ಜಮ್ಮು-ಕಾಶ್ಮೀರ: ಹಿಜ್ಬುಲ್ ಮುಜಾಹಿದೀನ್ ಉಗ್ರ ನಾಯಕರ ಜತೆ ಕಾರಿನಲ್ಲಿ ತೆರಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಡಿಎಸ್ ಪಿ ದೇವೀಂದರ್ ಸಿಂಗ್ ಹಿಂದಿನ ಒಂದೊಂದೇ ಕರಾಳ ಮುಖ ಬಯಲಾಗತೊಡಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
2001ರಲ್ಲಿ ಸಂಸತ್ ಮೇಲೆ ದಾಳಿ ನಡೆದ ಪ್ರಕರಣದಲ್ಲಿ ದೇವೇಂದ್ರ ಸಿಂಗ್ ಕೈವಾಡ ಇತ್ತು ಎಂಬ ಬಗ್ಗೆ ಅಫ್ಜಲ್ ಗುರು ಪತ್ರದಲ್ಲಿ ತಿಳಿಸಿದ್ದಾನೆ ಎಂದು ವರದಿ ಹೇಳಿದೆ. ಅಫ್ಜಲ್ ಆರೋಪದ ಪ್ರಕಾರ, ಸಂಸತ್ ದಾಳಿ ಪ್ರಕರಣದ ಆರೋಪಿಯಾಗಿದ್ದ ಪಾಕಿಸ್ತಾನಿ ಪ್ರಜೆ ಮೊಹಮ್ಮದ್ ನನ್ನು ಜತೆಗೆ ಕರೆದುಕೊಂಡು ಹೋಗಿ ಬಾಡಿಗೆ ಫ್ಲ್ಯಾಟ್ ನಲ್ಲಿ ಇರಿಸಿಕೊಳ್ಳಲು ಸಿಂಗ್ ಕೇಳಿಕೊಂಡಿದ್ದರು. ಅಲ್ಲದೇ ಆತನಿಗಾಗಿ ಕಾರೊಂದನ್ನು ಖರೀದಿಸಿರುವುದಾಗಿ ತಿಳಿಸಿದ್ದ. ಆದರೆ ಅಫ್ಜಲ್ ಆರೋಪದ ಕುರಿತು ಸಿಂಗ್ ನನ್ನು ಯಾವತ್ತೂ ತನಿಖೆಗೆ ಒಳಪಡಿಸಿಲ್ಲ ಎಂದು ವರದಿ ವಿವರಿಸಿದೆ.
ಶ್ರೀನಗರದ ಸೇನಾ ನೆಲೆ ಸಮೀಪ ಸಿಂಗ್ ಐಶಾರಾಮಿ ಬಂಗ್ಲೆ:
ಇಂಡಿಯಾ ಟುಡೇ ಗ್ರೌಂಡ್ ವರದಿ ಪ್ರಕಾರ, ಜಮ್ಮು-ಕಾಶ್ಮೀರದ ಡಿಎಸ್ ಪಿ ದೇವೇಂದರ್ ಸಿಂಗ್ ಶ್ರೀನಗರದ ಇಂದಿರಾನಗರದಲ್ಲಿರುವ ಸೇನಾ ನೆಲೆ ಸಮೀಪ ಐಶಾರಾಮಿ ಮನೆ ಹೊಂದಿರುವುದಾಗಿ ತಿಳಿಸಿದೆ. ಇದು ಶ್ರೀನಗರದ ಅತ್ಯಂತ ಸುರಕ್ಷಿತ ವಲಯ ಎಂದೇ ಗುರುತಿಸಲ್ಪಟ್ಟ ಸ್ಥಳವಾಗಿದೆ. ಸಿಂಗ್ ಮನೆಯನ್ನು 2017ರಲ್ಲಿಯೇ ಕಟ್ಟಲು ಆರಂಭಿಸಿರುವುದಾಗಿ ವರದಿ ಹೇಳಿದೆ. ಸೇನಾ ನೆಲೆಯ ಸಮೀಪದಲ್ಲಿರುವ ಬೃಹತ್ ಬಂಗ್ಲೆ ಸುತ್ತ ದೊಡ್ಡ ಗೋಡೆಯನ್ನು ಕಟ್ಟಲಾಗಿದೆ ಎಂದು ತಿಳಿಸಿದೆ.
ಕುತೂಹಲಕರ ವಿಷಯ ಏನೆಂದರೆ ಕಳೆದ ಐದು ವರ್ಷಗಳಿಂದ ಸಿಂಗ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆ ಮನೆಯಲ್ಲಿ ಪೊಲೀಸರು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ. ಶ್ರೀನಗರದಲ್ಲಿರುವ ಸಿಂಗ್ ಮನೆಗೆ ಭೇಟಿ ನೀಡಲು ಹೋದ ಇಂಡಿಯಾ ಟುಡೇ ತಂಡಕ್ಕೆ ಕುಟುಂಬ ಸದಸ್ಯರು ಮನೆ ಖಾಲಿ ಮಾಡಿರುವುದು ಪತ್ತೆಯಾಗಿತ್ತು. ಬಾಡಿಗೆ ಮನೆಗೆ ಕೂಡಾ ಬೀಗ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ದೇವೇಂದ್ರ ಸಿಂಗ್ ಹಿರಿಯ ಮಗಳು ಬಾಂಗ್ಲಾದೇಶದಲ್ಲಿ ಎಂಬಿಬಿಎಸ್ ಓದುತ್ತಿದ್ದು, ಮಗ ಕಾಶ್ಮೀರದ ಬರ್ನ್ ಹಾಲ್ ಸ್ಕೂಲ್ ನಲ್ಲಿ ಓದುತ್ತಿರುವುದಾಗಿ ವರದಿ ಹೇಳಿದೆ.