Advertisement

ಕಳೆ ಹೆಚ್ಚಲು ಕಲೆ

12:30 AM Feb 01, 2019 | Team Udayavani |

ಹುಟ್ಟು-ಸಾವಿನ ನಡುವಿನ ಅಂತರದ ಸೋಪಾನವನ್ನು ಸಾಧನೆಯ ಹೂಗಳಿಂದ ಅಲಂಕರಿಸುತ್ತ ಬಂದರೆ ಬದುಕು ಸಾರ್ಥಕತೆಯ ಗಿರಿಯನ್ನು ಏರುತ್ತದೆ. ಹುಟ್ಟಿದ ಮಗು ಅಳಲೇ ಬೇಕು. ಅಂದರೆ “ಹುಟ್ಟುತ್ತಲೇ ಅಳು’ ಎಂಬ ಕಲೆಯನ್ನು ತನ್ನದಾಗಿಸಿಕೊಳ್ಳುತ್ತದೆ. ಬೆಳೆಯುತ್ತಿದ್ದಂತೆ ಕಣ್ಣಿನಲ್ಲಿನ ಭಾವನೆಯನ್ನು ಮುಖದಲ್ಲಿ ಅದೇನೋ ಹೇಳುವ ಪ್ರಯತ್ನವನ್ನು ಮಾಡುವ ಮಗು ಸದಾ ಹೊಸದನ್ನು ಕಲಿಯುವ ಹಂಬಲದಲ್ಲಿರುತ್ತದೆ. ನಡೆ-ನುಡಿಯನ್ನು ತನ್ನಲ್ಲಿ ಒಗ್ಗೂಡಿಸಿಕೊಳ್ಳುವ, ವ್ಯಕ್ತಿತ್ವ ರೂಪಿಸಿಕೊಳ್ಳುವ ಬುನಾದಿಯನ್ನು ಅರಿಯುತ್ತದೆ. ಆ ಮಗು ಓದು-ಬರಹ ಶಾಲೆ-ಕಾಲೇಜು ಶಿಕ್ಷಣವನ್ನು ಪಡೆಯುತ್ತಿದ್ದಂತೆ ಒಬ್ಬ ಸತ್‌ಪ್ರಜೆಯಾಗಿ ಹೊರ ಹೊಮ್ಮುತ್ತದೆ. 

Advertisement

ಇಂದಿನ ಶಿಕ್ಷಣ ಪರೀಕ್ಷೆಗಳಿಗೆ ಸೀಮಿತವಾದಂತೆ ಅನಿಸಿದರೂ, ಸಮಾಜದಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶವಿದೆ. ಕ್ರೀಡೆ, ನಾಟ್ಯ, ಸಂಗೀತ, ಚಿತ್ರಕಲೆಗಳಂತಹ ಸಾವಿರಾರು ಕಲೆಗಳು ಇನ್ನೂ ಜೀವಂತವಾಗಿವೆ. ದೇಶ-ವಿದೇಶದಲ್ಲಿಯೂ ಕಲೆಗಳು ಮನ್ನಣೆಯನ್ನು ಪಡೆಯುತ್ತಿವೆ. ಕುಂಬಾರನು ಮಡಿಕೆಯನ್ನು ಮಾಡುವುದು ಒಂದು ಸುಂದರವಾದ ಕಲೆ. ಕರಾವಳಿಯ ಜನರು ತೆಂಗಿನ ಗರಿಗಳನ್ನು ಹೆಣೆಯುವುದೂ ಒಂದು ಕಲೆ. ಕಲೆಯಲ್ಲಿ ಮೇಲು-ಕೀಳು ಎಂಬುದಿರದೆ ತನ್ನದೇ ಆದ ಛಾಪನ್ನು ಪ್ರತಿಯೊಂದು ಕಲೆಯೂ ಅಂತರ್ಗತವಾಗಿಸಿಕೊಂಡಿದೆ. ಹಣವೇ ಪ್ರಧಾನ ಎನಿಸಿರುವ ಈ ಯುಗದಲ್ಲಿ, ಕಲೆಯನ್ನು ಹಣದಿಂದ ಅಳೆಯುವುದು ಅಸಾಧ್ಯವೇ ಸರಿ. ಕಲೆಯು ಕಲಾವಿದನ ಜೀವನದ ಅಮೂಲ್ಯ ಅಂಶವಾಗಿರುತ್ತದೆ ಮಾತ್ರವಲ್ಲದೆ ಕಲಾವಿದರ ಮನಸ್ಸಿನ ಸುಖ-ದುಃಖಗಳು ಈ ಕಲೆಯಲ್ಲಿ ಲೀನವಾಗಿರುತ್ತದೆ. ಕಲೆ ಎಂಬ ಕನ್ನಡಿಯು ವ್ಯಕ್ತಿತ್ವವನ್ನೂ ಪ್ರತಿಬಿಂಬಿಸುತ್ತದೆ.

ಕಲೆಗೆ ಕೊನೆಯೆಂಬುದಿಲ್ಲ. ಕೇವಲ ಪುಸ್ತಕದ ಹುಳುವಾಗದೆ ಕಲೆ ಎಂಬ ಮತ್ತೂಂದು ಲೋಕಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳ ಬೇಕಾದುದು ಬಹಳ ಮುಖ್ಯವಾಗುತ್ತದೆ. ಕಿಂಚಿತ್ತು ಅನುಭವದಲ್ಲಿ ಹೇಳಬೇಕಾದರೆ, ನನ್ನನ್ನು ಆಕರ್ಷಿಸಿದ ಕಲೆಗಳಲ್ಲಿ ನೃತ್ಯ ಮೊದಲನೆಯದು. ತಂದೆ-ತಾಯಿ ಪ್ರೋತ್ಸಾಹದಿಂದ ಶಾಸ್ತ್ರೀಯ ನೃತ್ಯವನ್ನು ಕಲಿಯುವ ಭಾಗ್ಯ ದೊರೆಯಿತು. ಗುರುಗಳ ಶ್ರಮದಿಂದ ಆ ಕಲೆಯನ್ನು ಅರಗಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರುವವಳು ನಾನು. ಈ ಕಲಿಕೆಗೆ ಸೀಮೆಯೇ ಇಲ್ಲ. ಕಲಿತಷ್ಟು ಹೊಸ ಹೊಸ ವಿಚಾರಗಳು ಮೂಡುತ್ತವೆ. ಕಲಾ ಜಗತ್ತಿನ ಧೂಳಿನ ಕಣವಾಗಲು ಸಣ್ಣದೊಂದು ಯತ್ನವನ್ನು ಮಾಡುತ್ತಲೇ ಬಂದಿದ್ದೇನೆ.

ನೃತ್ಯ ಎಂಬುದರ ವಿವಿಧ ಪ್ರಕಾರಗಳು, ಶಾಸ್ತ್ರೀಯ ಚೌಕಟ್ಟುಗಳು ಆಳವಾಗಿ ಬೇರುಬಿಟ್ಟಿದೆ. ಶೈಕ್ಷಣಿಕ ಕಲಿಕೆಗೆ ಪೂರಕವಾಗಿ ನೃತ್ಯದ ಕೆಲವು ಅಂಶಗಳು ಕಾರ್ಯನಿರ್ವಹಿಸುತ್ತದೆ. ಇದು ದೈಹಿಕ ಹಾಗೂ ಬೌದ್ಧಿಕ ಸ್ಥಿರತೆಗೆ ಅನುವು ಮಾಡಿಕೊಡುತ್ತದಲ್ಲದೆ ಮುಖ್ಯವಾಗಿ ಒತ್ತಡದ ಲೋಕದಲ್ಲಿ ನೆಮ್ಮದಿಯ ಬಿಡುವನ್ನು ನೀಡುತ್ತದೆ.

ಎಚ್‌. ಶ್ರಾವ್ಯಾ ಹಿರಿಯಡಕ
ದ್ವಿತೀಯ ಎಂ. ಎಸ್ಸಿ. ಎಂ.ಜಿ.ಎಂ. ಕಾಲೇಜು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next