Advertisement

‘ಕರ್ನಾಟಕ’ಕ್ಕೆ ಧಾರಾನಗರಿಯೇ ಬುನಾದಿ

02:51 PM Oct 26, 2021 | Team Udayavani |

ಧಾರವಾಡ: ಕಲೆ, ಸಂಸ್ಕೃತಿ, ಸಾಹಿತಿಗಳ ತವರೂರಾದ ಧಾರವಾಡವು 1956ರಲ್ಲಿ ಮೈಸೂರು ಎಂದು ಹೆಸರು ಹೊಂದಿದ ರಾಜ್ಯಕ್ಕೆ 1973ರಲ್ಲಿ ಕರುನಾಡು, ಕರ್ನಾಟಕ ಎಂದು ಹೆಸರು ಪಡೆಯಲು ಮುಖ್ಯ ಬುನಾದಿಯಾಗಿದೆ ಎಂದು ಉಪವಿಭಾಗಾಧಿಕಾರಿ ಡಾ|ಗೋಪಾಲಕೃಷ್ಣ ಬಿ ಹೇಳಿದರು.

Advertisement

ನಗರದಲ್ಲಿ ರಂಗಾಯಣವು 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ “ಕನ್ನಡಕ್ಕಾಗಿ ನಾವು’ ಕನ್ನಡ ರಾಜ್ಯೋತ್ಸವ ಅಭಿಯಾನದ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಕರ್ನಾಟಕದ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಯವರಿಗೆ ತಲುಪಿಸುವಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮಗಳು ಸಹಕಾರಿಯಾಗಿವೆ. ವೈದ್ಯಕೀಯ, ಎಂಜಿನಿಯರಿಂಗ್‌ ಮುಂತಾದ ಕೋರ್ಸ್‌ಗಳು ಜೀವನವನ್ನು ನಡೆಸಲು ಸಹಕಾರಿಯಾದರೆ, ಕಲಾ ವಿಷಯಗಳು ಜೀವನವನ್ನು ಹೇಗೆ ಮುನ್ನಡೆಸಬೇಕು ಎಂಬ ಜ್ಞಾನ, ತಿಳಿವಳಿಕೆಯನ್ನು ನೀಡುತ್ತವೆ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್‌ ಸದಸ್ಯ ಸುಭಾಷಸಿಂಗ್‌ ಜಮಾದಾರ ಮಾತನಾಡಿ, ಸಾಹಿತ್ಯದ ಬೀಜವನ್ನು ಬಿತ್ತುವಲ್ಲಿ ಧಾರವಾಡವು ಪ್ರಮುಖ ಪಾತ್ರವಹಿಸುತ್ತದೆ. ವೈಯಕ್ತಿಕ ಬದುಕಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡದೇ, ಕಲೆಗೆ ಮೊದಲ ಆದ್ಯತೆಯನ್ನು ನೀಡುವ ಮೂಲಕ ಬದುಕನ್ನು ಕಲಾತ್ಮಕವಾಗಿ ಬೆಳೆಸುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು. ಸಾಹಿತಿಗಳು ಹಾಗೂ ಜೀವನ ಮೌಲ್ಯಗಳ ಕುರಿತು ನಾಟಕಗಳನ್ನು ರೂಪಿಸಿ ಯುವಜನತೆಗೆ ತಲುಪಿಸುವ ಕಾರ್ಯವನ್ನು ರಂಗಾಯಣವು ಮಾಡಬೇಕು ಎಂದು ಸಲಹೆ ನೀಡಿದರು.

ಸದಸ್ಯ ಕಾರ್ಯದರ್ಶಿ ಮಾಧವ ವಿಠ್ಠಲರಾವ್‌ ಗಿತ್ತೆ ಮಾತನಾಡಿ, ಕಲೆಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಕಲಾವಿದರನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದರು.

Advertisement

ಇದನ್ನೂ ಓದಿ: ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ರಮೇಶ ಎಸ್‌. ಪರವಿನಾಯ್ಕರ ಮಾತನಾಡಿ, ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸುವುದಕ್ಕಾಗಿ ಅ.31ರವರೆಗೆ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ನೃತ್ಯ ರೂಪಕ, ನಾಟಕ, ಸಮೂಹ ನೃತ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಚಿತ್ರಕಲಾ ಶಿಲ್ಪಿ ಡಿ.ವಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಹಾಗೂ ಪಂ| ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಯಲಿಗಾರ ಸ್ವಾಗತಿಸಿದರು. ಪಕ್ಕೀರಪ್ಪ ಮಾದನಭಾವಿ ನಿರೂಪಿಸಿದರು. ಮೈಲಾರ ಮಹಾದೇವ ದೃಶ್ಯ ರೂಪಕ ಹಾಗೂ ರಂಗಗೀತೆಗಳನ್ನು ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಜೀವ ದುಮಕನಾಳ ಹಾಗೂ ತಂಡದವರು ಸಮೂಹ ನೃತ್ಯಗಳನ್ನು ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next