Advertisement

Article 32;ಕೇಂದ್ರದ ವಿರುದ್ಧ ಸುಪ್ರೀಂ ಸಂಘರ್ಷ: ಕರ್ನಾಟಕದ ವಾದವೇನು?

12:29 AM Mar 24, 2024 | Team Udayavani |

ಬೆಂಗಳೂರು: ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ಕಾನೂನು ಸಮರ ಸಾರಿರುವ ರಾಜ್ಯ ಸರಕಾರವು ಈಗ ನ್ಯಾಯಕ್ಕಾಗಿ ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಮೊರೆಯಿಟ್ಟಿದೆ. ಸಂವಿಧಾನದ 32ನೇ ವಿಧಿಯ ಅನ್ವಯ ರಾಜ್ಯ ಈ ದಾರಿ ಹಿಡಿದಿದೆ. ಇದಕ್ಕೆ ಮುನ್ನ “ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಅಭಿಯಾನ ಆರಂಭಿಸಿದ್ದ ರಾಜ್ಯ ಸರಕಾರವು ರಾಜ್ಯದ ತೆರಿಗೆ ಪಾಲು ನೀಡುವಂತೆ ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ನಂತರ ವಿಧಾನಮಂಡಲದ ಉಭಯ ಸದನಗಳಲ್ಲೂ ವಿಪಕ್ಷಗಳ ವಿರೋಧದ ನಡುವೆ ತೆರಿಗೆ ಪಾಲು ಕೊಡುವಂತೆ ನಿರ್ಣಯ ಕೈಗೊಂಡಿತ್ತು.

Advertisement

ಈಗ ರಾಜ್ಯ ಸರಕಾರದ ಮುಖ್ಯ ಕಾರ್ಯ ದರ್ಶಿ ರಜನೀಶ್‌ ಗೋಯಲ್‌ ಕಾನೂನು ಕೋಶದ ಕೆ.ಎಂ. ಪುಟ್ಟಸ್ವಾಮಿ ಹಾಗೂ ಸುಪ್ರೀಂ ಕೋರ್ಟ್‌ ವಕೀಲರಾದ ಡಿ.ಎಲ್‌. ಚಿದಾನಂದ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರವನ್ನು ಪ್ರತಿವಾದಿಗಳನ್ನಾಗಿಸಿದೆ.

ಸದ್ಯ ನ್ಯಾಯಾಲಯಕ್ಕೆ ರಜೆ ಇರುವುದರಿಂದ ಮುಂದಿನ ವಾರ ಅರ್ಜಿ ವಿಚಾರಣೆ ಬರಲಿದೆ ಎನ್ನುವ ವಿಶ್ವಾಸವನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಶನಿವಾರ ಗೃಹಕಚೇರಿ “ಕೃಷ್ಣಾ’ ದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರದಿಂದ ಪರಿಹಾರ ಕೇಳಿ ಐದು ತಿಂಗಳಾದರೂ ಸ್ಪಂದಿಸದೆ ಇರುವುದರಿಂದ ನ್ಯಾಯ ಕೇಳಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವಂತಾಗಿದೆ ಎಂದರು.

ರಾಜ್ಯದ ವಾದವೇನು?
1 ಕರ್ನಾಟಕಕ್ಕೆ ಎನ್‌ಡಿಆರ್‌ಎಫ್ ಮೂಲಕ ಬರ ಪರಿಹಾರ ನೀಡಲು ಸರ್ವೋಚ್ಚ ಪೀಠವು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು.
2 ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ಬರವಿದೆ. 48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ವಾಗಿದೆ. ಕೇಂದ್ರ ಇನ್ನೂ ನಯಾಪೈಸೆ ನೀಡಿಲ್ಲ,
3 ಬರದ ಹಿನ್ನೆಲೆಯಲ್ಲಿ ಕೇಂದ್ರದ ಅಂತರ್‌ ಸಚಿವಾಲಯ ಸಮಿತಿ (ಐಎಂಸಿ) ರಾಜ್ಯಕ್ಕೆ ಆಗಮಿಸಿ, ಮೂರು ತಂಡಗಳಾಗಿ ಅಧ್ಯಯನ ನಡೆಸಿದೆ. ಅ. 29ರಂದು ತಮ್ಮ ವರದಿಯನ್ನು ಸಲ್ಲಿಸಿದೆ. ಆದರೂ ಪರಿಹಾರ ಸಿಕ್ಕಿಲ್ಲ.
4 ಬೆಳೆ ನಷ್ಟ ಪರಿಹಾರವಾಗಿ 4,663.12 ಕೋಟಿ ರೂ., ಕುಟುಂಬಗಳ ಜೀವ ನೋಪಾಯದ ಪರಿಹಾರವಾಗಿ 12,577 ಕೋಟಿ ರೂ., ನೀರಿನ ಕೊರತೆ ನೀಗಿಸಲು 566.78 ಕೋಟಿ ರೂ., ಪಶು ಸಂಗೋಪನೆಗಾಗಿ 363.68 ಕೋಟಿ ರೂ. ಸೇರಿ ಒಟ್ಟು 18,171.44 ಕೋಟಿ ರೂ.ಗಳ ನೆರವು ಬೇಕು.
5 ನರೇಗಾದಡಿ 150 ಮಾನವ ದಿನಗಳನ್ನು ಸೃಜಿಸಿ,
ಜನರಿಗೆ ಕೂಲಿ ಕೊಡಬೇಕು.
6 ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಡೆಗೆ ಪ್ರಧಾನಿ ಮೋದಿಗೂ ಮನವಿ ಸಲ್ಲಿಸಲಾಗಿದೆ. ಅವರು ಈ ಕಡೆ ಗಮನ ನೀಡಬೇಕು.
7 2020ರ ಬರ ನಿರ್ವಹಣ ಕೈಪಿಡಿ ಮತ್ತು 2005ರ ವಿಪತ್ತು ನಿರ್ವಹಣ ಕಾಯ್ದೆ ಅನ್ವಯ ಕೇಂದ್ರವು ಕರ್ನಾಟಕಕ್ಕೆ ನೆರವು ನಿರಾಕರಿಸುತ್ತಿದೆ. ಈ ಮೂಲಕ ರಾಜ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂ ಸಿದೆ.
8 ಕೇಂದ್ರ ಹಣ ನೀಡದಿದ್ದರೂ ಸದ್ಯ ರಾಜ್ಯ ಸರಕಾರವೇ ಬರ ನಿರ್ವಹಣೆಗಾಗಿ ಹಣ ನೀಡುತ್ತಿದೆ. ಮೊದಲ ಹಂತದಲ್ಲಿ 33.44
ಲಕ್ಷ ರೈತರಿಗೆ ತಲಾ 2 ಸಾವಿರ ರೂ.ಗಳಂತೆ 650 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರದ ಮುಂದಿಟ್ಟಿದ್ದ ಬೇಡಿಕೆ ಏನು?
35,162 ಕೋ. ರೂ. ಮೌಲ್ಯದ 48 ಲಕ್ಷ ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಬೆಳೆ, ದಾಸ್ತಾನು, ಇಳುವರಿ, ರೈತರ ಆದಾಯಕ್ಕೆ ಹೊಡೆತ ಬಿದ್ದಿದ್ದು, ಆಹಾರ ಧಾನ್ಯಗಳ ಬೆಲೆ ಏರಿಕೆ ಹಾಗೂ ನೀರಿನ ಕೊರತೆ ಹೆಚ್ಚುತ್ತಿದೆ. ಬೆಳೆ ನಷ್ಟ ಪರಿಹಾರವಾಗಿ 4,663.12 ಕೋ. ರೂ. ಇನ್‌ಪುಟ್‌ ಸಬ್ಸಿಡಿ, ಬರದಿಂದ ಕುಟುಂಬಗಳ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಉಂಟಾಗಿರುವುದರ ಪರಿಹಾರವಾಗಿ 12,577 ಕೋ. ರೂ., ನೀರಿನ ಕೊರತೆ ನೀಗಿಸಲು 566.78 ಕೋ. ರೂ., ಪಶು ಸಂಗೋಪನೆಗಾಗಿ 363.68 ಕೋ.ರೂ. ಸಹಿತ ಒಟ್ಟು 18,171.44 ಕೋ. ರೂ. ನೆರವು ಕೊಡಿ. ನರೇಗಾದಡಿ 150 ಮಾನವ ದಿನ ಸೃಜಿಸಿ, ಕೂಲಿ ಕೊಡಿ ಎನ್ನುವುದು ರಾಜ್ಯದ ಬೇಡಿಕೆ.

Advertisement

ರಾಜ್ಯ ಸರಕಾರದಿಂದಲೇ ಬರ ನಿರ್ವಹಣೆ
ರಾಜ್ಯ ಸರಕಾರ ತಾತ್ಕಾಲಿಕವಾಗಿ ಮೊದಲ ಹಂತದಲ್ಲಿ 33.44 ಲಕ್ಷ ರೈತರಿಗೆ ತಲಾ 2 ಸಾವಿರ ರೂ.ಗಳಂತೆ 650 ಕೋ. ರೂ.ಗಳನ್ನು ಬಿಡುಗಡೆ ಮಾಡಿದೆ. ಮೇವು ಬೆಳೆಯಲು 40 ಕೋ. ರೂ. ಕೊಟ್ಟಿದ್ದೇವೆ. ಕುಡಿಯುವ ನೀರು ಪೂರೈಸಲು 870 ಕೋ. ರೂ. ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋ. ರೂ. ಇದೆ. ರಾಜ್ಯ ಸರಕಾರ ದಿಂದ ಬರ ನಿರ್ವಹಣೆ ಚೆನ್ನಾಗಿ ಆಗುತ್ತಿದ್ದು, ಕೇಂದ್ರದ ನೆರವಿಗೆ ಕಾದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಅರ್ಜಿಯಲ್ಲಿ ಏನಿದೆ?
ಕೇಂದ್ರದ ನಿರಂಕುಶ ಕ್ರಿಯೆ ವಿರುದ್ಧ ಅರ್ಜಿ ಸಲ್ಲಿಸುತ್ತಿರುವುದಾಗಿ ಪ್ರಸ್ತಾವಿಸಿರುವ ರಾಜ್ಯ ಸರಕಾರವು ಸಂವಿಧಾನದ 32ನೇ ವಿಧಿ ಅನ್ವಯ ತಕರಾರು ಅರ್ಜಿಯನ್ನು ಸ್ವೀಕರಿಸುವಂತೆ ಕೋರಿದೆ. ಮೂಲಭೂತ ಹಕ್ಕುಗಳಿಗೆ ಧಕ್ಕೆ ಯಾದಾಗ ಪ್ರಶ್ನಿಸಲು ಇರುವ 32ನೇ ವಿಧಿ ಯನ್ನು ಬಳಸಿಕೊಳ್ಳಲು ಅದು ನಿರ್ಧರಿಸಿದೆ.

ಏನಿದು 32ನೇ ವಿಧಿ?
ದೇಶದ ಪ್ರತೀ ಪ್ರಜೆಗೂ ಇರುವ ಮೂಲ ಭೂತ ಹಕ್ಕುಗಳಿಗೆ ಧಕ್ಕೆಯಾದಾಗ ಅದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇ ರಬಹುದು. ಈ ಅಧಿಕಾರವನ್ನು ಸಂವಿಧಾನದ 32ನೇ ವಿಧಿ ನೀಡಿದೆ. ಅದನ್ನೇ ಬಳಸಿ ರಾಜ್ಯ ಸರಕಾರ ಸರ್ವೋಚ್ಚ ಪೀಠದ ಮೆಟ್ಟಿಲೇರಿದೆ.

ಕೇಂದ್ರ ಸರಕಾರದ ಅಧ್ಯಯನ
ವರದಿ ಸಲ್ಲಿಕೆಯಾದ ಒಂದು ತಿಂಗಳಲ್ಲಿ ಕೇಂದ್ರ ಸರಕಾರವು ಬರ ಪರಿಹಾರ ಬಿಡುಗಡೆ ಮಾಡಬೇಕು. ಆದರೆ 5 ತಿಂಗಳಾದರೂ ಬಿಡುಗಡೆ ಮಾಡಿಲ್ಲ. ನಾವೂ ಈವರೆಗೆ ಕಾದಿದ್ದೇವೆ. ಇನ್ನು ಕಾಯಲು ಸಾಧ್ಯವಿಲ್ಲ. ಇದು ಸಂಘರ್ಷವೂ ಅಲ್ಲ. ಚುನಾವಣೆ ವಿಚಾರವೂ ಅಲ್ಲ. ಭಿಕ್ಷೆ ಕೇಳುತ್ತಿಲ್ಲ. ನಮಗೆ ಅನ್ಯಾಯ ಆಗಿದೆ. ನ್ಯಾಯ ಕೇಳುತ್ತಿದ್ದೇವೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next