Advertisement

ಏಳು-ಬೀಳು ಸಹಜ ಮೆಟ್ಟಿ ನಿಲ್ಲುವುದೇ ಜೀವನ..!; ಇದು ಇನ್ಫಿ ನಾರಾಯಣಮೂರ್ತಿ ಅವರ ಬದುಕಿನ ಪಾಠ

04:43 PM Jan 29, 2021 | Team Udayavani |

ಕಾನ್ಪುರ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಪಡೆದ ಯುವಕನೋರ್ವ ದೇಶದ ಪ್ರತಿಷ್ಠಿತ ಐಟಿ ಉದ್ಯಮ ಸಂಸ್ಥೆಯ ಉದ್ಯೋಗಕ್ಕಾಗಿ ಅರ್ಜಿ ಹಿಡಿದು ತೆರಳಿದ್ದ.

Advertisement

ಉದ್ಯೋಗ ಗಿಟ್ಟಿಸಿಕೊಳ್ಳುವೆ ಎಂಬ ಮಹತ್ವಾಕಾಂಕ್ಷೆ ಆ ಯುವಕನ ಕಣ್ಣಲ್ಲಿ ಇತ್ತು. ಉದ್ಯೋಗ ಪಡೆದು ಏನಾದರೂ ಸಾಧಿಸುವ ಛಲ ಆತನಲ್ಲಿತ್ತು. ಆದರೆ..! ಆ ಯುವಕನಿಗೆ ಉದ್ಯೋಗವೇ ಸಿಗಲಿಲ್ಲ. ಇದರಿಂದ ತುಂಬಾ ಬೇಸರಗೊಂಡ ಆ ಯುವಕ ರಾತ್ರಿ ಇಡೀ ಯೋಚಿಸಿ ಒಂದು ನಿರ್ಧಾರಕ್ಕೆ ಬಂದ. ಅದುವೇ ತನ್ನದೇ ಆದ ಸ್ವಂತ ಕಂಪೆನಿ ಯೊಂದು ಆರಂಭಿಸುವುದು.

ಅನಂತರ ಚಿಕ್ಕ ಬಂಡವಾಳದಲ್ಲಿ ಆರಂಭವಾದ ಉದ್ಯಮ ಇಂದು ಜಗದಗಲ ವಿಸ್ತರಿಸಿಕೊಂಡಿದ್ದು ಅವರ ಸಾಧನೆಯನ್ನು ನೋಡಗರನ್ನು ವಿಸ್ಮಯಗೊಳಿಸುತ್ತದೆ. ಆ ಯುವಕ ಬೇರೆ ಯಾರೂ ಅಲ್ಲ, ಅವರೇ ನಾರಾಯಣ ಮೂರ್ತಿ!

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿ ಇನ್ಫೋಸಿಸ್‌ನ್ನು ಆರಂಭಿಸಿದ ನಾರಾಯಣ ಮೂರ್ತಿ ಅವರು ಇಂದು ಜಗತ್ತಿನ ಯಶಸ್ವಿ ಉದ್ಯಮಿಗಳ ಪಟ್ಟಿಯಲ್ಲಿ ಇವರು ಸೇರಿದ್ದಾರೆೆ. ಇನ್ನು ಒಂದು ಕುತೂಹಲದ ಸಂಗತಿ ಏನಂದರೆ, ಇವರನ್ನು ಕೆಲಸಕ್ಕೆ ಸೇರಿಸಿಕೊಳ್ಳದ ಸಂಸ್ಥೆಗೆ ಇಂದು ಪೈಪೋಟಿ ನೀಡಿರುವುದು. ಚಿಕ್ಕ ಬಂಡವಾಳದಲ್ಲಿ ಆರಂಭವಾದ ಇನ್ಫೋಸಿಸ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ಸಾಮಾನ್ಯದ ಸಂಗತಿಯೇನಲ್ಲ. ಮಲ್ಟಿ ನ್ಯಾಶನಲ್‌ ಕಂಪೆನಿಗಳ ಸ್ಪರ್ಧೆಯ ಮಧ್ಯೆ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಿರುವುದು ಅವರ ಕಠಿನ ಪರಿಶ್ರಮ, ದೃಢತೆ ಮತ್ತು ವೃತ್ತಿ ಕೌಶಲವನ್ನು ಎತ್ತಿ ತೋರಿಸುತ್ತದೆ.

ಇನ್ಫೋಸಿಸ್‌ ಕೇವಲ ಬಂಡವಾಳ ಹೂಡಿ, ಲಾಭ ತೆಗೆದುಕೊಳ್ಳುವ ಕಂಪೆನಿ ಮಾತ್ರ ಆಗಿಲ್ಲ. ಇಲ್ಲಿ ಬಂದ ಲಾಭದಿಂದ ಕಂಪೆನಿಗಳ ಉದ್ಯೋಗಿಗಳ ಸಹಿತ ನಾಡಿನ ಅದೆಷ್ಟೋ ಬಡವರ ಸಂಕಷ್ಟಗಳಿಗೆ ಧ್ವನಿಯಾಗಿದೆ. ನಾಡಿನ ಸಂಸ್ಕೃತಿಯನ್ನು ಪಸರಿಸುತ್ತಿದೆ. ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ವಿಶ್ವಾದ್ಯಂತ ತಲುಪಿಸುವ ಕಾರ್ಯ ಇನ್ಫೋಸಿಸ್‌ ಮಾಡುತ್ತಿದೆ ಎಂದರೆ ಅತಿಶಯೋಕ್ತಿಯೇನಲ್ಲ.

Advertisement

ಇಷ್ಟು ದೈತ್ಯವಾಗಿ ಬೆಳೆದ ಇನ್ಫೋಸಿಸ್‌ ಕಂಪೆನಿ ಆರಂಭದಿಂದ ಯಶಸ್ವಿಯಾಗುವವರೆಗೂ ನಾರಾಯಣ ಮೂರ್ತಿ ಮತ್ತು ಅವರ ತಂಡದ ಪರಿಶ್ರಮ, ಉತ್ಸಾಹವನ್ನು ಮೆಚ್ಚಲೇಬೇಕು. ಹಾಗಾದರೆ ಕಂಪೆನಿ ಕಟ್ಟಿ ಬೆಳೆಸಿದ ಹಾಗೂ ಅವರು ಬೆಳೆದ ಯಶೋಗಾಥೆಯ ಬಗ್ಗೆ ತಿಳಿಯೋಣ ಬನ್ನಿ.

ಹತ್ತು ಸಾವಿರ ರೂ. ಬಂಡವಾಳದಲ್ಲಿ ಆರಂಭ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಕಂಪೆನಿಯ ಉದ್ಯೋಗದಿಂದ ವಂಚಿತರಾದ ನಾರಾಯಣ ಮೂರ್ತಿ ಅವರು 1981ರಲ್ಲಿ ಪುಣೆಯ ಸಣ್ಣ ಕಚೇರಿಯಲ್ಲಿ ಕೇವಲ 10 ಸಾವಿರ ರೂ.ಬಂಡವಾಳದೊಂದಿಗೆ ಇನ್ಫೋಸಿಸ್‌ ಕಂಪೆನಿಯನ್ನು ಆರಂಭಿಸಿದರು. ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಕಂಪೆನಿ ಮುಂದೆ ದೊಡ್ಡ ನಿರೀಕ್ಷೆಗಳೊಂದಿಗೆ ಸಾಗಿತು. ಎಲ್ಲ ಇತಿಹಾಸ ಪುಟಗಳಲ್ಲಿ ಅಚ್ಚಳಿಯದಂತವು. ನಾರಾಯಣ ಮೂರ್ತಿ ಅವರ ತಂಡವು ಕಂಪೆನಿಗಾಗಿ ಹಗಲಿರುಳು ದುಡಿಯಿತು. ಸಾಗುತ್ತಾ ಸಾಗುತ್ತ ಕಂಪೆನಿಯೂ ದೊಡ್ಡ ಬಂಡವಾಳ ಹೂಡಿ ಇಡೀ ಜಗತ್ತಿನಾದ್ಯಂತ ತಮ್ಮ ಶಾಖೆಗಳನ್ನು ಆರಂಭಿಸಿತು.

ಸುಂದರ ಕುಟುಂಬ
ನಾರಾಯಣ ಮೂರ್ತಿ ಅವರದು ಆದರ್ಶ ಕುಟುಂಬ. ಧರ್ಮಪತ್ನಿ ಸುಧಾಮೂರ್ತಿ ಅವರು ಕರುನಾಡು ಕಂಡ ಶ್ರೇಷ್ಠ ಲೇಖಕಿ ಹಾಗೂ ಸಮಾಜ ಸೇವಕಿ. ನಾರಾಯಣ ಮೂರ್ತಿ ಅವರ ಸಾಧನೆಯ ಬೆನ್ನೆಲುಬು ಸುಧಾಮೂರ್ತಿ ಅವರೇ ಆಗಿದ್ದಾರೆ. ಮಗ ರೋಹನ್‌ ಮೂರ್ತಿ, ಮಗಳು ಅಕ್ಷತಾ ಮೂರ್ತಿ.

ಜಗದಗಲ ಇನ್ಫೋಸಿಸ್‌
ಸಾಫ್ಟ್ವೇರ್‌ ಜಗತ್ತಿನಲ್ಲಿ ಅಂತ್ಯಂತ ವಿಶ್ವಾಸಾರ್ಹ ಕಂಪೆನಿಗಳಲ್ಲಿ ಇನ್ಫೋಸಿಸ್‌ ಕೂಡ ಒಂದು. ಹಾಗಾಗಿ ಇದು ಇಂದು ಸುಮಾರು 42 ದೇಶಗಳಲ್ಲಿ 162 ಶಾಖೆಗಳನ್ನು ಹೊಂದಿದೆ. ಸುಮಾರು 2.28 ಲಕ್ಷ ಉದ್ಯೋಗಿಗಳಿಗೆ ಕೆಲಸ ನೀಡಿದೆ. ಕೇವಲ ಹತ್ತು ಸಾವಿರ ಬಂಡವಾಳ ಆರಂಭವಾದ ಈ ಕಂಪೆನಿ ಪ್ರಸ್ತುತ 3 ಲಕ್ಷ 24 ಸಾವಿರ ಕೋಟಿ ರೂ. ವ್ಯವಹಾರ ಮಾಡುತ್ತಿದೆ ಎಂದರೆ ನಂಬಲು ಅಸಾಧ್ಯಸಾಧನೆಯೇ ಸರಿ.

ಫೋರ್ಬ್ಸ್‌ ಪಟ್ಟಿಯಲ್ಲಿ 3ನೇ ಸ್ಥಾನ
ಭವಿಷ್ಯದ ಡಿಜಿಟಲ್‌ ಸೇವೆಗಳು ಮತ್ತು ಸಲಹಾ ವಿಭಾಗದಲ್ಲಿ ಜಾಗತಿಕವಾಗಿ ಮನ್ನಣೆ ಗಳಿಸಿರುವ ಇನ್ಫೋಸಿಸ್‌ಸಂಸ್ಥೆಯು 2019ರಲ್ಲಿ ಫೋರ್ಬ್ಸ್‌ ಬಿಡುಗಡೆಗೊಳಿಸಿದ ಅತ್ಯಂತ ಗೌರವಯುತ ಕಂಪೆನಿಗಳ ಪೈಕಿ ಮೂರನೇ ಸ್ಥಾನವನ್ನು ಗಳಿಸಿತ್ತು. 2018ರಲ್ಲಿ 31ನೇ ಸ್ಥಾನ ಪಡೆದಿತ್ತು. ಒಂದು ವರ್ಷದಲ್ಲಿ ಅಷ್ಟು ಶೀಘ್ರವಾಗಿ ಮೇಲಿನ ಸ್ಥಾನಕ್ಕೆ ಏರಲು ಕಾರಣವಾದುದು ಕಂಪೆನಿಯ ಕಾರ್ಯ ಕ್ಷಮತೆ.

ಸೋಲಿಗೆ ಕುಗ್ಗದಿರಿ, ಗೆಲುವಿಗೆ ಹಿಗ್ಗದಿರಿ
ಮನುಷ್ಯನ ಜೀವನದಲ್ಲಿ ಸೋಲು-ಗೆಲುವು ನಿಶ್ಚಿತ. ಹಾಗಾಗಿ ಸೋತಾಗ ಕುಗ್ಗುವುದು, ಗೆದ್ದಾಗ ಹಿಗ್ಗುವುದು ತರವಲ್ಲ. ಸೋಲುಗಳು ಇನ್ನೊಂದು ಹಾದಿಯನ್ನು ತೆರೆಯುತ್ತವೆ. ನನಗೆ ಬೇರೆ ಪ್ರತಿಷ್ಠಿತ ಕಂಪೆನಿಯಕೆಲಸ ನೀಡಿದ್ದರೆ ನಾನು ಇನ್ಫೋಸಿಸ್‌ ಕಂಪೆನಿ ಆರಂಭಿಸುತ್ತಿರಲಿಲ್ಲ. ಅಂತೆಯೇ ಸೋಲನ್ನು ಸವಾಲಾಗಿ ತೆಗೆದುಕೊಂಡು ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ ಎನ್ನುತ್ತಾರೆ ನಾರಾಯಣ ಮೂರ್ತಿ ಅವರು.

ಸರಳ ಜೀವನ, ಆದರ್ಶ ನಡೆ
ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರದು ಸರಳ ಜೀವನ, ಆದರ್ಶ ನಡೆ. ಮೂಲತಃ ಮಧ್ಯಮ ವರ್ಗದ ಕುಟುಂಬದವರಾ ಅವರು ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ. ನಾಯಕರಾದವರೂ ಆದರ್ಶ, ಆಶಾವಾದ ಮತ್ತು ಕಠಿನ ಪರಿಶ್ರಮವನ್ನು ರೂಢಿಸಕೊಳ್ಳಬೇಕು ಎಂಬುದು ಅವರ ಮಾತು.

ಸಾಧನೆಗೆ ಸಂದ ಗೌರವಗಳು
ಸಾಫ್ಟ್ವೇರ್‌ ಉದ್ಯಮದಲ್ಲಿನ ಸಾಧನೆಯನ್ನು ಪರಿಗಣಿಸಿ ನಾರಾಯಣ ಮೂರ್ತಿ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಪದ್ಮಶ್ರೀ (2000), ಭಾರತ- ಫ್ರಾನ್ಸ್‌ ಫೋರಂ ಪದಕ, ಶ್ರೇಷ್ಠ ಉದ್ಯಮಿ ಪ್ರಶಸ್ತಿ, ಸ್ಟಾರ್‌ ಆಫ್ ಏಶಿಯಾ ಗೌರವ, ಪದ್ಮವಿಭೂಷಣ, ಬಸವಶ್ರೀ ಪ್ರಶಸ್ತಿ ದೊರ ಕಿದ್ದು ಇವರ ಸೇವೆಗೆ ಸಂದ ಗೌರವಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next