ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆ.2ರಿಂದ ನಡೆಸಲಿದೆ.
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾ| ಸಂಜಯ್ ಕಿಶನ್ ಕೌಲ್, ನ್ಯಾ| ಸಂಜೀವ್ ಖನ್ನಾ, ನ್ಯಾ| ಬಿ.ಆರ್.ಗವಾಯ್ ಮತ್ತು ನ್ಯಾ| ಸೂರ್ಯಕಾಂತ್ ಅವರನ್ನು ಒಳಗೊಂಡ ಪಂಚ ಸದಸ್ಯರ ಸಾಂವಿಧಾನಿಕ ಪೀಠವು, ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ, ದಿನನಿತ್ಯದ ಆಧಾರದಲ್ಲಿ ಅರ್ಜಿಯ ವಿಚಾರಣೆ ನಡೆಸಲಿದೆ.
370ನೇ ವಿಧಿ ರದ್ದು ಪ್ರಶ್ನಿಸಿ ಇದುವೆರೆಗೂ ಒಟ್ಟು 23 ಅರ್ಜಿಗಳು ಸಲ್ಲಿಕೆಯಾಗಿವೆ. ಜು.25ರೊಳಗೆ ಆನ್‌ಲೈನ್ ಮೂಲಕ ಪ್ರತಿಕ್ರಿ ಯೆಗಳನ್ನು ನೀಡುವಂತೆ ಸಾಂವಿಧಾನಿಕ ಪೀ ಠವು ಸಂಬಂಧಿಸಿದ ಫಿರ್ಯಾದುದಾರರಿಗೆ ಸೂಚಿಸಿದೆ. ಅಲ್ಲದೇ ವಿಷಯಕ್ಕೆ ಸಂಬಂ ಧಿಸಿದಂತೆ ಎಲ್ಲ ದಾಖಲೆಗಳನ್ನು ಕಾಗದ ರಹಿತವಾಗಿ ಸಲ್ಲಿಸುವಂತೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಗೆ ಸಂಬಂ ಧಿಸಿದಂತೆ ಕೇಂದ್ರವು ಸಲ್ಲಿಸಿರುವ ಹೊಸ ಪ್ರಮಾಣಪತ್ರವನ್ನು ಪರಿಗಣಿಸುವುದಿಲ್ಲ. ಸಾಂವಿಧಾನಿಕ ವಿಚಾರಗಳ ಕುರಿತು ಮಾತ್ರ ವಿಚಾರಣೆ ನಡೆಸಲಿದ್ದೇವೆ ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಸ್ಪಷ್ಟಪಡಿಸಿದೆ.
ಅರ್ಜಿ ಹಿಂಪಡೆದ ಫೈಸಲ್, ರಶೀದ್: ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಮತ್ತು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ತಮ್ಮ ಅರ್ಜಿಗಳನ್ನು ಹಿಂಪಡೆದಿದ್ದಾರೆ ಎಂದು ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ನ್ಯಾಯಪೀಠಕ್ಕೆ ತಿಳಿಸಿದರು. ಈ ವೇಳೆ ಈ ಇಬ್ಬರ ಹೆಸರನ್ನು ಅರ್ಜಿದಾರರ ಪಟ್ಟಿಯಿಂದ ಕೈಬಿಡುವಂತೆ ಸಿಜೆಐ ರಿಜಿಸ್ಟ್ರಿಗೆ ಸೂಚಿಸಿದರು.
ಫೈಸಲ್ ಅವರು 2009 ಯುಪಿಎಸ್‌ಸಿ ಟಾಪರ್ ಆಗಿದ್ದು, ಈ ಸಾಧನೆ ಮಾಡಿದ ಮೊದಲ ಕಾಶ್ಮೀರಿ ಎಂಬ ಖ್ಯಾತಿಗೆ ಪಾತ್ರ ರಾಗಿದ್ದರು. 2019ರಲ್ಲಿ ಅವರು ಸ್ವಯಂನಿವೃತ್ತಿ ಪಡೆದು, “ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂಮೆಂಟ್’ ಎಂಬ ರಾಜಕೀಯ ಪಕ್ಷ ಆರಂಭಿಸಿದರು. 2020ರಲ್ಲಿ ಅವರು ಪಕ್ಷದಿಂದ ಹೊರಬಂದರು. ಶೆಹ್ಲಾ ರಶೀದ್ ಅವರು ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಉಪಾಧ್ಯಕ್ಷೆಯಾಗಿದ್ದಾರೆ.