Advertisement

Namma metro: ಚಾಲಕ ರಹಿತ ಮೆಟ್ರೋ ಬೋಗಿಗಳ ಆಗಮನ

11:00 AM Feb 15, 2024 | Team Udayavani |

ಬೆಂಗಳೂರು: ಕೊನೆಗೂ ಬಹುನಿರೀಕ್ಷಿತ ಚಾಲಕರಹಿತ “ನಮ್ಮ ಮೆಟ್ರೋ’ ರೈಲು ಬೋಗಿಗಳು ಸಿಲಿಕಾನ್‌ ಸಿಟಿಗೆ ಬಂದಿಳಿದಿವೆ. ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಈ ಅತ್ಯಾಧುನಿಕ ರೈಲು ಪರೀಕ್ಷಾರ್ಥ ಸಂಚಾರ ಆರಂಭಿಸಲಿದ್ದು, ಇದಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ತಾಂತ್ರಿಕ ಸಿಬ್ಬಂದಿ ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Advertisement

ದೂರದ ಚೀನಾದಿಂದ ಹಡಗಿನಲ್ಲಿ ಚೆನ್ನೈನ ಕೃಷ್ಣಗಿರಿಗೆ ಫೆ.6ರಂದೇ ಆಗಮಿಸಿದ್ದ ಆರು ಬೋಗಿಯ ಈ ಮೆಟ್ರೋ ರೈಲು, ಬುಧವಾರ ಬೆಳಗಿನಜಾವ 3.30ಕ್ಕೆ ನಗರದ ಹೆಬ್ಬಗೋಡಿ ಬಿಎಂಆರ್‌ಸಿಎಲ್‌ ಡಿಪೋ ಪ್ರವೇಶಿಸಿತು. ಮುಂದಿನ ಎರಡು ಮೂರು ದಿನಗಳಲ್ಲಿ ಕಸ್ಟಮ್ಸ್‌ನಿಂದ ಅಂತಿಮ ಪರವಾನಗಿ ಪಡೆದು, ಅನ್‌ಲೋಡ್‌ ಮಾಡಲಾಗುತ್ತದೆ. ನಂತರ ಹಲವು ಪರಿಶೀಲನಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ. “ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.

ಒಮ್ಮೆ ಘೋಷಣೆಯಾದ ನಂತರ ನೀತಿಸಂಹಿತೆ ಜಾರಿ ಆಗುತ್ತದೆ. ಆಗ ವೇದಿಕೆ ಕಾರ್ಯಕ್ರಮಗಳು ಕಷ್ಟ. ಹಾಗಾಗಿ, ಆದಷ್ಟು ಬೇಗ ಪರೀಕ್ಷಾರ್ಥ ಸಂಚಾರ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ. ಮಾರ್ಚ್‌ ಮೊದಲ ವಾರಕ್ಕೂ ಮುನ್ನವೇ ಅದ್ದೂರಿ ಕಾರ್ಯಕ್ರಮದ ಮೂಲಕ “ನಮ್ಮ ಮೆಟ್ರೋ’ ಯೋಜನೆಯ ಮೊದಲ ಚಾಲಕರಹಿತ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

20 ಕಿ.ಮೀ. ಉದ್ದದ ಆರ್‌.ವಿ.ರಸ್ತೆ – ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಈ ರೈಲು ಸೇವೆಯನ್ನು ಪರಿಚಯಿಸಲು ಬಿಎಂಆರ್‌ ಸಿಎಲ್‌ ಉದ್ದೇಶಿಸಿದೆ. ಇದಕ್ಕಾಗಿ ರೈಲ್ವೆ ಸಚಿವಾ ಲಯದಡಿ ಬರುವ ಲಖನೌದ ಆರ್‌ಡಿಎಸ್‌ಒ (ರಿಸರ್ಚ್‌, ಡಿಸೈನ್‌, ಸ್ಟಾಂಡರ್ಡ್ಸ್ ಆರ್ಗನೈಸೇಶನ್‌) ಸಂಸ್ಥೆಯು ಈ ಬೋಗಿಗಳನ್ನು ವಿವಿಧ ಬಗೆಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದಾದ ಬಳಿಕ ತಾಂತ್ರಿಕ ಪರವಾನಗಿಗಾಗಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತಾಲಯ (ಸಿಎಂಆರ್‌ಎಸ್‌) ಹಾಗೂ ರೈಲ್ವೆ ಸುರಕ್ಷತಾ ಪ್ರಧಾನ ಆಯುಕ್ತರ (ಸಿಆರ್‌ಎಸ್‌) ಮೂಲಕ ರೈಲ್ವೆ ಟೆಕ್ನಿಕಲ್‌ ಬೋರ್ಡ್‌ ಗೆ ವರದಿ ಸಲ್ಲಿಸಲಾಗುವುದು. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ಪುನಃ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮಾರ್ಗದ ತಪಾಸಣೆ ನಡೆಸಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಿದೆ. ‌

ಇಡೀ ಪ್ರಕ್ರಿಯೆಗೆ ಕನಿಷ್ಠ ನಾಲ್ಕು ತಿಂಗಳು ಬೇಕಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್‌ ತಿಳಿಸಿದರು. 21 ದಿನಗಳ ಪಯಣ… ಜ.24ರಂದು ಚೀನಾದ ಬಂದರಿನಿಂದ ಹೊರಟಿದ್ದ ಬೋಗಿಗಳು ಫೆ.6ರಂದು ಚೆನ್ನೈ ಕೃಷ್ಣಗಿರಿ ಬಂದರಿಗೆ ಆಗಮಿಸಿದ್ದವು. ಅಲ್ಲಿನ ಕಸ್ಟಮ್ಸ್ ಪ್ರಕ್ರಿಯೆ ಪೂರ್ಣಗೊಂಡು ಮೂರು ಲಾರಿಗಳ ಮೂಲಕ ಬೆಂಗಳೂರಿಗೆ ತರಲಾಗಿದೆ. ಹೆಬ್ಬಗೋಡಿ ಡಿಪೋದಲ್ಲಿರುವ 6 ಬೋಗಿಗಳ ಮೊದಲ ರೈಲು ಸೆಟ್‌ ಮುಂದಿನ ನಾಲ್ಕು ತಿಂಗಳ ಕಾಲ ವಿವಿಧ ಬಗೆಯ ತಾಂತ್ರಿಕ ತಪಾಸಣೆಗೆ ಒಳಗಾಗಲಿವೆ.

Advertisement

ಚಾಲಕ ಸಹಿತ, ರಹಿತ ರೈಲಿಗಿರುವ ವ್ಯತ್ಯಾಸ?: ಈಗಿನ ನೇರಳೆ, ಹಸಿರು ಮಾರ್ಗದಲ್ಲಿ ಓಡುವ ರೈಲುಗಳು ಡಿಟಿಜಿ (ಡಿಸ್ಟೆನ್ಸ್ ಟು ಗೋ) ಸಿಗ್ನಲ್‌ ಸಿಸ್ಟಂ ಮೂಲಕ ಸಂಚರಿಸುತ್ತಿವೆ. ಆದರೆ, ಹೊಸ ಬೋಗಿಗಳು ಭಿನ್ನವಾಗಿದ್ದು ಸ್ವಯಂಪ್ರೇರಿತವಾಗಿ ಅಂದರೆ ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್ ಟ್ರೈನ್‌ ಕಂಟ್ರೋಲ್‌) ಸಿಗ್ನಲ್‌ ಸಿಸ್ಟಮ್‌ ಹೊಂದಿದೆ. ಚಾಲಕರಹಿತವಾಗಿ ಹಳದಿ ಮಾರ್ಗದಲ್ಲಿ ಸಂಚರಿಸಬೇಕಿವೆ. ಹೊಸ ಮಾದರಿಯ ಈ ಬೋಗಿಗಳು ತೀವ್ರ ತಪಾಸಣೆಗೆ ಒಳಗಾಗಬೇಕಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಡಬಲ್‌ ಡೆಕರ್‌ ( ರಸ್ತೆ-ಮೆಟ್ರೋ ಮಾರ್ಗ) ಹೊಂದಿರುವ ಹಳದಿ ಮಾರ್ಗದಲ್ಲಿ ದೇಶದ ಅತ್ಯಂತ ಎತ್ತರದ ಜಯದೇವ ಮೆಟ್ರೋ ನಿಲ್ದಾಣ ಸೇರಿ 16 ನಿಲ್ದಾಣಗಳಿವೆ. ಈ ಮೆಟ್ರೋ ಮಾರ್ಗ ಮುಖ್ಯವಾಗಿ ಎಲೆಕ್ಟ್ರಾನಿಕ್‌ ಸಿಟಿಯ ಟೆಕಿಗಳಿಗೆ ಹಾಗೂ ಜಯನಗರ, ಬಿಟಿಎಂ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌, ಬೊಮ್ಮಸಂದ್ರ ಇಂಡಸ್ಟ್ರಿಯಲ್‌ ಏರಿಯಾ ಮಾರ್ಗದಲ್ಲಿ ಸಂಚರಿಸುವವರಿಗೆ ಅನುಕೂಲವಾಗಲಿದೆ. ‌

ಮೆಟ್ರೋ ಮಾರ್ಗ ನಿರ್ಮಾಣದಲ್ಲಿ ಮಾತ್ರವಲ್ಲ; ರೈಲು ಬೋಗಿಗಳಲ್ಲೂ ವಿಳಂಬ ಮುಂದುವರಿದಿದೆ: 2019ರ ಡಿಸೆಂಬರ್‌ನಲ್ಲಿ ಸಿಆರ್‌ಆರ್‌ಸಿ ಜತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಒಟ್ಟಾರೆ 216 ಬೋಗಿಗಳನ್ನು (36 ರೈಲು) ಪೂರೈಸುವಂತೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 173 ವಾರ ಅಂದರೆ 2022ರೊಳಗೆ ಎಲ್ಲ ಬೋಗಿಗಳು ತಲುಬೇಕಿತ್ತು. ಆದರೆ, ಸಿಆರ್‌ಆರ್‌ಸಿ ಕಂಪನಿಗೆ ಮೇಕ್‌ ಇನ್‌ ಇಂಡಿಯಾ ಅಡಿ ಭಾರತೀಯ ಕಂಪನಿಯ ಸಹಯೋಗದಲ್ಲಿ ಶೇ.75 ಬೋಗಿಗಳನ್ನು ದೇಶದಲ್ಲಿಯೇ ನಿರ್ಮಿಸುವ ನಿಬಂಧನೆಯಿತ್ತು. ಭಾರತದಲ್ಲಿ ಸಹ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಳಂಬವಾಯಿತು. ಇದಾದ ಬಳಿಕ ಕೋವಿಡ್‌-19, ವಿದೇಶಿ ನೇರ ಬಂಡವಾಳ (ಎಫ್ಡಿಐ) ಹಾಗೂ ಚೀನಾ ಜತೆಗಿನ ವಾಣಿಜ್ಯ ಸಂಬಂಧದಲ್ಲಿ ಉಂಟಾದ ವೈಮನಸ್ಸು ಸೇರಿ ಬೋಗಿಗಳ ನಿರ್ಮಾಣ ವಿಳಂಬವಾಯಿತು. ಸಿಆರ್‌ಆರ್‌ಸಿ ಕೊಲ್ಕತ್ತ ಮೂಲದ ತಿತಾಘರ್‌ ರೈಲ್‌ ಮ್ಯಾನುಫ್ಯಾಕ್ಚರ್‌ ಕಂಪನಿ ಜತೆ ನಮ್ಮ ಮೆಟ್ರೋಗೆ ಬೋಗಿ ಒದಗಿಸುವ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಎರಡು ಸೆಟ್‌ ರೈಲನ್ನು ಸಿಆರ್‌ಆರ್‌ಸಿ, ತೀತಾಘರ್‌ ಕಂಪನಿ 204 ಬೋಗಿಗಳನ್ನು (34 ರೈಲು) ನಿರ್ಮಿಸಿಕೊಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next