Advertisement

ಮತ್ತಿಬ್ಬರು ಶಂಕಿತರ ವಶ

09:19 AM Jan 16, 2020 | Team Udayavani |

ಉಡುಪಿ: ಉಗ್ರರ ವಿರುದ್ಧದ ಕಾರ್ಯಾಚರಣೆ ಇನ್ನಷ್ಟು ಬಿರುಸುಗೊಂಡಿದ್ದು, ಇಲ್ಲಿನ ಇಂದ್ರಾಳಿ ರೈಲು ನಿಲ್ದಾಣದಲ್ಲಿ ತಮಿಳುನಾಡು ಮೂಲದ ಇಬ್ಬರು ಶಂಕಿತ ಉಗ್ರರನ್ನು ಮಂಗಳವಾರ ಮುಂಜಾನೆ ವಶಕ್ಕೆ ಪಡೆದು ಕೊಳ್ಳಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಇದನ್ನು ಚಿಕ್ಕಮಗಳೂರಿನಲ್ಲಿ ದೃಢಪಡಿಸಿದ್ದಾರೆ.

Advertisement

ಬೆಂಗಳೂರು ಸಿಸಿಬಿ, ಉಡುಪಿ ಜಿಲ್ಲೆಯ ಪೊಲೀಸ ರೊಂದಿಗೆ ಕೇರಳ ಮತ್ತು ತಮಿಳುನಾಡು ಪೊಲೀಸರೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಶಂಕಿತ ಉಗ್ರರು ಕೇರಳದಿಂದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಬಯಿ ಯತ್ತ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಮಫ್ತಿಯಲ್ಲಿದ್ದು, ಕಾರ್ಯಾ ಚರಣೆ ನಡೆಸಿ ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

ಸೋಮವಾರದಿಂದಲೇ ಬೀಡು
ಕೇರಳ ಮೂಲಕ ಇಬ್ಬರು ಶಂಕಿತ ಉಗ್ರರು ಕರಾವಳಿಗೆ ಆಗಮಿಸುತ್ತಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಯಲ್ಲಿ ಪೊಲೀಸರು ಸೋಮವಾರ ರಾತ್ರಿಯಿಂದ ನಗರ ದೆಲ್ಲೆಡೆ ಬೀಡುಬಿಟ್ಟಿದ್ದರು. ಮಂಗಳವಾರ ಮುಂಜಾನೆ ಕಾರ್ಯಾ ಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಗೂಢ ಸ್ಥಳದಲ್ಲಿ ಉಗ್ರರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗೌಪ್ಯತೆ ಕಾಯ್ದುಕೊಂಡ ಪೊಲೀಸರು
ಉಗ್ರರ ಬಂಧನ ಎಂಬ ಸುದ್ದಿ ಮಂಗಳವಾರ ಬೆಳಗ್ಗಿ ನಿಂದಲೇ ಹರಡತೊಡಗಿತ್ತು. ಆದರೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಎಸ್‌ಪಿ ಕಚೇರಿ ಯಲ್ಲಿಯೂ ವರಿಷ್ಠಾಧಿಕಾರಿಗಳು ಇರಲಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ಕೂಡ ಇರಲಿಲ್ಲ. ಅವರ ಕಾರು ಮಾತ್ರ ಕಚೇರಿ ಆವರಣದಲ್ಲೇ ಇತ್ತು.

ರೈಲು ನಿಲ್ದಾಣದಲ್ಲಿ ಪೊಲೀಸ್‌ ಪಡೆ
ಸೋಮವಾರ ರಾತ್ರಿಯಿಂದಲೇ ಹಲವಾರು ಮಂದಿ ಪೊಲೀಸರು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಮಫ್ತಿಯಲ್ಲಿ ಬೀಡುಬಿಟ್ಟಿದ್ದರು. ಮಂಗಳವಾರ ಬೆಳಗ್ಗೆ 6.20ರ ವೇಳೆಗೆ ರೈಲು ಆಗಮಿಸಿದ್ದು, ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದರು. ಆದರೆ ಅದುವರೆಗೂ ಅಲ್ಲಿದ್ದ
ವರು ಪೊಲೀಸರು ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ. ಕೆಲವರನ್ನು ವಶಕ್ಕೆ ತೆಗೆದುಕೊಂಡು ಕೊಂಡೊಯ್ದಾಗಲೇ ಅವರು ಪೊಲೀಸರೆಂದು ತಿಳಿದುಬಂತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

Advertisement

ಗುಜರಾತ್‌ಗೆ ತೆರಳುತ್ತಿದ್ದರೇ?
ಶಂಕಿತ ಉಗ್ರರು ಕೇರಳದಿಂದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಮಿಸುತ್ತಿದ್ದರು. ಇದು ಮಹಾರಾಷ್ಟ್ರ ಮಾರ್ಗ
ವಾಗಿ ಗುಜರಾತ್‌ಗೆ ತೆರಳುತ್ತಿದ್ದು, ಶಂಕಿತರು ಯಾವ ಕಡೆಗೆ ಪ್ರಯಾಣ ಬೆಳೆಸಿದ್ದರು ಮತ್ತು ಅವರ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ವಿಚಾರಣೆಯಿಂದಷ್ಟೆ ಬಹಿರಂಗವಾಗಬೇಕಿದೆ.

ಟೆಕ್ಕಿಗಳ ಮೇಲೆ ಉಗ್ರರ ಕಣ್ಣು
ಬೆಂಗಳೂರು: ರಾಜ್ಯದಲ್ಲಿ ಐಸಿಸ್‌ ಬೇರುಗಳನ್ನು ಗಟ್ಟಿಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದ ಮೆಹಬೂಬ್‌ ಪಾಷಾ ಮತ್ತು ಮನ್ಸೂರ್‌ ಖಾನ್‌ ಸಂಘಟನೆಗೆ ತಾಂತ್ರಿಕ ನೈಪುಣ್ಯವುಳ್ಳ ಟೆಕ್ಕಿಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿರುವುದು ಬಯಲಾಗಿದೆ. ವಿದೇಶಿ ಉಗ್ರರ ಜತೆ ಡಿಜಿಟಲ್‌ ಸಂಪರ್ಕಕ್ಕೆ ಮತ್ತು ರಹಸ್ಯ “ಡಿಜಿಟಲ್‌ ಕೋಡ್‌’ಗಳ ವಿನಿಮಯಕ್ಕಾಗಿ ಟೆಕ್ಕಿಗಳ ನೇಮಕ ಮಾಡಲು ಹವಣಿಸಲಾಗಿತ್ತು ಎಂಬ ಮಾಹಿತಿಯೂ ಹೊರಬಿದ್ದಿದೆ. “ಜೆಹಾದಿ’ ಚಟುವಟಿಕೆಗಳನ್ನು ನಡೆಸುವ ಸಂಚಿನ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಮೊಹಮದ್‌ ಜೈದ್‌ ವಿಚಾರಣೆ ಹಾಗೂ ಪ್ರಾ. ತನಿಖೆಯಲ್ಲಿ ಈ ಮಾಹಿತಿ ಗೊತ್ತಾಗಿದೆ.

ಕಾರ್ಯಾಚರಣೆಯಲ್ಲಿ ಎನ್‌ಐಎ?
ಮೂಲಗಳ ಪ್ರಕಾರ ಒಟ್ಟು ಕಾರ್ಯಾಚರಣೆಯ ನೇತೃತ್ವವನ್ನು ನ್ಯಾಶನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ (ಎನ್‌ಐಎ) ವಹಿಸಿಕೊಂಡಿತ್ತು. ಪೊಲೀಸರ ಒಂದು ತಂಡ ಮಫ್ತಿಯಲ್ಲಿ ಶಂಕಿತ ಉಗ್ರರೊಂದಿಗೆ ರೈಲಿನಲ್ಲಿತ್ತು ಎನ್ನಲಾಗುತ್ತಿದೆ. ರೈಲಿನಲ್ಲಿ ಆರೋಪಿಗಳ ಚಲನವಲನಗಳನ್ನು ಗಮನಿಸಿ ಮತ್ತಷ್ಟು ಖಚಿತವಾದ ಅನಂತರ ಉಡುಪಿಯಲ್ಲಿ ಬಂಧನ ನಡೆದಿದೆ ಎನ್ನಲಾಗುತ್ತಿದೆ. ಎನ್‌ಐಎ ಯವರು ಮೊದಲೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಕೇರಳದಿಂದ ತಪ್ಪಿಸಿಕೊಂಡು ಬಂದಿದ್ದ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಧ್ವಂಸಕ ಕೃತ್ಯ ನಡೆಸಲು ಇಬ್ಬರು ಉಗ್ರರು ಆಗಮಿಸಿದ್ದರು ಎಂಬ ಗುಪ್ತಚರ ದಳ ಮಾಹಿತಿ ಆಧಾರದ ಮೇಲೆ ಇವರನ್ನು ಉಡುಪಿ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next