡೆ ಬಾಕಿ ಇದ್ದು, ಹೆಸರಾಂತ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಬೇಕೆಂಬ ಮನದಾಸೆ ಈಕೆಯದು. ಇನ್ನು ವೃತ್ತಿಯಲ್ಲಿಯೂ ಸಂಗೀತ ಶಿಕ್ಷಕಿ ಆಗಿರುವ ಈಕೆ, ಮುಂದಿನ ದಿನಗಳಲ್ಲಿ ಎಂ.ಡಿ. ಪಲ್ಲವಿ ಅವರಂತಹ ಖ್ಯಾತ ಗಾಯಕರನ್ನು ಪಳಗಿಸಿರುವ ರಾಮ್‌ರಾವ್ ನಾಯ್ಕ ಅವರ ಬಳಿ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಸುಶ್ಮಿತಾ ಜೈನ್