Advertisement
ಇನ್ನು ಮುಂದೆ ಕಣಿವೆ ರಾಜ್ಯದಲ್ಲಿ ಲಡಾಖ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಲಿದೆ. ಲೋಕಸಭೆಯಲ್ಲಿ ಮಂಗಳವಾರ ವಿಧೇಯಕ ಮಂಡಿಸಲಾಗುತ್ತದೆ. ದೀರ್ಘ ಕಾಲದಿಂದ ರಾಜಕೀಯವಾಗಿ ವಾದ ಪ್ರತಿವಾದಕ್ಕೆ ಕಾರಣವಾಗಿದ್ದ ಸಂವಿಧಾನದ 371ನೇ ವಿಧಿ ರದ್ದು ಮಾಡುವ ಬಗ್ಗೆ ಸೋಮವಾರ ನಡೆದಿದ್ದ ಕೇಂದ್ರ ಸಂಪುಟದ ವಿಶೇಷ ಸಭೆ ನಿರ್ಧರಿಸಿತ್ತು. ರಾಜ್ಯಸಭೆಯಲ್ಲಿಯೇ ಅದನ್ನು ಪ್ರಕಟಿಸುವ ಬಗ್ಗೆ ಸೂಚನೆ ಲಭಿಸಿತ್ತು.
Related Articles
Advertisement
ಐತಿಹಾಸಿಕ: ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಜತೆಗೆ ಸೇರಿಸಲು ಅವಕಾಶ ನೀಡದೇ ಇರುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ನಿರ್ಧಾರ ಪ್ರಕಟಿಸುವುದು ಐತಿಹಾಸಿಕ. ಅದು ಕಣಿವೆ ರಾಜ್ಯಕ್ಕೆ ಅನ್ವಯವಾಗುವುದಿಲ್ಲ ಎಂದು ಪ್ರತಿಪಕ್ಷಗಳ ಕೋಲಾಹಲದ ನಡುವೆ ಘೋಷಣೆ ಮಾಡಿದರು. ಈ ಬಗ್ಗೆ ರಾಷ್ಟ್ರಪತಿ ಆದೇಶಕ್ಕೆ ಸಹಿ ಮಾಡಿದ್ದಾರೆ ಎಂದರು. ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆ ರದ್ದಾಗಿರುವ ಹಿನ್ನೆಲೆಯಲ್ಲಿ ಮತ್ತು ವಿಧಾನಸಭೆ ಈಗಾಗಲೇ ವಿಸರ್ಜನೆಯಾಗಿ ರುವುದರಿಂದ ಅದರ ಸಂಪೂರ್ಣ ಅಧಿಕಾರ ಸಂಸತ್‌ನಲ್ಲಿಯೇ ಇದೆ ಎಂದರು.
ರಾಷ್ಟ್ರಪತಿಗೆ ಅಧಿಕಾರ ಇದೆ: ಸಂವಿಧಾನದ 370ನೇ ವಿಧಿಯ ನಿಯಮ 3ನ್ನು ಓದಿ ಹೇಳಿದ ಶಾ “ಸಂವಿಧಾನದ 370ನೇ ವಿಧಿ ರದ್ದಾಗಿದೆ ಅಥವಾ ಅದಕ್ಕೆ ತಿದ್ದುಪಡಿ ಮಾಡಲು ರಾಷ್ಟ್ರಪತಿಗೆ ಅಧಿಕಾರ ಇದೆ ಎಂದರು. ಸಂವಿಧಾನದ ಪ್ರಸ್ತಾಪಕ್ಕೆ ಕಾಂಗ್ರೆಸ್ 1952 ಮತ್ತು 1962ರಲ್ಲಿ ಕೈಗೆತ್ತಿಕೊಂಡಿದ್ದ ವಿಧಾನದಂತೆಯೇ ಅನುಸರಿಸುತ್ತಿದ್ದೇವೆ ಎಂದಿರುವ ಶಾ, ಪ್ರಕಟಣೆ ಹೊರಡಿಸಿದ್ದೇವೆ ಎಂದರು.
ಹಾಲಿ ಸ್ಥಿತಿ ಚರ್ಚೆಯಾಗಲಿ: ವಿಧೇಯಕ ರದ್ದು ಮಾಡುವ ಪ್ರಸ್ತಾಪ ಮಾಡುವ ಮುನ್ನ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು ನಿಷೇಧಾಜ್ಞೆ ಜಾರಿಗೊಳಿಸಿದ್ದು ಮತ್ತು ಪ್ರಮುಖ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿದ್ದರ ಬಗ್ಗೆ ಮೊದಲು ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.
ಲೋಕಸಭೆಯಲ್ಲಿ ಕೋಲಾಹಲ: ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪುನರ್ ರಚಿಸುವ ವಿಧೇಯಕ ಮತ್ತು ಸಂವಿಧಾನದ 370ನೇ ವಿಧಿ ರದ್ದು ಮಾಡುವ ಪ್ರಸ್ತಾಪದ ವಿರುದ್ಧ ಕೋಲಾಹಲವೇ ಏರ್ಪಟ್ಟಿತು. ಕಾಂಗ್ರೆಸ್ ಸಂಸದರು “ಪ್ರಜಾಪ್ರಭುತ್ವಕ್ಕೆ ಅವಮಾನ’ “ನ್ಯಾಯ ಬೇಕು’ “ಪ್ರಧಾನಮಂತ್ರಿ ಸದನಕ್ಕೆ ಆಗಮಿಸಬೇಕು’ ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಪ್ರಸ್ತಾಪ: ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ವಿಧೇಯಕ ಮಂಡಿಸಿ ಚರ್ಚೆ ಪ್ರಗತಿಯಲ್ಲಿರುವಂತೆಯೇ ಗೃಹ ಸಚಿವ ಅಮಿತ್ ಶಾ ಅದನ್ನು ಲೋಕಸಭೆಯಲ್ಲಿ ಮಂಡಿಸುವ ಬಗ್ಗೆ ಪ್ರಸ್ತಾಪ ಮಂಡಿಸಿದ್ದಾರೆ. ಜತೆಗೆ ಸಂವಿಧಾನದ 370ನೇ ವಿಧಿ ರದ್ದು ಮಾಡುವ ರಾಷ್ಟ್ರಪತಿಗಳ ಆದೇಶವನ್ನೂ ಸದನದಲ್ಲಿ ಪ್ರಸ್ತಾಪಿಸಿದರು. ಮಂಗಳವಾರ ವಿಧೇಯಕವನ್ನು ಸದಸ್ಯರ ಅನುಕೂಲಕ್ಕಾಗಿ ಮಂಡಿಸುವುದಾಗಿ ಶಾ ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಭಾರತಕ್ಕೆ ಸೇರಲಿ: ರಾಜ್ಯಸಭೆಯಲ್ಲಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ರಾಜ್ಯಸಭೆ ಸದಸ್ಯ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಇದೀಗ ಕಣಿವೆ ರಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸುವ ವಿಚಾರ ಪ್ರಸ್ತಾಪಿಸಲು ಸಾಧ್ಯವೇ ಇಲ್ಲ ಎಂದರು. ಮುಂದಿನ ಹಂತದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಭಾರತಕ್ಕೆ ಸೇರುವಂತಾಗಬೇಕು. ಆ ಬಗ್ಗೆಯೂ ಪ್ರಯತ್ನಗಳು ನಡೆಯಬೇಕು. ಈ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು. 370ನೇ ವಿಧಿ ರದ್ದು ಮಾಡಲು ಸಂವಿಧಾನದ ತಿದ್ದುಪಡಿ ಅಗತ್ಯವಿಲ್ಲ. ಒಂದು ಆದೇಶದ ಮೂಲಕ ಅದನ್ನು ರದ್ದು ಮಾಡಲು ಸಾಧ್ಯವಾಗುತ್ತದೆ. ಆದರೆ ಕಾಂಗ್ರೆಸ್ ಈ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು ಎಂದು ದೂರಿದ್ದಾರೆ.
ಸಂವಿಧಾನದ ಪ್ರತಿ, ಅಂಗಿ ಹರಿದುಕೊಂಡರು: ಕರ್ನಾಟಕದ ವಿಧಾನಸಭೆಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡು ಸುದ್ದಿಯಾಗಿದ್ದರು. ಇದೀಗ ಪಿಡಿಪಿಯ ಇಬ್ಬರು ರಾಜ್ಯಸಭೆ ಸದಸ್ಯರಾಗಿರುವ ಮಿರ್ ಫಯಾಜ್ ಮತ್ತು ನಝೀರ್ ಅಹ್ಮದ್ ಲವೇ ಕೇಂದ್ರ ನಿರ್ಧಾರ ಖಂಡಿಸಿ ಸದನದ ಬಾವಿಗೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಸಂವಿಧಾನದ ಪ್ರತಿ ಹರಿದರು. ಜತೆಗೆ ಅವರು ಧರಿಸಿದ್ದ ಕುರ್ತಾವನ್ನು ಹರಿದುಕೊಂಡರು. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮಾರ್ಶಲ್‌ಗಳ ಮೂಲಕ ಅವರನ್ನು ಹೊರಹಾಕಿಸಿದರು. ಜತೆಗೆ ಸಂವಿಧಾನದ ಪ್ರತಿ ಹರಿದ ಕಾರಣ ಸಂಸದರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಪೇಪರ್ ಮತದಾನ: ತಾಂತ್ರಿಕ ಕಾರಣಗಳಿಂದ ಬಟನ್ ಒತ್ತಿ ಮತ ಹಾಕುವ ವ್ಯವಸ್ಥೆ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಎಲ್ಲರೂ ಪೇಪರ್ ಮೂಲಕ ವಿಧೇಯಕದ ಪರ-ವಿರೋಧ ಮತ ಚಲಾಯಿಸಲು ಸಭಾಪತಿ ಅವಕಾಶ ಮಾಡಿಕೊಟ್ಟರು.