Advertisement

ನಕ್ಕವರು ನಾಚುವಂತಾಗಲಿ ಬದುಕು…

03:19 PM Oct 15, 2020 | Karthik A |

ಚೀನಿ ಗಾದೆಯಂತೆ, “ನೀವು ಎಷ್ಟು ವರ್ಷ ಬದುಕಿದ್ದೀರಿ ಎಂಬುದು ಮುಖ್ಯವಲ್ಲ. ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಮತ್ತು ಸಮಾಜದ ಅಭ್ಯುದಯಕ್ಕಾಗಿ ಬದುಕಿದ್ದೀರಿ ಎಂಬುದೇ ಮುಖ್ಯ’ ಎಂಬ ಮಾತಿದೆ.

Advertisement

ಆದ್ದರಿಂದ ನಮ್ಮ ಬದುಕು ಇತರರಿಗೆ ಮಾದರಿ, ಆದರ್ಶ ಹಾಗೂ ಪ್ರೇರಣೆ ಅಥವಾ ಅನುಕರಣೀಯವಾಗುವಂತಿರಬೇಕು. ನಮ್ಮ ಜೀವನದಲ್ಲಿ ನಾವು ಅನೇಕ ಸಮಸ್ಯೆ, ಕಷ್ಟ, ತೊಂದರೆ, ತಾಪತ್ರಯ, ಕೆಟ್ಟ ಪರಿಸ್ಥಿತಿ, ಸಂದಿಗ್ಧತೆಯಂತಹ ಸಂದರ್ಭಗಳು ಎದುರಾಗಿರಬಹುದು.

ಹೀಗೆ ಎದುರಾಗುವಂತಹ ಸಂದರ್ಭಗಳು ಮತ್ತು ಸವಾಲುಗಳು ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯಗಳನ್ನು ಪರೀಕ್ಷೆಗೊಳಪಡಿಸಲು ಬರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಅಂತಹ ಸಂದರ್ಭಗಳಲ್ಲಿ ನಾವು ಧೃತಿಗೆಡದೆ ಅವುಗಳನ್ನು ಸಮರ್ಥವಾಗಿ ಕೆಚ್ಚೆದೆಯಿಂದ ಮತ್ತು ಆತ್ಮವಿಶ್ವಾಸದೊಂದಿಗೆ ಎದುರಿಸುವ ಛಲ ಹೊಂದಿರಬೇಕು.

ಕೆಲವು ಸಲ ನಾವು ಮಾಡುವ ಅಥವಾ ಕೈಗೊಳ್ಳುವ ಕೆಲಸ-ಕಾರ್ಯಗಳಲ್ಲಿ ಯಾವುದೇ ಸೋಲು, ವೈಫ‌ಲ್ಯ, ಅಪಜಯ ಅಥವಾ ನಿರೀಕ್ಷಿತ ಮಟ್ಟದಲ್ಲಿ ಫ‌ಲಿತಾಂಶ ಬಾರದೇ ಹೋದಾಗ ನಮ್ಮ ಸುತ್ತಮುತ್ತಲಿನ ಜನರು ಕಾರ್ಯದ ಬಗ್ಗೆ ಏನು ಗೊತ್ತಿರದಿದ್ದರೂ ಸುಮ್ಮನೆ ಹೀಗೆ ಆಗಬಾರದಿತ್ತು, ಹಾಗೆ ಮಾಡಬಾರದಿತ್ತು, ಹೀಗೆ ಮಾಡಬೇಕಿತ್ತು, ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಹಾಗೂ ಅವನಿಂದ ಸಾಧ್ಯವಿಲ್ಲ, ಅದು ಆಗುವುದಿಲ್ಲ, ಅಸಾಧ್ಯ, ಮುಂದೇನು ಅಥವಾ ಮತ್ತೇನು ಎಂಬಂತಹ ತಮ್ಮ ಮನಸ್ಸಿಗೆ ಬಂದಂತೆ ಮೂಗಿನ ನೇರಕ್ಕೆ ಮಾತನಾಡುತ್ತಾರೆ.

ಇದರಿಂದ ನಮ್ಮಲ್ಲಿ ನಕಾರಾತ್ಮಕ ಮನೋಭಾವನೆಯನ್ನು ಬಿತ್ತುವಂತಹ ಸನ್ನಿವೇಶಗಳನ್ನು ನಿರ್ಮಾಣ ಮಾಡುತ್ತಾರೆ. ಡಿವಿಜಿ ಯವರು ಹೇಳಿರುವಂತೆ, “”ಬದುಕು ಕ್ರಿಕೆಟ್‌ ಇದ್ದಂತೆ. ಸುತ್ತಲೂ ನಿಂತವರು ನಮ್ಮವರಂತೆಯೇ ಕಂಡರೂ ಅವರು ನಮ್ಮ ಸೋಲಿಗಾಗಿಯೇ ಕಾದು ಕುಳಿತಿರುತ್ತಾರೆ ಅನ್ನೋದು ಸತ್ಯ” ಎಂಬ ಮಾತಿನಂತೆ ನಮ್ಮ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಮತ್ತು ಸುತ್ತಮುತ್ತಲಿನ ಜನ ನಾವು ಯಾವುದೇ ಕಾರ್ಯ ಕೈಗೊಳ್ಳುವಾಗ ಏನಾದರೂ ಎಡವಿದರೆ ಆಗ ನಮ್ಮನ್ನು ಹುರುದುಂಬಿಸಿ, ಪ್ರೋತ್ಸಾಹಿಸುವುದಿಲ್ಲ. ಬದಲಾಗಿ ನಮ್ಮನ್ನು ಅಸ್ಥಿರಗೊಳಿಸಲು ಹಾಗೂ ನಮ್ಮಲ್ಲಿ ಋಣಾತ್ಮಕವಾದ ಭಾವನೆಗಳನ್ನು ಬಿಂಬಿಸುತ್ತಿರುತ್ತಾರೆ.

Advertisement

ಅದಕ್ಕಂತಲೇ ಹಿರಿಯರು “”ಬದುಕು ನಗುವವರ ಮುಂದೆ ಎಡವಿ ಬಿದ್ದಂತಾಗುವುದು” ಎಂದು ಹೇಳಿದ್ದಾರೆ. ಕೆಲವರಿಗೆ ಜೀವನದಲ್ಲಿ ಅನೇಕ ಸಂಕಷ್ಟಗಳು, ಪರೀಕ್ಷೆಗಳು ಮತ್ತು ಶೋಧನೆಗಳು ಪ್ರತಿ ಅಡಿಗಡಿಗೂ ಎದುರಾಗುತ್ತವೆ. ನಾವು ಏನೇ ಕೆಲಸ ಮಾಡಬೇಕಿರಲಿ, ಯಾವುದೂ ಸಲೀಸಾಗಿ ಆಗುವುದೇ ಇಲ್ಲ. ಹೀಗೆ ನಮ್ಮ ಸಂಘರ್ಷಮಯ ಮತ್ತು ಸಂಕೀರ್ಣಮಯವಾದ ಜೀವನದಲ್ಲಿ ಪ್ರತಿ ಹೆಜ್ಜೆಗೂ ಎದುರಾಗುವ ಅಡೆತಡೆ- ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾ ಕಷ್ಟಪಟ್ಟು ಮುಂದೆ ಸಾಗುವ ಛಲಗಾರಿಕೆಯನ್ನು ಹೊಂದಿರಬೇಕು. ಅಂದಾಗ ಮಾತ್ರ ನಮ್ಮ ಕನಸು ನನಸಾಗಲು ಅಥವಾ ಗುರಿ ಅಥವಾ ಕಾರ್ಯಸಾಧನೆಯತ್ತ ಸಾಗಲು ಸಾಧ್ಯವಾಗುತ್ತದೆ. ಬದುಕು-ಜೀವನವೆನ್ನುವುದು ಒಂದು ಬಾಕ್ಸಿಂಗ್‌ ರಿಂಗ್‌ ಇದ್ದಂತೆ. ಇಲ್ಲಿ ನೀವು ಕೆಳಗೆ ಬಿದ್ದೊಡನೆ ಸೋಲನ್ನು ಘೋಷಿಸುವಂತಿಲ್ಲ. ಬಿದ್ದೊಡನೆ ಧೃತಿಗೆಡದೆ ಮೇಲೆದ್ದು ಫಿನಿಕ್ಸ್‌ ನಂತೆ ಮೇಲೆದ್ದು ಮುನ್ನಡೆದರೆ ಜಯ ನಿಮ್ಮದೆ.

ನಕಾರಾತ್ಮಕವಾಗಿ ನಮ್ಮ ಕಾರ್ಯದ ಬಗ್ಗೆ ಹೀಯಾಳಿಕೆ, ತೆಗಳಿಕೆ, ಅಪಹಾಸ್ಯ, ಹಿಂದೆ ಮಾತನಾಡುವವರ ಅಥವಾ ನಿಂದಕರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಬೇಡಿ. ಅವರ ಮಾತಿನಿಂದ ಮನಸ್ಸಿಗೆ ನೋವುಂಟಾಗಬಹುದು ಹಾಗೂ ಒಂದೊಮ್ಮೆ ಕೆಲಸ-ಕಾರ್ಯದಲ್ಲಿ ಯಶ ಕಂಡಾಗ ಅಥವಾ ಗುರಿ ತಲುಪುವ ವೇಳೆಗೆ ಪಡೆದ ನಮಗೆ ಸಂತೋಷ-ಖುಷಿ ಇಲ್ಲವಾಗುತ್ತದೆ. ಆ ಪರೀಕ್ಷೆ ಅಥವಾ ಶೋಧನೆಗಳಿಂದ ಜೀವನ ಬಿಡುಗಡೆಯಾದರೆ ಸಾಕು ಎಂಬ ಭಾವ ನಮ್ಮ ಮನದಲ್ಲಿ ಬರುತ್ತದೆ. ಹಾಗೆಂದ ಮಾತ್ರಕ್ಕೆ ನಮ್ಮ ಜೀವನದ ಸಂತಸದ ಕ್ಷಣಗಳನ್ನು ಸಂಭ್ರಮಿಸುವುದು ತಪ್ಪಲ್ಲ.

ಕೊನೆಯ ನುಡಿ: ಸ‌ಮಾಜ ಜೀವಿ, ಸಂಘಜೀವಿಯಾಗಿ ಬದುಕಬೇಕಾದ ನಾವುಗಳು ಅದಕ್ಕೆ ತಕ್ಕಂತೆಯೇ ಇರಬೇಕು. ನಮ್ಮನ್ನೂ ಕುರಿತಾದ ಸಮಾಜದ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳು ಎನೇ ಇರಲಿ, ಅವುಗಳಿಗೆ ಹಿಗ್ಗದೇ, ತಗ್ಗದೇ ನಾವು ನಮ್ಮ ಮುಂದಿನ ಗುರಿ ಮತ್ತು ಸಾಗಬೇಕಾದ ಯಶಸ್ಸಿನ ಪಯಣದತ್ತ ಸಾಗಬೇಕು. ನಮ್ಮನ್ನು ನೋಡಿ ಜನ ನಾಚುವಂತೆ ನಮ್ಮ ಬದುಕನ್ನು ಸಾಗಿಸಬೇಕು. ಕಬೀರದಾಸರು ಹೇಳಿದಂತೆ, “”ನಿಮ್ಮ ದಾರಿಯಲ್ಲಿ ಮುಳ್ಳು ಚೆಲ್ಲಿದವರ ದಾರಿಯಲ್ಲಿ ಹೂ ಚೆಲ್ಲಿ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಅಂದರೆ ನಮ್ಮ ಸಾಧನೆಯ ಪಯಣದಲ್ಲಿ ಸಮಸ್ಯೆಗಳು ಎದುರಾದಾಗ ನಕ್ಕು ಹೀಯಾಳಿಸಿದ, ಅಪಹಾಸ್ಯ ಮಾಡಿದ ಜನರು ನಾಚುವಂತೆ ನಮ್ಮ ಬದುಕನ್ನು ಅವರೆಲ್ಲರಿಗೂ ಮಾದರಿ, ಆದರ್ಶಮಯ, ಪ್ರೇರೇಪಣಾತ್ಮಕ ವ್ಯಕ್ತಿ-ಶಕ್ತಿಯಾಗಿ, ಸಾಧಕರಾಗಿ ಮತ್ತು ಇನ್ನೊಬ್ಬರಿಗೆ ಅನುಕರಣೀಯವಾಗುವಂತೆ ಮತ್ತು ತಾತ್ವಿಕ ನೆಲೆಗಟ್ಟಿನ ಮೇಲೆ ನಡೆಸಬೇಕು. ಇಂತಹ ಬದುಕಿಗಾಗಿ ಒಂದಿಷ್ಟು ಛಲ, ಸ್ವಾಭಿಮಾನ ಮತ್ತು ಸಾಧಿಸಿಯೇ ತೀರುತ್ತೇನೆಂಬ ಹಠ ಎಲ್ಲವೂ ಬೇಕು.

 ಮಲ್ಲಪ್ಪ ಸಿ. ಖೋದ್ನಾಪೂರ
ಅಂಕಣ: ಅತಿಥಿ ಅಂಗಳ

 

Advertisement

Udayavani is now on Telegram. Click here to join our channel and stay updated with the latest news.

Next