Advertisement

ಸಂಧಿವಾತ ಸಲಹೆ-ಸೂಚನೆ

09:39 AM Jan 23, 2020 | mahesh |

ಸಂಧಿವಾತವು ಎಲ್ಲಾ ವಯಸ್ಸಿನ ಮತ್ತು ಎಲ್ಲರ (ಲಿಂಗಿಗಳ)ಲ್ಲಿ ಕಾಣಿಸಿಕೊಳ್ಳುತ್ತದಾದರೂ, ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಗೆ ಒಳಗಾಗುತ್ತಾರೆ. ಕೀಲುಗಳ ಊತ ಮತ್ತು ಮೃದುತ್ವದಿಂದ ಗುರುತಿಸಲ್ಪಟ್ಟಿರುವ ಈ ರೋಗದಲ್ಲಿ, 100 ಕ್ಕೂ ಹೆಚ್ಚು ಬಗೆಗಳಿವೆ ಎಂದು ಗುರುತಿಸಲಾಗಿದೆ. ಸಂಧಿವಾತವು ರೋಗಿಯ ದೈನಂದಿನ ಚಟುವಟಿಕೆಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ನೋವನ್ನು ನಿರ್ವಹಿಸಲು, ಸಂದು-ಜಂಟಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು ಚಿಕಿತ್ಸೆ ನೀಡಬಹುದಾದರೂ, ರೋಗಿಗಳು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದರೆ ಮಾತ್ರ ಚಿಕಿತ್ಸೆ ಫ‌ಲಪ್ರದವಾಗಲು ಸಾಧ್ಯ.

Advertisement

ಆಹಾರದಲ್ಲಿ ಬದಲಾವಣೆ
ಸಮತೋಲಿತ ಆಹಾರದಿಂದ ಸಂಧಿವಾತವನ್ನು ಸ್ವಲ್ಪ ಮಟ್ಟಿಗೆ ದೂರವಿಡಬಹುದು. ಹಣ್ಣು, ತರಕಾರಿ, ಬೇಳೆಕಾಳು, ಧಾನ್ಯ ಮುಂತಾದ ಸಸ್ಯಜನ್ಯ ಆಹಾರಗಳು, ನೋವನ್ನು ಕಡಿಮೆ ಮಾಡುತ್ತವೆ. ಪ್ರೋಟೀನ್‌ ಸೇವನೆಯನ್ನು ನಿಯಂತ್ರಿಸುವ ಮೂಲಕ ಸಂಧಿವಾತವನ್ನು ಹತೋಟಿಗೆ ತರಬಹುದು. ಆಹಾರ ಬದಲಾವಣೆ ಮಾಡುವ ಮೊದಲು, ವೈದ್ಯರ ಸಲಹೆ ಪಡೆಯಿರಿ.

ದೈಹಿಕ ಸದೃಢತೆ, ವ್ಯಾಯಾಮ
ವ್ಯಾಯಾಮದಿಂದ ಸಂಧಿವಾತದ ನೋವು ಕಡಿಮೆಯಾಗುವುದಲ್ಲದೆ, ತೂಕ ಕೂಡಾ ನಿಯಂತ್ರಣಕ್ಕೆ ಬರುತ್ತದೆ. ನೋವು ಇರುವಾಗ, ಕಠಿಣ ವ್ಯಾಯಾಮದ ಬದಲು, ಸಾಮಾನ್ಯ ವ್ಯಾಯಾಮಗಳನ್ನು ಮಾಡಬಹುದು. ಅದರಿಂದ ಕೀಲುಗಳ ಸುತ್ತಲಿನ ಸ್ನಾಯುಗಳು ಮತ್ತು ಮೂಳೆಗಳ ಬಲವರ್ಧನೆಯಾಗುತ್ತದೆ. ಯೋಗ, ಸ್ಟ್ರೆಚಿಂಗ್‌, ನಡಿಗೆ, ಸೈಕ್ಲಿಂಗ್‌ನಂಥ ಚಟುವಟಿಕೆಗಳಿಂದ ಪ್ರಯೋಜನವಿದೆ.

ತೂಕ ನಿಯಂತ್ರಣ
ಹೆಚ್ಚುವರಿ ತೂಕದಿಂದಾಗಿ ಸಂಧಿವಾತದ ನೋವು ಬಿಗಡಾಯಿಸುತ್ತದೆ. ಅಧ್ಯಯನದ ಪ್ರಕಾರ ದೇಹವು ಒಂದು ಪೌಂಡ್‌ ತೂಕ ಕಳೆದುಕೊಂಡರೆ, ಮೊಣಕಾಲುಗಳ ಮೇಲಿನ ನಾಲ್ಕು ಪೌಂಡ್‌ ಒತ್ತಡ ಕಡಿಮೆಯಾಗುತ್ತದಂತೆ. ತೂಕ ಇಳಿಸುವುದರಿಂದ ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡಬಹುದು. ಅಲ್ಪಾವಧಿಯಲ್ಲಿ ತೂಕ ಇಳಿಸುವ ಸಾಹಸಕ್ಕೆ ಇಳಿಯದೆ, ಆರೋಗ್ಯಕರವಾಗಿ ತೂಕ ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಿ.

ಮದ್ಯಸೇವನೆ ಸಲ್ಲ
ಸಂಧಿವಾತದ ನೋವಿನಿಂದ ಮುಕ್ತಿ ಪಡೆಯಲು ಕೆಲವರು ಆಲ್ಕೋಹಾಲ್‌ ಸೇವಿಸುತ್ತಾರೆ. ಗೌಟ್‌ನಂಥ ಕೆಲವು ಸಂಧಿವಾತಗಳು, ಮದ್ಯ ಸೇವನೆಯಿಂದಲೇ ಬರುತ್ತವೆ. ಮದ್ಯ ಸೇವಿಸಿದಾಗ ದೇಹದಲ್ಲಿ ದ್ರವಾಂಶ ಕಡಿಮೆಯಾಗಿ, ಕೀಲು ನೋವು ಉಲ್ಬಣಿಸುತ್ತದೆ.

Advertisement

ಕಿತ್ತಳೆ, ಮೂಸಂಬಿ ತಿನ್ನಿ
ಜೀವಕೋಶಗಳನ್ನು ರಕ್ಷಿಸುವ, ಕಾಲಜನ್‌ ಮತ್ತು ಅಂಗಾಂಶಗಳನ್ನು ನಿರ್ವಹಿಸುವ ಶಕ್ತಿ ವಿಟಮಿನ್‌ ಸಿ ಗೆ ಇದೆ. ಇದು ಗಾಯಗಳನ್ನು ಗುಣಪಡಿಸಲು, ಉರಿಯೂತದ ಸಂಧಿವಾತವನ್ನು ತಡೆಗಟ್ಟಲು ಸಹಕಾರಿ. ಹಾಗಾಗಿ, ಕಿತ್ತಳೆ, ಮೂಸಂಬಿ, ಲಿಂಬೆ, ನೆಲ್ಲಿಕಾಯಿ ಮುಂತಾದ ಸಿ ವಿಟಮಿನ್‌ ಇರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿ.

-ಡಾ. ಪ್ರಶಾಂತ್‌ ಎ. ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next