ಜಗತ್ತಿನಲ್ಲಿ ಯಾವುದೂ ಜಡವಲ್ಲ ಎಂದು ಹೇಳಿದ ತೇಜಸ್ವಿ ಅವರು ಸಾಮಾನ್ಯ ಎಲ್ಲರಿಗೂ ಚಿರಪರಿಚಿತರು. ಕನ್ನಡ ಸಾಹಿತ್ಯ -ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕರಿವರು. ಕ್ರಿಯಾಶೀಲತೆ ಬರವಣಿಗೆ ಇವರ ವಿಶೇಷ. ದೊಡ್ಡ ಉದ್ಯೋಗವನ್ನು ಹೊಂದುವಷ್ಟು ವಿದ್ಯೆ, ಕೌಶಲ ಇವರಲ್ಲಿದ್ದರೂ ಸಾಮಾನ್ಯ ಕೃಷಿಕನಾಗಿ ಜೀವನ ನಡೆಸಿದ ಸರಳ ಜೀವಿ ನಮ್ಮ ತೇಜಸ್ವಿಯವರು.
ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ ಅದಕ್ಕೆ ಹೊಸವೈಚಾರಿಕತೆ, ದಾರ್ಶನಿಕತೆಯನ್ನು ದೊರಕಿಸಿಕೊಟ್ಟು ಎಷ್ಟೋ ಯುವಕರಿಗೆ ಸ್ಫೂರ್ತಿಯ ಚಿಲುಮೆ ಇವರು. ಹಾಗೆಯೇ ಇವರ ಬರಹ, ಆಸಕ್ತಿ ಹಾಗೂ ಬದುಕಿನ ರೀತಿಗೆ ಮನಸೋತು ಆಕರ್ಷಿತರಾಗಿ ಇವರಂತೆ ಬದುಕಬೇಕು ಎಂದು ಹಂಬಲಿಸುವವರು ಅಸಂಖ್ಯರು. ಅದರಲ್ಲಿ ನಾನು ಕೂಡ ಒಬ್ಬಳು. ಓದಿದಷ್ಟು ಮತ್ತಷ್ಟು ಹುಚ್ಚಿಡಿಸುವ ಮತ್ತು ಅವರ ಕಥೆಗಳನ್ನು ಓದುತ್ತಿದ್ದರೆ ಆ ದೃಶ್ಯದಲ್ಲಿ ನಾನು ಕೂಡ ತೇಜಸ್ವಿ ಅವರ ಪಕ್ಕದಲ್ಲಿಯೇ ಇನ್ನೇನೋ ಎನ್ನುವ ಭಾವ ನನ್ನಲ್ಲಿ ಮೂಡುತ್ತದೆ. ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನ ಕ್ರಮ, ಭಾಷೆಯ ಬಳಕೆ ಇವೆಲ್ಲವೂ ನನ್ನನ್ನು ಆಕರ್ಷಸಿದ ಸಂಗತಿಯಾಗಿದೆ. ನನ್ನೊಬ್ಬಳಿಗೆ ಅಲ್ಲ ಈಡೀ ಜಗತ್ತಿನ ಎಷ್ಟೋ ಯುವಕರಿಗೆ ಇವರು ರೋಲ್ ಮಾಡಲ್ ಎಂದರೂ ತಪ್ಪಿಲ್ಲ.
ತಮ್ಮ ಅದ್ಭುತ ಭಾಷಾ ಶೈಲಿ ಹಾಗೂ ವೈವಿದ್ಯಮಯ ವಿಷಯಗಳ ಮೂಲಕ ಹೊಸ ಯುವ ಓದುಗ ಸಮೋಹವನ್ನು ಸೃಷ್ಟಿಸಿದರು ಇವರು. ಇವರಂತೆ ಕನ್ನಡ ಓದುಗರ ಕುತೂಹಲವನ್ನು ತಣಿಸಿದ ಇನ್ನೊಬ್ಬ ಸಾಹಿತಿ ಇಲ್ಲ. ಇವರ ಕೃತಿಗಳಂತೆ ಪೂರ್ಣಚಂದ್ರ ತೇಜಸ್ವಿಯವರ ವ್ಯಕ್ತಿತ್ವ ಬಹಳ ವಿಶಿಷ್ಟ ಹಾಗೂ ಅದ್ಭುತ.
ಎಲ್ಲದಕ್ಕೂ ಸೈ ಎನ್ನುವಂತೆ ನಮ್ಮ ತೇಜಸ್ವಿಯು ಚಿತ್ರಕಲೆ, ಫೋಟೋಗ್ರಾಪಿ, ಸೀತಾರ್ ವಾದನ, ಸಂಗೀತಾ, ಮೀನು ಶಿಕಾರಿ, ಬೇಟೆ, ಪಕ್ಷಿವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಕಂಪ್ಯೂಟರ್ ಬಳಕೆ, ಅಡುಗೆ ಹೀಗೆ ಹತ್ತು ಹಲವಾರು ಇವರ ಆಸಕ್ತಿ, ಅಭಿರುಚಿಯ ವಿಷಯಗಳು. ಹಾಗಾಗಿಯೇ ತೇಜಸ್ವಿ ಎಂದರೇನೇ ನನಗೆ ಒಂದು ರೀತಿಯ ವಿಸ್ಮಯ, ನಿಗೂಢ.
- ಕೆ.ಎಂ. ಪವಿತ್ರಾ, ಎಂ.ಜಿ.ಎಂ., ಉಡುಪಿ