Advertisement

ಗುರುವೆಂಬ ಬೋಧಿವೃಕ್ಷ

03:34 PM May 10, 2021 | Team Udayavani |

ಒಬ್ಬ ಗುರು ಸೃಷ್ಟಿ, ಸ್ಥಿತಿ, ಮತ್ತು ಲಯಕಾರಕನು ಹೌದಲ್ಲವೇ?. ನಮ್ಮ ನಾಡಿನಲ್ಲಿ ಗುರುಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರೆಂದು ಪರಿಗಣಿಸಿದ್ದಾರೆ.

Advertisement

ಗುರು ಹಿಂದೆ ಗುರಿ ಮುಂದೆ ಎಂಬ ನಾಣ್ಣುಡಿಯಂತೆ ಒಬ್ಬ ಪ್ರಸಿದ್ಧ ವ್ಯಕ್ತಿಯ ಹಿಂದೆ ನಿಸ್ವಾರ್ಥತೆಯಿಂದ ಪಾಠ ಬೋಧಿಸಿದ ಗುರುವಿನ ಶ್ರಮ ಇದ್ದೇ ಇರುತ್ತದಲ್ಲವೆ?

ತಪ್ಪು ದಾರಿ ತುಳಿಯದಂತೆ ಕೆಟ್ಟ ಆಲೋಚನೆಗಳಿಗೆ ಬಲಿಯಾಗದಂತೆ ವಿದ್ಯಾರ್ಥಿಗಳ ಮನದಲ್ಲಿ ಅಜ್ಞಾನವನ್ನು ಹೋಗಲಾಡಿಸಿ ನೀತಿ-ನಿಯಮ ಸಂಸ್ಕಾರ-ಸಂಸ್ಕೃತಿ ಒಳ್ಳೆ ಮಾರ್ಗವನ್ನು ತೋರಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಉತ್ತಮ ಜೀವನ ನಡೆಸಲು ಕಲಿಸಿದ ಗುರುಗಳ ಪಾತ್ರ ಪ್ರತಿಯೊಬ್ಬನ ಜೀವನದಲ್ಲಿಯೂ ಮಹತ್ವವಾದದ್ದು.

ಅದೇ ರೀತಿ ಬೊಮ್ಮಶೆಟ್ಟಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿರುವ ಸರಕಾರಿ ಶಾಲೆಯನ್ನು ತಮ್ಮ ಸ್ವಂತ ಮನೆಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿರುವ ಮುಖ್ಯ ಶಿಕ್ಷಕರಾದಂತಹ ಮುನಿರಾಜು ಅವರು ಸುಮಾರು 27 ವರ್ಷಗಳ ಕಾಲ ಈ ಪುಟ್ಟ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ವಾಮಿ ವಿವೇಕಾನಂದ ಅವರು ಹೇಳುವಂತೆ ನಿಜವಾದ ಶಿಕ್ಷಕರೆಂದರೆ ಮಕ್ಕಳ ಮಟ್ಟಕ್ಕೆ ಇಳಿದು ತನ್ನ ಆತ್ಮವನ್ನು ವಿದ್ಯಾರ್ಥಿಗಳ ಆತ್ಮಕ್ಕೆ ವರ್ಗಾಯಿಸುವವರು ಎಂಬ ಸ್ವಾಮಿ ವಿವೇಕಾನಂದ ಅವರ ಮಾತನ್ನು ತಮ್ಮ ಜೀವನದ ವೃತ್ತಿಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಿನದಂತೆ ಕಂಡು ಪುಸ್ತಕದಲ್ಲಿ ಇರುವ ಪಾಠದ ಜತೆಗೆ ಸಮಾಜದ ಒಳಿತು-ಕೆಡುಕುಗಳ ನೀತಿ ಪಾಠವನ್ನು ಹೇಳಿಕೊಡುತ್ತ ತಮ್ಮ ಸ್ವಂತ ಹಣದಲ್ಲಿ ಅವರಿಗೆ ಚಾಕ್ಲೇಟು-ಬಿಸ್ಕತ್ತುಗಳನ್ನು ತಂದುಕೊಡುತ್ತಾ ಮಕ್ಕಳನ್ನು ಆನಂದಿಸಿ ಅವರೊಡನೆ ನಲಿಯುತ್ತಾರೆ.

Advertisement

ಅದೆಷ್ಟೋ ಜನರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಹುಡುಕಿಕೊಂಡು ವಲಸೆ ಬಂದಿರುವವರ ಮಕ್ಕಳನ್ನು ಕರೆದು ಬಟ್ಟೆ, ಪುಸ್ತಕ, ಊಟವನ್ನು ನೀಡಿ ಓದುವ ಮತ್ತು ಬರೆಯುವ ಪರಿಚಯ ಮಾಡಿಸಿದ್ದಾರೆ. ಆ ಮಕ್ಕಳು ತಮ್ಮ ಸ್ವಂತ ಊರಿಗೆ ಹೋಗಿ ಅವರ ಮನೆಯಲ್ಲೇ ಕೆಲವು ಪುಸ್ತಕಗಳನ್ನು ಸಂಗ್ರಹಿಸಿ ತಮ್ಮ ತಮ್ಮ ಮನೆಗಳನ್ನೇ ಚಿಕ್ಕ ಗ್ರಂಥಾಲಯವನ್ನಾಗಿ ಮಾಡಿಕೊಂಡಿದ್ದಾರೆ.

ಹಾಗೆ ಅವರ ಪೋಷಕರಿಗೂ ಲೆಕ್ಕಾಚಾರ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಈ ಶಾಲೆಯ ಎಲ್ಲ ವಿದ್ಯಾರ್ಥಿಗಳು ಕೂಡ ಯಾವ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲದಂತೆ ಇಂಗ್ಲಿಷ್‌ ಭಾಷೆಯನ್ನು ಹುರಳಿಕಾಳು ಉರಿದಂತೆ ಪಟಪಟನೆ ಓದುತ್ತಾರೆ. ದೂರದಿಂದ ನಿಂತು ಈ ಶಾಲೆಯನ್ನು ನೋಡಿದರೆ ಹಸುರು ತೋಟದ ಮಧ್ಯೆ ನಿರ್ಮಿಸಿದ ಶಾಲೆಯಂತೆ ಇದೆ ಮೇಷ್ಟ್ರೇ ಎಂದು ಹೊಸದಾಗಿ ಬರುವ ಜನರು ಹೇಳುತ್ತಾರೆ.

ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜನ್ಮದಿನಗಳಂದು ಸ್ವಂತ ಹಣದಲ್ಲಿ ಗಿಡಗಳನ್ನು ತಂದು ಮಕ್ಕಳೊಡನೆ ಸೇರಿ ಶಾಲೆ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಗಿಡನೆಟ್ಟು ನೀರೆರೆದು ಮರವಾಗುವಂತೆ ಮಾಡಿದ್ದಾರೆ. ಈ ಶಾಲೆಯ ಸುತ್ತಲೆಲ್ಲ ಹಸುರು ತುಂಬಿದ ವನದಂತೆ ಕಾಣುತ್ತದೆ. ಈ ಶಿಕ್ಷಕರ ಕೈ ಕೆಳಗೆ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಒಳ್ಳೊಳ್ಳೆ ವೃತ್ತಿಯನ್ನು ಪಡೆದು ಸುಖಕರ ಜೀವನವನ್ನು ಸಾಗಿಸುತ್ತಿದ್ದಾರೆ.

ಪ್ರಶಸ್ತಿಗಳು
ಇವರಿಗೆ ಕುವೆಂಪು ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ, ಬೆಂಗಳೂರು ಉತ್ತರ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಇನ್ನು ಹಲವು ಪ್ರಶಸ್ತಿಗಳು ಲಭಿಸಿವೆ. ಹಾಗೆ ಇವರು ನೆಲಮಂಗಲ ರೋಟರಿ ಸಂಸ್ಥೆಯಲ್ಲಿ ಸಂಸ್ಥಾಪಕ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತವಾಗಿಯೂ ಕಾರ್ಯನಿರ್ವಯಿಸುತ್ತಿದ್ದಾರೆ.

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಈ ಶಿಕ್ಷಕರ ಕೆಲಸದ ಅವಧಿ ಮುಗಿಯುತ್ತದೆ ಎಂದು ಮಕ್ಕಳು ಬೇಸರದಿಂದ “ನಮ್ಮನ್ನ ಮರೆತುಬಿಡುತ್ತೀರಾ ಸರ್‌’ ಎಂದು ಕೇಳಿದರೆ ನನ್ನನ್ನು ಸರಕಾರ ಕೆಲಸದಿಂದ ನಿವೃತ್ತನನ್ನಾಗಿ ಮಾಡುತ್ತಿದೆ ಎಂಬ ಬೇಜಾರು ಇಲ್ಲ. ಆದರೆ ಈ ಗ್ರಾಮದ ಜನರ ಪ್ರೀತಿ ನಿಮ್ಮೆಲ್ಲರ ಪ್ರೀತಿ ಕಡಿಮೆಯಾಗುತ್ತದೆಯಲ್ಲ ಎಂಬ ಬೇಜಾರು ತುಂಬಾ ಇದೆ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ. ನಾನು ಕೆಲಸದಿಂದ ನಿವೃತ್ತನಾಗಿದ್ದೇನೆ ಎಂದು ಭಾವಿಸಿ ಮನೆಯಲ್ಲಿ ಕೂರುವುದಿಲ್ಲ ವಾರಕ್ಕೆ 3 ಬಾರಿಯಾದರೂ ಇಲ್ಲಿಗೆ ಬಂದು ಹೋಗುತ್ತಿರುತ್ತೇನೆ. ಇಲ್ಲಿಗೆ ಬಂದು ನಿಮ್ಮೊಡನೆ ಹಾಗೆ ಈ ಸೌಂದರ್ಯವನ್ನು ಒಂದೆರಡು ಗಂಟೆ ಸವಿಯಲಿಲ್ಲ ಎಂದರೆ ನನ್ನ ಮನಸ್ಸಿಗೆ ನೆಮ್ಮದಿಯೇ ಇರುವುದಿಲ್ಲ ಎನ್ನುತ್ತಾರೆ.

ನೋಡಿ ಒಬ್ಬ ಸರಕಾರಿ ಶಿಕ್ಷಕ ತಮ್ಮ ವಿದ್ಯಾರ್ಥಿಗಳನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿರುತ್ತಾರೆ. ಬಹುತೇಕ ಎಲ್ಲ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಇದೇ ರೀತಿ ಇದ್ದರೆ ವಿದ್ಯಾರ್ಥಿಗಳು ನಲಿನಲಿಯುತ ಶಾಲೆಯತ್ತ ಮನಸ್ಸು ಮಾಡಿ ಪ್ರತಿನಿತ್ಯ ಬರುತ್ತಾರೆ. ನಮ್ಮ ನಾಡಿನಲ್ಲಿ ಇಂತಹ ಅದೆಷ್ಟೋ ಶಿಕ್ಷಕರ ಮನ ಅರಿಯದೇ ಪೋಷಕರು ತಮ್ಮ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯತ್ತ ಮುಖಮಾಡಿಸುತ್ತಿದ್ದರೆ ಅದು ನಮ್ಮ ನಾಡಿನ ಜನತೆಯಲ್ಲಿ ದೂರವಾಗಬೇಕು ಸರಕಾರಿ ಶಾಲೆ ಉಳಿಯಬೇಕು ಇಂತಹ ಶಿಕ್ಷಕರು ಮತಷ್ಟುಜನ ಬೆಳಕಿಗೆ ಬರಬೇಕೆಂಬಹುದೇ ನಮ್ಮೆಲ್ಲರ ಆಸೆ.


 ಪೃಥ್ವಿ ಶಶಾಂಕ್‌, ಬೊಮ್ಮಶೆಟ್ಟಹಳ್ಳಿ, ವಿ.ವಿ. ಕಲಾ ಕಾಲೇಜು, ತುಮಕೂರು 

Advertisement

Udayavani is now on Telegram. Click here to join our channel and stay updated with the latest news.

Next