Advertisement
“ಆಕಾಂಕ್ಷ’ ಎನ್ನುವುದು ಒಂದು ಸಂಘಟನೆ. ಇದರ ರೂವಾರಿಯರು: ಶ್ಯಾಮಲಾ ರಮಾನಂದ್, ಉಷಾ ರೈ ಮತ್ತು ಕವಿತಾ ಪ್ರಸನ್ನ. ತಾವು ರಚಿಸಿದ ಕಲಾಕೃತಿಗಳನ್ನೂ ಪ್ರದರ್ಶಿಸಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿದ್ದ ಈ ಮೂವರು 2012ರಲ್ಲಿ ಒಂದೆಡೆ ಸೇರಿ ಕಟ್ಟಿದ ಸಮೂಹವೇ “ಆಕಾಂಕ್ಷ’. ಅದೀಗ 500 ಸದಸ್ಯರ ದೊಡ್ಡ ಬಳಗ. “ಆಕಾಂಕ್ಷ’ದ ನೆರಳಿನಲ್ಲಿ ಮೂಡಿದ ಚಿತ್ತಾರಗಳು ಕಲಾಪ್ರಿಯರನ್ನು ಬೆರಗುಗೊಳಿಸಿವೆ. ಇದೀಗ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ “ಆಕಾಂಕ್ಷ’ದ 5ನೇ ವಾರ್ಷಿಕ ಕಲಾಪ್ರದರ್ಶನದ ವಿಶೇಷವಾಗಿ, “ಇನ್‌ಕ್ರೆಡಿಬಲ್ ಇಂಡಿಯಾ’ ಶೀರ್ಷಿಕೆಯಡಿಯಲ್ಲಿ ಸ್ತ್ರೀ ಕಲಾವಿದರ ಕಲಾಕೃತಿಗಳನ್ನು ಇಡಲಾಗುತ್ತಿದೆ. “ಭಾರತದ ಸಾಮಾಜಿಕ, ಭೌಗೋಳಿಕ, ಧಾರ್ಮಿಕ ವೈವಿಧ್ಯಮಯ ಹರಿವು ಇರುವ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ’ ಎನ್ನುತ್ತಾರೆ ಆಯೋಜಕರು.
ಚಿತ್ರಕಲೆ ಯಾರ ಸ್ವತ್ತಲ್ಲ. ಅದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಇಲ್ಲಿ ಗೃಹಿಣಿಯರೂ ಇದ್ದಾರೆ. ಹಿರಿಯ ಮಹಿಳೆಯರೂ ಇದ್ದಾರೆ. ಅವರ ಅತ್ಯುತ್ತಮ ಕಲಾಕೃತಿಗಳು ಪ್ರದರ್ಶನಕ್ಕೆ ಸಾಕ್ಷಿ ಆಗಲಿವೆ.
ಆಸರೆಯಾದ ಆಕಾಂಕ್ಷ!
ಉಳಿದೆಲ್ಲಾ ಕ್ಷೇತ್ರಗಳಲ್ಲಿರುವಂತೆ ಕಲಾ ಕ್ಷೇತ್ರದಲ್ಲೂ ಪುರುಷರಿಗೆ ಇರುವಷ್ಟು ಅವಕಾಶಗಳು ಮಹಿಳೆಗೆ ಇಲ್ಲ. ಇಂಥ ಸಾಮಾಜಿಕ ಸಮಸ್ಯೆಗೆ ಪರಿಹಾರವಾಗಿದ್ದು “ಆಕಾಂಕ್ಷ’. ಚಿತ್ರಕಲೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕು ಎಂಬ ಕನಸು ಹೊತ್ತು, ಯಾವ್ಯಾವುದೋ ಕಾರಣಕ್ಕಾಗಿ ಇಂಥ ಅವಕಾಶ ಕಳಕೊಂಡವರಿಗೆ ಈ ಸಂಸ್ಥೆ ಧೈರ್ಯ ತುಂಬಿತು. “ಇನ್ನು ನನ್ನಿಂದ ಕಲಾಕೃತಿಗಳ ಪ್ರದರ್ಶನ ಸಾಧ್ಯವೇ ಇಲ್ಲವೇನೋ’ ಎಂದು ಹಿಂಜರಿದವರೂ ಇಲ್ಲಿ ಅದ್ಭುತಗಳನ್ನೇ ಸೃಷ್ಟಿಸಿರುವರು. “ಅಡುಗೆ ಮನೆಯೇ ಜೀವನದ ಸಾಧನೆ ಆಗ್ಹೋಗುತ್ತಾ’ ಎಂದುಕೊಂಡ ಗೃಹಿಣಿಯರೂ ಈ ಪ್ರದರ್ಶನದಲ್ಲಿ ಕೈಚಳಕ ತೋರಿಸಿರುವುದನ್ನು ಕಾಣಬಹುದು.
Related Articles
Advertisement
ಯಾರಿಂದ ಚಾಲನೆ?ವಿಭಿನ್ನ ಸಮೂಹ ಕಲಾಪ್ರದರ್ಶನವನ್ನು ಜೈನ್ ವಿಶ್ವವಿದ್ಯಾಲಯದ ಡೀನ್ ಡಾ. ಚೂಡಾಮಣಿ ನಂದಗೋಪಾಲ್ ಉದ್ಘಾಟಿಸಲಿದ್ದಾರೆ. ಲೇಖಕಿ ಡಾ. ಸಂಧ್ಯಾ ರೆಡ್ಡಿ, ಡಾ. ಪ್ರಮಿಳಾ ಲೋಚನ್, ಹಿರಿಯ ಕಲಾವಿದೆ ಶಿರ್ಲೆ ಮ್ಯಾಥ್ಯೂ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಹಿಳೆ ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಯಾರಿಗೂ ಕಾದು ಕುಳಿತಿರಬೇಕಿಲ್ಲ. ಆಕೆ ಸ್ವತಂತ್ರವಾಗಿ ಇಂಥ ಪ್ರದರ್ಶನ ಮಾಡುವ ಶಕ್ತಿ ಪಡೆದುಕೊಳ್ಳಬೇಕು. ಆಕೆಗೆ ಈ ಸಮಾಜದಿಂದ ನೈತಿಕ ಬೆಂಬಲ ಸಿಗಬೇಕು.
– ಶ್ಯಾಮಲಾ ರಮಾನಂದ್ ಅಗ್ನಿ ಹೋತ್ರಿ