Advertisement
ಮೊದಲೆಲ್ಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಮದುವೆ ವಾರ್ಷಿಕೋತ್ಸವ ಸಂಭ್ರಮಾಚರಣೆಗಳು ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿವೆ. ಪ್ರತಿವರ್ಷವೂ ಕೇಕ್ ಕತ್ತರಿಸಿ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಈಗಿನ ಟ್ರೆಂಡ್. ಬದಲಾಗುತ್ತಿರುವ ಕಾಲದಲ್ಲಿ ಈ ವಿದ್ಯಮಾನ ಅವಶ್ಯ ಮತ್ತು ಅನಿವಾರ್ಯ ಕೂಡ. ಏಕೆಂದರೆ, ಇದು ದಂಪತಿಗಳ ನಡುವಿನ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಆದರೆ ಹಿಂದೆಲ್ಲಾ ಸಂಗಾತಿಯ ಬರ್ತ್ ಡೇ, ಮೊದಲ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟಿದ ಹಬ್ಬ… ಈ ರೀತಿಯ ಯಾವ ಆಚರಣೆಗಳೂ ಇರುತ್ತಿರಲಿಲ್ಲ, ಹಾಗಿದ್ದೂ ಸಂಸಾರಗಳು ಸದೃಢವಾಗಿದ್ದವು.
ಇತ್ತೀಚಿಗಷ್ಟೆ ನನ್ನ ಅಜ್ಜನೂ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಅದು ಭರ್ತಿ ಐವತ್ತು ವರ್ಷದ ಗೋಲ್ಡನ್ ಜುಬಿಲಿ. 50 ವರ್ಷಗಳ ಕಾಲ, ನಾಲ್ಕಾರು ಮಕ್ಕಳನ್ನು ಹೆತ್ತು, ಅವರಿಗೆ ಉತ್ತಮ ಶಿಕ್ಷಣ ನೀಡಿ ಬಂದದ್ದೆಲ್ಲವನ್ನೂ ಅದು ಹೇಗೆ ಸರಿದೂಗಿಸಿಕೊಂಡು ಹೋದರು ಎನ್ನುವುದು ಅಚ್ಚರಿಯೇ ಸರಿ. ಇಂದು ಒಂದೇ ಒಂದು ಸಣ್ಣ ಮನಸ್ತಾಪಕ್ಕೆ ಕುಟುಂಬಗಳು ತರಗಲೆಗಳಂತೆ ಹಾರಿಹೋಗುತ್ತಿವೆ. ಅಷ್ಟು ದುರ್ಬಲ ಪರಿಸ್ಥಿತಿ ತಂದುಕೊಂಡುಬಿಟ್ಟಿದ್ದೇವೆ. ‘ಸಾರಿ’, ‘ಥ್ಯಾಂಕ್ಸ್’ಗಳಿಂದಲೇ ಸಂಸಾರ ನಡೆಯುತ್ತಿದೆ. ನಮ್ಮದೇ ಮನೆಯಲ್ಲಿದ್ದಾಗಲೂ ನೂರಾರು ಫಾರ್ಮಾಲಿಟಿಗಳು. ಎಷ್ಟೋ ಸಲ ಅನ್ನಿಸುವುದಿದೆ; ಇದು ಸಂಸಾರವೋ ಇಲ್ಲಾ ಕಾರ್ಪೊರೆಟ್ ಸಂಸ್ಥೆಯೋ ಎಂದು. ಏಕೆಂದರೆ, ಕಂಪನಿಗಳಲ್ಲಿರುವಂತೆಯೇ ಸಂಸಾರದಲ್ಲೂ ಹಲವು ನಿಯಮಾವಳಿ, ಕಟ್ಟಳೆಗಳು! ಅದಕ್ಕೇ ಹಳೆಯ ತಲೆಮಾರಿನವರನ್ನು ಕಂಡಾಗ ಅಚ್ಚರಿಯಾಗುತ್ತದೆ, ಗೌರವ ಮೂಡುತ್ತದೆ. ಹುಡುಗಿ ನೋಡಿದ್ದು ಮದುವೆ ಮನೆಯಲ್ಲಿ!
ಅಜ್ಜನ ಕಾಲದಲ್ಲಿ ಮದುವೆಗಳು ಹೇಗಿರುತ್ತಿದ್ದವು ಎಂದು ಕೇಳಿದಾಗ ನಾಚಿಕೊಳ್ಳುತ್ತಲೇ ನೆನಪಿನ ಬುತ್ತಿಯನ್ನು ಬಿಚ್ಚಿದರು. ಅಜ್ಜನಿಗೆ ಅಜ್ಜಿಯನ್ನು ನೋಡಲು ಹೋಗುವ ವಿಷಯವೇ ಗೊತ್ತಿರಲಿಲ್ಲವಂತೆ. ಹಿರಿಯರು ಅವರವರೇ ಮಾತಾಡಿಕೊಂಡು ಅಜ್ಜಿಯನ್ನು ಮೊದಲೇ ನೋಡಿ ಇಷ್ಟಪಟ್ಟು ನನ್ನಜ್ಜನಿಗೆ ಮದುವೆ ಮಾಡಿಸಿದ್ದರಂತೆ. ಅಜ್ಜ, ಅಜ್ಜಿಯನ್ನು ನೋಡಿದ್ದು ತಾಳಿಕಟ್ಟುವಾಗಲೇ. ಆಗ ಕಾಲವೇ ಹಾಗಿತ್ತು ಮನೆಯಲ್ಲಿನ ಹಿರಿಯರೇ ಕನ್ಯಾನ್ವೇಷಣೆಗೆ ತೆರಳುತ್ತಿದ್ದರು. ಅವರು ಹೇಳಿದ್ದೇ ವೇದವಾಕ್ಯ! ವಧು- ವರರದ್ದು ಕಣ್ಣುಮುಚ್ಚಿ ತಾಳಿ ಕಟ್ಟಿ ಸಂಸಾರ ತೂಗಿಸಿಕೊಂಡು ಹೋಗುವುದೊಂದೇ ಕೆಲಸ.
Related Articles
Advertisement
— ಅಂಜನಾ ಎಸ್.ಎಚ್.