ಗಾಂಧಿಯನ್ನು ಕೆಲವೇ ಗೆರೆಗಳಲ್ಲಿ ಬೋಳು ತಲೆ, ವೃತ್ತಾಕಾರದ ಕನ್ನಡಕ, ಮೀಸೆಗುತ್ಛ, ನಗುಮುಖ, ಕೃಷಶರೀರ, ಕಚ್ಚ, ಕೈಯ್ಯಲ್ಲೊಂದು ಕೋಲು ಚಿತ್ರಿಸಿ ಅವರ ಸರಳ ವ್ಯಕ್ತಿತ್ವವನ್ನು ಸುಲಭವಾಗಿ ತೋರಿಸುತ್ತಾರೆ. ಈ ಬಾರಿ ಗಾಂಧೀಜಿಯವರ ನೂರೈವತ್ತನೇ ಹುಟ್ಟುಹಬ್ಬ ಆಚರಣೆ. ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಅದನ್ನು ಕಲಾತ್ಮಕವಾಗಿ ಚಿಂತನೆ ನಡೆಸಿ ಕಾರ್ಯರೂಪಕ್ಕಿಳಿಸಿದವರು ಕಲಾವಿದ ಲಿಯಕತ್ ಅಲಿ. ಇವರೊಂದಿಗೆ ಉಡುಪಿಯ ಜಯಂಟ್ಸ್ ಗ್ರೂಫ್ ಕೈಜೋಡಿಸಿ ಗಾಂಧೀಜಿಗೆ ನೂರೈವತ್ತರ ಕುಂಚನಮನ ಕಾರ್ಯಕ್ರಮವನ್ನು ಗಾಂಧೀ ಜಯಂತಿಯಂದು ನಡೆಸಿದರು. ಮಕ್ಕಳಿಗೆ ಜಿಲ್ಲಾಮಟ್ಟದ ಚಿತ್ರಕಲಾಸ್ಪರ್ಧೆ ಹಾಗೂ ಪರಿಣತ ಚಿತ್ರಕಾರರಿಂದ ಗಾಂಧೀ ಜೀವನದ ಕಲಾಕೃತಿ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನವನ್ನು ಉಡುಪಿಯ ಇನಾಯತ್ ಆರ್ಟ್‌ಗ್ಯಾಲರಿಯಲ್ಲಿ ನಡೆಸಿ ಮನಗೆದ್ದರು.
ಸುಮಾರು 400 ಮಕ್ಕಳು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಗಾಂಧಿತಾತನ ಜೀವನಕಥೆ, ಅವರ ಚಿಂತನೆಯ ಸ್ವರೂಪಗಳನ್ನು ಸೃಜನಾತ್ಮಕವಾಗಿ ಚಿತ್ರಿಸಿದರು. ತಮಗಿಷ್ಟವಾದ ಬಣ್ಣಗಳನ್ನು ನೀಡಿದರು. ಮಕ್ಕಳ ಚಿತ್ರಗಳಲ್ಲಿ ಗಾಂಧೀಜಿ ಮೂರ್ತವಾಗಿರುವಂತೆ ಕೆಲವು ಚಿಕ್ಕಮಕ್ಕಳ ಚಿತ್ರಗಳಲ್ಲಿ ಅಮೂರ್ತವಾಗಿಯೂ ಗೋಚರಿಸಿದರು. ಅದೇನಿದ್ದರೂ ಮಕ್ಕಳು ಚಿತ್ರ ಹೇಗೆ ಬರೆದರೂ ಚೆಂದ. ಅವರ ಕಲ್ಪನೆ ಮುಗ್ಧಸ್ವರೂಪ ಅನಿರ್ವಚನೀಯ ಆನಂದ ನೀಡುತ್ತದೆ.
ಗ್ಯಾಲರಿಯ ಒಳಗಡೆ ಪ್ರದರ್ಶಿತವಾಗಿದ್ದ ಗಾಂಧೀಜಿಯವರ ಅಂದು-ಇಂದು ಕಾರ್ಟೂನ್ ಕಲಾಕೃತಿಗಳು ಗಮನಾರ್ಹವಾಗಿದ್ದವು. ಗಾಂಧೀಜಿ ಚರಕ ಸುತ್ತುವುದು, ಆಂದೋಳನ ನಡೆಸುವುದು, ಸ್ವತ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇತ್ಯಾದಿ ಹಾವಭಾವಗಳು ನವುರಾದ ರೇಖೆಗಳಲ್ಲಿ ಮಾರ್ಮಿಕವಾಗಿ ಮೂಡಿದ್ದವು. ಕಲಾವಿದರಾದ ರಮೇಶ್ ರಾವ್, ಮಯ್ಯ, ಡಾ| ಕಿರಣ್, ರಾಘವೇಂದ್ರ ಕೆ. ಅಮೀನ್, ಜೀವನ್ ಶೆಟ್ಟಿ, ಜಯವಂತ್, ಶ್ರೀನಾಥ್, ತ್ರಿವರ್ಣ, ಪ್ರಸಾದ್, ಗಣೇಶ್ ಮಂದಾರ, ಅದೀಬಾ ಅಲಿ, ಹರೀಶ್, ಗಣೇಶ್ ಕುಕ್ಕೆಹಳ್ಳಿ ಮತ್ತು ಲಿಯಾಕತ್ ಅಲಿಯವರ ಚಿತ್ರಗಳು ಅಲ್ಲಿ ರಾರಾಜಿಸುತ್ತಿದ್ದವು. ಒಟ್ಟಿನಲ್ಲಿ ಗಾಂಧೀಜಿಗೆ ನೂರೈವತ್ತರ ಕುಂಚನಮನ ಕಲಾಪ್ರದರ್ಶನ ಮತ್ತು ಸ್ಪರ್ಧೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಲ್ಲಿ ಸಫಲವಾಯಿತು.
ಉಪಾಧ್ಯಾಯ ಮೂಡುಬೆಳ್ಳೆ