Advertisement

Article 370 ಬಂದಿದ್ದು ಹೇಗೆ? ಹೋಗಿದ್ದು ಹೇಗೆ?

11:28 PM Dec 11, 2023 | Team Udayavani |

370ನೇ ವಿಧಿ ಎಂದರೇನು?
ಭಾರತದ ಸಂವಿಧಾನದಲ್ಲಿನ 370ನೇ ವಿಧಿ ಅನ್ವಯ ಜಮ್ಮು-ಕಾಶ್ಮೀರಕ್ಕೆ “ತಾತ್ಕಾಲಿಕ’ವಾಗಿ ಪ್ರತ್ಯೇಕ ಸ್ಥಾನಮಾನ ನೀಡಲಾಗಿತ್ತು. ಇದು ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್‌ ಹಾಗೂ ಭಾರತದ ಪ್ರಧಾನಿ ಜವಾಹರಲಾಲ್‌ ನೆಹರೂ ನಡುವೆ ನಡೆದ ಒಪ್ಪಂದದ ಪ್ರಕಾರ ಇದು ಜಾರಿಗೆ ಬಂದಿತ್ತು. ಆಗ ಜಮ್ಮು-ಕಾಶ್ಮೀರದ “ಪ್ರಧಾನಿ’ಯಾಗಿದ್ದ ಶೇಖ್‌ ಅಬ್ದುಲ್ಲಾ ಅವರು ಈ ಒಪ್ಪಂದ ತಾತ್ಕಾಲಿಕವಾಗಿರದೆ ಶಾಶ್ವತವಾ ಗಿರಬೇಕು ಎಂದು ಒತ್ತಡ ಹೇರಿದ್ದರು.

Advertisement

ಜಾರಿಗೆ ಬಂದ ಬಳಿಕ‌ ಏನಾಯಿತು?
ಈ ಒಪ್ಪಂದ ಜಾರಿಗೆ ಬಂದ ಅನಂತರ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಬಾವುಟ ಇತ್ತಲ್ಲದೆ, ಭಾರತ ಸರಕಾರ ಇಲ್ಲಿನ ಆಡಳಿತದಲ್ಲಿ ತಲೆತೂರಿಸುವ ಹಾಗಿಲ್ಲ ಎಂದು ಒಪ್ಪಂದವಾಯಿತು. ಅಲ್ಲದೆ ಅಲ್ಲಿನ ಜನರ ಮೂಲಭೂತ ಹಕ್ಕು, ನಾಗರೀಕತೆ ಹಾಗೂ ಆಸ್ತಿ ಒಡೆತನ ವಿಚಾರದಲ್ಲಿ ಪ್ರತ್ಯೇಕ ಕಾನೂನೇ ಇತ್ತು. ಕೇಂದ್ರ ಸರಕಾರ
ರಕ್ಷಣೆ, ಹಣಕಾಸು, ವಿದೇ ಶಾಂಗ ವ್ಯವಹಾರ ಹೊರತು ಪಡಿಸಿ ಯಾವುದೇ ಕಾನೂನು ಜಾರಿಗೆ ತರಬೇಕಿದ್ದರೂ ಅಲ್ಲಿನ ಶಾಸಕಾಂಗದ ಸಮ್ಮತಿ ಪಡೆದುಕೊಳ್ಳ ಬೇಕಿತ್ತು. ಒಂದು ವೇಳೆ ಇದಕ್ಕೆ ಸಹಮತವನ್ನು ಹೊಂದದೇ ಇದ್ದಲ್ಲಿ ವಿಭಜನೆಗೂ ಪೂರ್ವ ಸ್ಥಿತಿಗೆ ಅಂದರೆ ತಾವು ಪ್ರತ್ಯೇಕ ದೇಶವಾಗಬೇಕಾಗುತ್ತದೆ ಎಂಬ ಷರತ್ತು ಒಪ್ಪಂದಲ್ಲಿ ಇತ್ತು.

ಜಾರಿಗೆ ಬಂದಿದ್ದು ಯಾವಾಗ?
ಅಕ್ಟೋಬರ್‌ 17, 1949ರಂದು 370ನೇ ವಿಧಿಯನ್ನು ಜಾರಿಗೊಳಿಸಲಾಯಿತು. ಭಾರತದ ಸಂವಿಧಾನದಿಂದ ಜಮ್ಮು – ಕಾಶ್ಮೀರ ರಾಜ್ಯವನ್ನು ಹೊರಗಿಡಲಾಯಿತು. ಇದರಲ್ಲಿ ತನ್ನದೇ ಸಂವಿಧಾನವನ್ನು ಹೊಂದಲು ಜಮ್ಮು ಕಾಶ್ಮೀರಕ್ಕೆ ಅವಕಾಶ ಮಾಡಿಕೊಡಲಾಯಿತು. ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂವಹನವನ್ನು ಹೊರತುಪಡಿಸಿ ಎಲ್ಲ ಇತರ ವಿಷಯಗಳಲ್ಲಿ ರಾಜ್ಯವೇ ತನ್ನ ಕಾನೂನು ರಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಈ ವಿಧಿ ತಾತ್ಕಾಲಿಕವಾಗಿದ್ದು, ಇದನ್ನು ರಾಜ್ಯದ ಶಾಸನಸಭೆ ಅನುಮೋದಿಸಿತು. ಇದರ ಅಡಿಯಲ್ಲಿ ರಾಜ್ಯದ ಸಂವಿಧಾನವನ್ನು ರೂಪಿಸಲಾಯಿತು ಮತ್ತು ರಾಜ್ಯ ಮತ್ತು ಕೇಂದ್ರದ ಅಧಿಕಾರವನ್ನು ಇದರಲ್ಲಿ ನಿಗದಿಪಡಿಸಲಾಯಿತು.

ಹೊರಗಿನವರು ಏಕೆ ಇಲ್ಲಿ ಭೂಮಿ ಖರೀದಿ ಮಾಡಬಾರದಾಗಿತ್ತು?
1950-54ರ ಅವಧಿಯಲ್ಲಿ ರಾಜ್ಯ ಸರಕಾರ ಮತ್ತು ಭಾರತ ಸರಕಾರದ ಮಧ್ಯೆ ನಡೆದ ಚರ್ಚೆಯ ಅನಂತರ ಹಲವು ಅಧ್ಯಾದೇಶಗಳನ್ನು ಹೊರಡಿಸಲಾಗಿದೆ. ಇದೇ ವೇಳೆ ಸಂವಿಧಾನಕ್ಕೆ 35ಎ ವಿಧಿಯನ್ನೂ ಸೇರಿಸಲಾಯಿತು. ಈ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರದ ಹೊರಗಿನವರು ಇಲ್ಲಿ ಭೂಮಿಯನ್ನು ಖರೀದಿ ಮಾಡುವುದು ಅಥವಾ ಉದ್ಯೋಗ ಪಡೆದುಕೊಳ್ಳುವುದನ್ನು ನಿರ್ಬಂಧಿಸಲಾಯಿತು. ಹಾಗೆಯೇ ಜಮ್ಮು-ಕಾಶ್ಮೀರ ನಾಗರಿಕರಿಗೆ ಭಾರತದ ಪೌರತ್ವ ಒದಗಿ ಸಲಾಯಿತು. ಅಷ್ಟೇ ಅಲ್ಲ, ಜಮ್ಮು – ಕಾಶ್ಮೀರದ ಜನರಿಗೆ ಭಾರತದ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳನ್ನೂ ಅನ್ವಯವಾಗುವಂತೆ ಮಾಡಿತು. ಜತೆಗೆ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯವ್ಯಾಪ್ತಿಯನ್ನು ಜಮ್ಮು-ಕಾಶ್ಮೀರಕ್ಕೆ ವಿಸ್ತರಿಸಿತ್ತು.

ಯಾವಾಗ ರದ್ದಾಯಿತು?
2019ರಲ್ಲಿ ಅತ್ಯಂತ ಅನಿರೀಕ್ಷಿತ ಮತ್ತು ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದುಪಡಿಸುವ ನಿರ್ಧಾರಕ್ಕೆ ಬಂದಿತು. ಗೃಹ ಸಚಿವ ಅಮಿತ್‌ ಶಾ ಅವರು ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆ ಮಂಡಿಸುವ ಮೂಲಕ ಈ ಕ್ರಮ ಕೈಗೊಂಡರು. ಜತೆಗೆ ಜಮ್ಮು- ಕಾಶ್ಮೀರವನ್ನು ಲಡಾಖ್‌ ಹಾಗೂ ಜಮ್ಮು – ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಲಾಯಿತು.

Advertisement

ಕಾಶ್ಮೀರ ಹೋರಾಟಗಾರರ ನೆನಪು
ಡಾ| ಶ್ಯಾಮಪ್ರಸಾದ್‌ ಮುಖರ್ಜಿ ಬಲಿದಾನ
ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿ ರದ್ದತಿ ಹಿಂದೆ ಬಿಜೆಪಿಯ ಬಲಿದಾನದ ಕತೆ ಇದೆ. ಬಿಜೆಪಿಯ ಮೂಲಪುರುಷ ಡಾ| ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ಈ ಹೋರಾಟದಲ್ಲೇ ಬಲಿ ಯಾದರು. “ಏಕ್‌ ದೇಶ್‌ ಮೆ ದೋ ವಿಧಾನ್‌ ನಹಿ ಚಲೇಗಾ’ ಎಂಬ ಘೋಷ ವಾಕ್ಯದೊಂದಿಗೆ ಅವರು ವಿಶೇಷ ಸ್ಥಾನಮಾನವನ್ನು ಬಲವಾಗಿ ವಿರೋಧಿಸುತ್ತಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಬಾರದು, ಕನಿಷ್ಠ ಪಕ್ಷ ಜಮ್ಮು ವನ್ನಾದರೂ ಅದರಿಂದ ಹೊರಗಿಡ ಬೇಕೆಂದು ಮುಖರ್ಜಿ ಹೋರಾಟ ನಡೆಸಿದ್ದರು. ಅದಕ್ಕಾಗಿಯೇ ಅವರು ಮೇ 8, 1953ರಲ್ಲಿ ದಿಲ್ಲಿಯಿಂದ ಶ್ರೀ ನಗರಕ್ಕೆ ತೆರಳಿ ಭಾರೀ ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರಕಾರದ ನಿರ್ದೇಶನ ವಿರೋಧಿಸಿ ಪ್ರತಿಭಟನೆ ನಡೆಸಿದ್ದರಿಂದ ಮೇ 11ರಂದು ಅವರನ್ನು ಬಂಧಿಸಲಾ ಯಿತು. ಜೂ.22ರಂದು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು.

ಮೊದಲ ಬಾರಿ ನೆಹರೂ ಸರಕಾರ ಅಧಿಕಾರಕ್ಕೆ ಬಂದಾಗ ಡಾ| ಶ್ಯಾಮಪ್ರಸಾದ್‌ ಮುಖರ್ಜಿ, ಆ ಸರಕಾರದ ಸಂಪುಟ ಸದಸ್ಯ ರಾಗಿದ್ದರು. ಮುಂದೆ ನೆಹರೂ ಜತೆಗೆ ತೀವ್ರ ಭಿನ್ನಾಭಿಪ್ರಾಯ ಉಂಟಾಯಿತು. ಜಮ್ಮು – ಕಾಶ್ಮೀರ ಮತ್ತಿತರ ಸಂಗತಿಗಳಿಗೆ ಸಂಬಂಧಿಸಿದಂತೆ ಇಬ್ಬರೂ ತೀವ್ರ ವಿರುದ್ಧ ನಿಲುವು ಹೊಂದಿ ದ್ದರು. ಕಡೆಗೆ ಕಾಂಗ್ರೆಸನ್ನು ತೊರೆದು, ಜನಸಂಘವನ್ನು ಕಟ್ಟಿದರು. 1952ರ ಚುನಾವಣೆಯಲ್ಲಿ ಜನಸಂಘಕ್ಕೆ 3 ಲೋಕಸಭಾ ಸ್ಥಾನ ಗೆಲ್ಲಲು ಮಾತ್ರ ಸಾಧ್ಯವಾಯಿತು.

ಇದೇ ಸಮಯದಲ್ಲಿ ಕಾಶ್ಮೀರ ವಿವಾದ ತಾರಕಕ್ಕೇರಿತ್ತು. ಕಾಶ್ಮೀರ ನಾಯಕ ಶೇಖ್‌ ಅಬ್ದುಲ್ಲಾ ಬಯಸಿದ್ದ ಹೆಚ್ಚಿನ ಅಧಿಕಾರಗಳನ್ನು ಪ್ರಧಾನಿ ಸರಕಾರ ನೀಡುತ್ತ ಬಂದಿತು. ಅಲ್ಲಿ ಭೂಮಿ ಖರೀದಿಸಲು ದೇಶದ ಉಳಿದ ಭಾಗದ ಜನರಿಗೆ ಅವಕಾಶ ನೀಡದೆ ಇರುವುದು, ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ ಉಂಟಾದರೆ ಅಲ್ಲಿನ ರಾಜ್ಯ ಸರಕಾರದ ಅನುಮತಿಯಿಲ್ಲದೇ ಕೇಂದ್ರ ಸರಕಾರ ಸೇನೆ ಕಳುಹಿಸಲು ಸಾಧ್ಯವಾಗಬಾರದು ಎಂಬೆಲ್ಲ ಬೇಡಿಕೆಗೆ ಕೇಂದ್ರ ಸಮ್ಮತಿಸುತ ಬಂದಿತು. ಈ ವಿಚಾರದಲ್ಲಿ ಮುಖರ್ಜಿಗೂ ನೆಹರೂಗೂ ತೀವ್ರ ತಿಕ್ಕಾಟ ಶುರುವಾಯಿತು. ಹೋರಾಟವನ್ನು ಮುಖರ್ಜಿ ದಿಲ್ಲಿಯ ಬೀದಿ ಬೀದಿಗೆ ಹಬ್ಬಿಸಿದರು. ಪ್ರತಿಭಟನೆ ತೀವ್ರವಾಗಿ 1953 ಎಪ್ರಿಲ್‌ನಲ್ಲಿ 1300 ಪ್ರತಿಭಟನಾಕಾರರನ್ನು ಬಂಧಿಸಲಾಯಿತು.

ಸಾಕಾರಗೊಂಡ ಸರ್ದಾರ್‌ ಪಟೇಲ್‌ ಕನಸು
ಭಾರತದ ಉಕ್ಕಿನ ಮನುಷ್ಯ ಎಂಬ ಖ್ಯಾತಿ ಹೊಂದಿದ್ದ ಸರ್ದಾರ್‌ವಲ್ಲಭ ಭಾಯಿ ಪಟೇಲ್‌, ಸ್ವಾತಂತ್ರಾéನಂತರ ಇಡೀ ದೇಶವನ್ನು ಒಗ್ಗೂಡಿಸಲು ಬಲವಾಗಿ ಶ್ರಮಿ ಸಿದ್ದರು. ಭಾರತದ ಬಹುತೇಕ ರಾಜ್ಯಗಳು ಹೆಚ್ಚು ಶ್ರಮವಿಲ್ಲದೇ, ಭಾರತ ಸರಕಾರವನ್ನು ಒಪ್ಪಿಕೊಂಡವು. ಸವಾಲಾಗಿದ್ದು ಹೈದರಾಬಾದ್‌, ಜುನಾಗಢ ಮತ್ತು ಜಮ್ಮು-ಕಾಶ್ಮೀರ ಮಾತ್ರ. ಈ ಪೈಕಿ ಮೊದಲೆರಡು ಸ್ಥಳಗಳಲ್ಲಿ ಮುಸ್ಲಿಂ ರಾಜ, ಹಿಂದೂ ಪ್ರಜೆಗಳು ಇದ್ದರು. ಸೇನಾ ಕಾರ್ಯಾ ಚರಣೆ ಮೂಲಕ ಇವೆರಡನ್ನು ಪಟೇಲ್‌ ವಶಪಡಿಸಿಕೊಂಡರು. ಆದರೆ ಹಿಂದೂ ರಾಜ, ಮುಸ್ಲಿಂ ಪ್ರಜೆಗಳು ಇದ್ದ ಜಮ್ಮು- ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ದೊಡ್ಡ ಸಾಹಸವಾಗಿತ್ತು. ಆ ಹಂತದಲ್ಲಿ ಹಲವಾರು ಸುತ್ತಿನ ಮಾತುಕಥೆ ಅನಂತರ ಮಹಾರಾಜ ಹರಿಸಿಂಗ್‌ ಭಾರತಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದರು. ನೆಹರೂ ಮತ್ತು ಶೇಖ್‌ ಅಬ್ದುಲ್ಲಾ ನಡುವೆ ಒಪ್ಪಂದದ ಪ್ರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಯಿತು. ಈಗ ಸರ್ದಾರ್‌ವಲ್ಲಭ ಭಾಯ್‌ ಪಟೇಲ್‌ ಕನಸು ನಿಜಕ್ಕೂ ನನಸಾದಂತಾಗಿದೆ.

ತ್ರಿವರ್ಣ ಧ್ವಜ ಹಾರಿಸಿದ್ದ ಮುರಳಿ ಮನೋಹರ್‌ ಜೋಷಿ
1992ರಲ್ಲಿ ಬಿಜೆಪಿ ಮುಖ್ಯಸ್ಥರಾಗಿದ್ದ ಮುರಳಿ ಮನೋಹರ್‌ ಜೋಷಿ ಗುಂಡಿನ ಸದ್ದಿನ ನಡುವೆ ಶ್ರೀನಗರದ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ರೋಚಕ ಘಟನೆ ಭಾರತೀಯರ ಮೈ ನವಿರೇಳಿಸುವಂಥದ್ದು. ಅವರು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ತೀವ್ರ ವಿರೋಧಿಗಳಾಗಿದ್ದರು. ಜಮ್ಮುವಿನಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ, ಜೋಷಿ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಜ.26ರಂದು ರಾಷ್ಟ್ರಧ್ವಜ ಹಾರಿಸಿಯೇ ಹಾರಿಸುತ್ತೇವೆ ಎಂದು ಘೋಷಿಸಿದರು. ತತ್‌ಕ್ಷಣ ಅಲ್ಲಿ ಉಗ್ರಗಾಮಿ ಚಟುವಟಿಕೆಗಳು ತೀವ್ರ ಗೊಂಡಿದ್ದವು. ಜೋಷಿಯನ್ನು ತಡೆಯಲು ಹಿಂಸಾತ್ಮಕ ಚಟುವಟಿಕೆ ಜೋರಾಯಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಜೋಷಿಯವರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಏಕತಾಯಾತ್ರೆ ನಡೆಸಿದರು. ಗಣರಾಜ್ಯೋತ್ಸವಕ್ಕೆ ಎರಡು ದಿನಗಳಷ್ಟೇ ಇರುವಾಗ ಬಾಂಬ್‌ ಸ್ಫೋಟ ನಡೆದಿತ್ತು. ಹೀಗಾಗಿ ಜೋಷಿಯನ್ನು ವಿಮಾನದ ಮೂಲಕ ಲಾಲ್‌ಚೌಕ್‌ನಲ್ಲಿ ಇಳಿಸಲಾಯಿತು. ಗುಂಡಿನ ಸದ್ದಿನ ನಡುವೆ ಜೋಷಿ, ಮಧ್ಯಾಹ್ನದ ಅನಂತರ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next