Advertisement

Article 370; ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದ ಸುಪ್ರೀಂ ತೀರ್ಪು

11:39 PM Dec 11, 2023 | Team Udayavani |

ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಣಯವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯುವ ಮೂಲಕ ಭಾರತದ ಸಾರ್ವಭೌಮತೆಯನ್ನು ಮತ್ತೂಮ್ಮೆ ಸ್ಪಷ್ಟಪಡಿಸಿದೆ. ನಾಲ್ಕು ವರ್ಷಗಳ ಹಿಂದೆ 370ನೇ ವಿಧಿಯನ್ನು ಭಾರತದ ಸಂಸತ್‌ ರದ್ದುಪಡಿಸಿದ ಅನಂತರ ಅಲ್ಲಿ ಹಲವು ಮಹತ್ತರವಾದ ಮತ್ತು ಗುಣಾತ್ಮಕವಾದ ಬದಲಾವಣೆಗಳಾಗಿರುವುದನ್ನು ಅಲ್ಲಗಳೆಯಲಾಗದು.

Advertisement

ಆದರೆ ಜಮ್ಮು-ಕಾಶ್ಮೀರಕ್ಕೆ ಇತಿಹಾಸದ ಅನಿವಾರ್ಯತೆಯಿಂದ ತಾತ್ಕಾಲಿಕ ವಾಗಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಇಷ್ಟು ವರ್ಷ ಮುಂದುವರಿ ಸಿಕೊಂಡು ಹೋಗಿದ್ದೇ ತೀರಾ ದುರಂತ. 2019ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ 370ರ ವಿಧಿಯನ್ವಯ ನೀಡಲಾಗುವ ಎಲ್ಲ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವುದಾಗಿ ನಿರ್ಧರಿಸಿದ್ದು ಭಾರತೀಯ ಇತಿಹಾಸದ ಮಹತ್ವದ ಮೈಲಿಗಲ್ಲು. ಆದರೆ ಇದನ್ನು ಪ್ರಶ್ನಿಸಿ ಕೆಲವರು ಸರ್ವೋತ್ಛ ನ್ಯಾಯಾಲ ಯದ ಮೊರೆ ಹೋಗಿದ್ದುದರಿಂದ ಸಹಜವಾಗಿಯೇ ಇಡೀ ದೇಶದ ಕಣ್ಣು ನ್ಯಾಯಾಲಯದ ತೀರ್ಪಿನ ಮೇಲೆ ಇತ್ತು. ಆದರೆ ವಾದಿಗಳು ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿಕೊಂಡ ನ್ಯಾಯಾ ಲಯ ಸಮರ್ಥನೀಯವಾದ ಹಾಗೂ ದೇಶದ ಸಾರ್ವಭೌಮತೆಗೆ ಪೂರಕ ವಾದ ತೀರ್ಪನ್ನು ಪ್ರಕಟಿಸಿರುವುದು ಸ್ವಾಗತಾರ್ಹ.

ಜಮ್ಮು-ಕಾಶ್ಮೀರದ ಸಂವಿಧಾನದ ಸಭೆಯಲ್ಲಿ ವಿಶೇಷ ಸ್ಥಾನಮಾನದ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಕಾಲಾನುಕ್ರಮೇಣ ಸಂವಿಧಾನ ಸಭೆಯೇ ರದ್ದಾಗಿದ್ದುದರಿಂದ ಈವಿಶೇಷ ಸ್ಥಾನಮಾನದ ನಿರ್ಣಯ ಶಾಶ್ವತ ವಾಗಿ ಉಳಿಯುತ್ತದೆ ಎಂದು ವಾದಿಸಿದ್ದ ಅರ್ಜಿದಾರರು ಸಂವಿಧಾನ ಸಭೆ ಕೈಗೊಂಡ ನಿರ್ಣಯವನ್ನು ಭಾರತದ ಸಂಸತ್‌ ಆಗಲಿ, ರಾಷ್ಟ್ರಪತಿಗಳಾಗಲಿ ತಿರಸ್ಕರಿಸುವ ಹಾಗಿಲ್ಲ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ಖಂಡತುಂಡವಾಗಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್‌ ಪೀಠ, ಭಾರತದ ಸಂಸತ್‌ಗೆ ರಾಜ್ಯಗಳ ಪರವಾಗಿ ನಿರ್ಧಾರ ಕೈಗೊಳ್ಳುವ ಹಕ್ಕಿದೆ. ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಸಾರ್ವಭೌಮತೆಯ ಅಸ್ತಿತ್ವ ಇಲ್ಲ ಎಂದು ಹೇಳುವ ಮೂಲಕ ಭಾರತದ ಅಖಂಡತೆಯನ್ನು ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿದಿದೆ.
ಈ ತೀರ್ಪು ದೇಶದ ಪ್ರಗತಿ ವಿಚಾರದಲ್ಲಿ ದೂರಗಾಮಿ ಪರಿಣಾಮವನ್ನು ಬೀರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಭಾರತದ ಅಭಿವೃದ್ಧಿಗೆ ಹಾಗೂ ಏಕತೆಗೆ ಇದು ಮಹತ್ವದ ದಾರಿದೀಪವಾದ ತೀರ್ಪು.

ಇದರ ಜತೆಗೆ ಮುಂದಿನ ವರ್ಷದೊಳಗೆ ಜಮ್ಮು-ಕಾಶ್ಮೀರದಲ್ಲಿ ಚುನಾ ವಣೆ ನಡೆಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿರುವುದರಿಂದ ಅಲ್ಲಿ ಪ್ರಜಾಪ್ರಭುತ್ವ ಮತ್ತೆ ಅರಳಬಹುದು ಎಂಬ ಭರವಸೆ ದೇಶವಾಸಿಗಳಲ್ಲಿ ಮೂಡಿದೆ. ನ್ಯಾಯಯುತವಾಗಿ ಚುನಾವಣೆ ನಡೆದು ಸಮರ್ಥ ಆಡಳಿತ ವ್ಯವಸ್ಥೆ ಅಲ್ಲಿಗೆ ಬಂದ ಅನಂತರ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಸಂಕಲ್ಪ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಂತಾಗುತ್ತದೆ. ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ಅನಂತರ ಜಮ್ಮು-ಕಾಶ್ಮೀರದಲ್ಲಿ ಪ್ರಗತಿಯ ಕನಸು ಅರಳಿದೆ. ಪ್ರವಾಸೋದ್ಯಮ ಚಿಗುರಿದೆ. ಕಳೆದ ಮೂರು ವರ್ಷಗಳಲ್ಲಿ ಆ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಆಸಕ್ತಿ ವಹಿಸುತ್ತಿದ್ದು, 85,000 ಕೋಟಿ ರೂಗೂ ಹೆಚ್ಚು ಹೂಡಿಕೆ ಪ್ರಸ್ತಾವನೆ ಸರಕಾರದ ಮುಂದೆ ಬಂದಿದೆ. ಈ ಎಲ್ಲ ಬೆಳವಣಿಗೆಗಳು ಭಾರತೀಯರ ನಯಾಕಾಶ್ಮೀರದ ಕನಸಿಗೆ ಸೋಪಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next