Advertisement

371ನೇ ಕಲಂ ಪರಿಣಾಮಕಾರಿ ಜಾರಿಗೆ ಆದ್ಯತೆ

03:21 PM Apr 21, 2017 | |

ಕಲಬುರಗಿ: ಹೊರ ಭಾಗದಲ್ಲಿ ಹೈದ್ರಾಬಾದ ಕರ್ನಾಟಕ ಭಾಗದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ. 8ರಷ್ಟು ಮೀಸಲಾತಿ ಪಾಲನೆ, ಸರ್ಕಾರದ ವಿವಿಧ ನೇಮಕಾತಿ ಅಧಿಸೂಚನೆಯಲ್ಲಿ 371ನೇ (ಜೆ) ವಿಧಿ ಮೀಸಲಾತಿ ಪಾಲನೆ ಆಗಿದೆಯೋ ಇಲ್ಲವೋ ಎನ್ನುವುದು ಸೇರಿದಂತೆ ಕಲಂನ ಪರಿಣಾಮಕಾರಿ ಜಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಎಚ್‌ಕೆಆರ್‌ಡಿಬಿ ಅಧ್ಯಕ್ಷ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು. 

Advertisement

ಗುರುವಾರ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಆಯೋಜಿಸಿದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 371ನೇ ಜಾರಿಯಲ್ಲಿ ಕೆಲವು ಸಣ್ಣ-ಪುಟ್ಟ ನ್ಯೂನತೆಗಳು ನಡೆಯುತ್ತಿರಬಹುದು. ಆದರೆ ತಾನೇ ಸ್ವತಃ ಸಭೆ ಕರೆದು ಜಾರಿ ಕುರಿತಾಗಿ ಪರಾಮರ್ಶಿಲಾಗುತ್ತಿದೆ. 

ಇಲಾಖಾವಾರು ಖಾಲಿ ಹುದ್ದೆಗಳು ಹಾಗೂ ಭರ್ತಿ ಕುರಿತಾಗಿ ಮಾಹಿತಿ ಪಡೆಯಲಾಗುತ್ತಿದೆ. ಲೋಪ ಕಂಡು ಬಂದಲ್ಲಿ ಸರಿಪಡಿಸುವಲ್ಲಿ ದೃಢ ಹೆಜ್ಜೆ ಇಡಲಾಗುತ್ತಿದೆ. ಗುರುತಿಸಲಾದ 30 ಸಾವಿರ ಹುದ್ದೆಗಳಲ್ಲಿ 18 ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಲಾಗಿದೆ. ಉಳಿದ 12 ಸಾವಿರ ಹುದ್ದೆಗಳನ್ನು ಈ ಸರ್ಕಾರದ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು. 

371ನೇ ಜೆ ವಿಧಿ ಅಡಿಯ ಸ್ಥಳೀಯ ನಿವಾಸಿ ಪ್ರಮಾಣ ಪತ್ರ ನೀಡಿಕೆ ಪ್ರಕ್ರಿಯೆ ವೇಗಗೊಳಿಸಲಾಗಿದೆ. ಎಚ್‌ಕೆಆರ್‌ಡಿಬಿ ಅನುದಾನವನ್ನು ಎಲ್ಲ ಜಿಲ್ಲೆಗಳಿಗೆ ಅಭಿವೃದ್ಧಿಗನುಸಾರ ಹಂಚಿಕೆ ಮಾಡಲಾಗುತ್ತಿದೆ. ಮಂಡಳಿಗೆ ಸರ್ಕಾರ ವರ್ಷಂಪ್ರತಿ ಹೆಚ್ಚಿಗೆ ಅನುದಾನ ನೀಡುತ್ತಿದೆ. ಈ ವರ್ಷವಂತೂ 1500ಕೋಟಿ ರೂ. ನೀಡಿದೆ.

ಇದು ಯಾವುದೇ ಸರ್ಕಾರ ಬಂದರೂ ನಿಲ್ಲೋದಿಲ್ಲ. ವರ್ಷ-ವರ್ಷ ಹೆಚ್ಚಳವಾಗುತ್ತಲೇ ಹೋಗುತ್ತದೆ. ಅದೇ ರೀತಿ 371ನೇ (ಜೆ)ಕಲಂ ವಿಧಿ ಅಡಿಯ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿಯೂ ಯಾವುದೇ ಆತಂಕವಿಲ್ಲದೇ ಹಲವು ದಶಕಗಳ ಕಾಲ ಮುನ್ನಡೆದು ಹೋಗಲಿದೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ತಿಳಿಸಿದರು. 

Advertisement

ಹೈಕೋರ್ಟ್‌ ವ್ಯಾಪ್ತಿಗೆ ಬಳ್ಳಾರಿ ಸೇರ್ಪಡೆಗೆ ಯತ್ನ: ಬಳ್ಳಾರಿ ಜಿಲ್ಲೆ 371ನೇ ವಿಧಿ ಅಡಿ ಸೌಲಭ್ಯವಲ್ಲದೇ ಎಚ್‌ಕೆಆರ್‌ಡಿಬಿ ಅನುದಾನ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯುತ್ತಿದೆ. ಪ್ರಮುಖವಾಗಿ ಹುದ್ದೆಗಳ ನೇಮಕಾತಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಬಳ್ಳಾರಿ ಪಡೆದಿದೆ. ಆದರೆ ಕಲಬುರಗಿ ಹೈಕೋರ್ಟ್‌ ವ್ಯಾಪ್ತಿಗೆ ಸೇರೋದಿಲ್ಲ ಎನ್ನುವುದು ಸಮಂಜಸವಲ್ಲ. ಆದರೆ ಕಲಬುರಗಿ ಹೈಕೋರ್ಟ್‌ ವ್ಯಾಪ್ತಿಗೆ ಸೇರ್ಪಡೆಯಾಗಲು ತಾವು ಪ್ರಯತ್ನಿಸಲಾಗುವುದು ಎಂದು ಹೇಳಿದರು.  

ಹಳ್ಳಿಗಳಿಗೆ ರಸ್ತೆ ಭಾಗ್ಯ: ಬಸ್‌ಗಳೇ ಹೋಗದ ಗ್ರಾಮಗಳಿಗೆಲ್ಲ ಮುಂದಿನ ಎರಡು ವರ್ಷದೊಳಗೆ ಡಾಂಬರೀಕರಣ ರಸ್ತೆ ಭಾಗ್ಯ ಕಲ್ಪಿಸಲಾಗುವುದು. ಒಟ್ಟಾರೆ ಎರಡು ವರ್ಷದೊಳಗೆ ಎಲ್ಲ ರಸ್ತೆಗಳಿಗೆ ಡಾಂಬರೀಕರಣ ರಸ್ತೆಗಳನ್ನು ಕಲ್ಪಿಸಲಾಗುವುದು. ಎಚ್‌ಕೆಆರ್‌ಡಿಬಿ ಹಾಗೂ ಸರ್ಕಾರದ ವಿವಿಧ ವಿಭಾಗಗಳ ಅನುದಾನ ಅಡಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.

ಈ ಸಂಬಂಧ ಕಾರ್ಯಸೂಚಿ ರೂಪಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ, ವಾರ್ತಾಧಿಕಾರಿ ಜಿ. ಚಂದ್ರಕಾಂತ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ದೇವಿಂದ್ರಪ್ಪ ಕಪನೂರ ವೇದಿಕೆಯಲ್ಲಿದ್ದರು. 

ಶುಭಾಶಯ: ಗುರುವಾರದಂದೇ ಸಚಿವರು 50ನೇ ಜನ್ಮದಿನ ಆಚರಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘದ ವತಿಯಿಂದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ ಹಾಗೂ ಖಜಾಂಚಿ ಚಂದ್ರಕಾಂತ ಹಾವನೂರ ಸಚಿವರಿಗೆ ಹೂಗುಚ್ಚ ನೀಡಿ ಶುಭಾಶಯ ಕೋರಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ರವಿ ನರೋಣಾ, ಸುರೇಶ ಬಡಿಗೇರ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next