Advertisement

ಬೆಲ್ಲದಷ್ಟೇ ಸಿಹಿ ‘ಬೆಲ್ಲದ’ಮೇಷ್ಟ್ರು…!

07:44 PM Mar 18, 2021 | Team Udayavani |

ಪ್ರತಿಯೋರ್ವ ವ್ಯಕ್ತಿಯ ಜೀವನದಲ್ಲಿ ತಂದೆ-ತಾಯಿಗಳ ಅನಂತರ ಅತೀ ಹೆಚ್ಚು ಪಾತ್ರ ವಹಿಸುವುದು ಗುರುಗಳು.

Advertisement

ಗುರುಗಳ ಮಾರ್ಗದರ್ಶನದಿಂದ ಸನ್ಮಾರ್ಗದತ್ತ ಸಾಗಿ ಸಾಕಷ್ಟು ಸಾಧಿಸಬಹುದು. ಜತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ನಾಗರಿಕನಾಗಿ ಬದುಕು ಸಾಗಿಸಬಹುದು. ಗುರು ಇಲ್ಲದ, ಗುರಿ ಇಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದಂತೆ. ಹೀಗಾಗಿ ಗುರುವಿನ ಮಹಿಮೆ ಅಪಾರ. ಹರ ಮುನಿದರೂ ಗುರು ಕಾಯುವನು ಎಂಬ ವಾಣಿ ಸಾರ್ವಕಾಲಿಕ ಸತ್ಯ. ಬದುಕಿನಲ್ಲಿ ನಾವು ಏನಾದರೂ ಸಾಧನೆ ಮಾಡಿದರೆ ಆದರ್ಶಗಳನ್ನು ರೂಢಿಸಿಕೊಂಡರೆ ಅದು ಗುರುಕರುಣೆಯ ಕೃಪೆ ಅಂತಲೇ ಹೇಳಬಹುದು.

ಇಂದು ನಾನು ಶಿಕ್ಷಕನಾಗಿ ಸಾರ್ಥಕ ಬದುಕನ್ನು ಸಾಗಿಸುತ್ತಿರಲು ಕಾರಣ ನನ್ನ ತಂದೆ, ತಾಯಿ ಹೊರತುಪಡಿಸಿದರೆ ಗುರುಗಳೇ ಕಾರಣ. ನನ್ನ ಬದುಕಿನಲ್ಲಿ ಕೆಲವು ಗುರುಗಳು ಅನ್ನದಾನ ಮಾಡಿದ್ದಾರೆ. ಇನ್ನು ಹಲವರು ಸಂಸ್ಕಾರ ಕಲಿಸಿದ್ದಾರೆ. ಎಲ್ಲ ಗುರುಗಳ ಪಾತ್ರ ಮುಖ್ಯವೇ. ಅದರಲ್ಲಿಯೂ ನನಗೆ ತಿಳಿವಳಿಕೆ ಬಂದ ಮೇಲೆ, ಸರಿ ತಪ್ಪುಗಳ ಕಲ್ಪನೆ ಮೂಡಿದ ಮೇಲೆ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಶಿಕ್ಷಕರೆಂದರೆ ಅಶೋಕ ಬೆಲ್ಲದ ಗುರುಗಳು. ಇವರ ಹೆಸರು ಮಾತ್ರ ಬೆಲ್ಲದ ಅಲ್ಲ. ಬೆಲ್ಲದಷ್ಟೇ ಸಿಹಿಯಾದ ಮನಸ್ಸು ಗುಣ ಹೊಂದಿದವರು.

ಆಗ ನಾನು ಎಸೆಸೆಲ್ಸಿ ವಿದ್ಯಾರ್ಥಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಓದಿನಲ್ಲಿ ಶ್ರದ್ಧೆ. ಗುರುಗಳ ಮೇಲೆ ಅಪಾರ ಭಯ ಭಕ್ತಿ ಜತೆಗೆ ಪ್ರೀತಿ ಗೌರವ. ಅದೆನೋ ಗೊತ್ತಿಲ್ಲ ನನ್ನ ಪ್ರಾಮಾಣಿಕತೆ, ವಿನಯತೆ ಎಲ್ಲ ಗುರುಗಳು ಇಷ್ಟಪಟ್ಟು ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದರು.

ಅವರ ಆ ಆಪ್ತತೆ ನನ್ನ ಮನದ ದುಗುಡ ಮನೆಯ ದುಃಖ, ದುಮ್ಮಾನ ದೂರ ಮಾಡಿದ್ದು ಸತ್ಯ. ಆಗ ನಮ್ಮ ಶಾಲೆಗೆ ಆಗಮಿಸಿದವರೇ ಅಶೋಕ ಬೆಲ್ಲದ ಸರ್‌. ಇವರ ಬೋಧನ ವಿಷಯ ಗಣಿತವಾಗಿದ್ದರು. ಬದುಕಿನ ಮೌಲ್ಯಗಳನ್ನು ಎಳೆ, ಎಳೆಯಾಗಿ ತಿಳಿಸುತ್ತಾ ಭವಿಷ್ಯದ ಬದುಕಿಗೆ ಕನಸು ತುಂಬಿದರು. ಅವರ ಸಮಯಪ್ರಜ್ಞೆ, ಕಾರ್ಯ ನಿಷ್ಟೆ ಸದಾ ಅನುಕರಣೀಯ. ತಮ್ಮ ಪ್ರೀತಿ ತುಂಬಿದ ಮಾತುಗಳಿಂದಲೇ ವಿದ್ಯಾರ್ಥಿಗಳ ಮನಗೆಲ್ಲುತ್ತಿದ್ದರು ಜತೆಗೆ ಆಕರ್ಷಕ ಬೋಧನಾ ಶೈಲಿಯಿಂದ. ಅವರ ನನಗೆ ಗುರು ಮಾತ್ರವಾಗಿ ಪಾಠ ಮಾಡಲಿಲ್ಲ. ಪ್ರತೀ ದಿನ ತಾವೂ ತಂದ ಊಟದಲ್ಲಿ ನನಗೂ ಸ್ವಲ್ಪ ಊಟ ನೀಡಿ ಹೊಟ್ಟೆಯ ಹಸಿವು ಜ್ಞಾನದ ಹಸಿವು ಎರಡು ನೀಗಿಸುತ್ತಿದ್ದರು.

Advertisement

ಅದೆಷ್ಟೋ ಬಾರಿ ನನಗೆ ಶಾಲಾ ಸಾಮಗ್ರಿಕೊಳ್ಳಲು ಅವರು ಧನ ಸಹಾಯ ಮಾಡಿದ್ದುಂಟು. ಕಷ್ಟಗಳಿಗೆ ಹೆದರಬೇಡ. ಅವುಗಳನ್ನು ಇಷ್ಟಪಟ್ಟು ಎದುರಿಸಿ. ಕಷ್ಟವೂ ಶಾಶ್ವತವಲ್ಲ. ಸುಖ, ದುಃಖ ಒಂದು ಗಾಲಿಯ ಚಕ್ರದಂತೆ ಸದಾ ಉರುಳುತ್ತಿರುತ್ತವೆ. ಹೀಗಾಗಿ ಆದರ್ಶ ಗುರಿಯೊಂದಿಗೆ ಮುನ್ನುಗ್ಗು ಎಂದು ಧೈರ್ಯದ ಮಾತು ಹೇಳಿದರು. ಪರಿಣಾಮ ನಾನು ಕಷ್ಟಕ್ಕೆ ಹೆದರಲಿಲ್ಲ. ಯಾರ ಗೋಜಿಗೂ ಹೋಗದೇ ಸದಾ ಕಾರ್ಯಪ್ರವೃತರಾಗುವ ಅವರ ಗುಣ ಆದರ್ಶನೀಯ.


ರಂಗನಾಥ ಎನ್‌. ವಾಲ್ಮೀಕಿ, ಸೂಳೇಭಾವಿ 

Advertisement

Udayavani is now on Telegram. Click here to join our channel and stay updated with the latest news.

Next