ಹೊಸದಿಲ್ಲಿ : ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ಇಂದು ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಸಿಎಸ್) 9 ಮಂದಿಯನ್ನು ಬಂಧಿಸಿದ್ದು ಇವರು ಮಾರಣಾಂತಿಕ ರಾಸಾಯನಿಕ ದಾಳಿ ನಡೆಸುವ ಪ್ಲಾನ್ ಹೊಂದಿದ್ದರೆಂದು ತಿಳಿಯಲಾಗಿದೆ.
ಇವರು ತಮ್ಮಲ್ಲಿದ್ದ ರಾಸಾಯನಿಕವನ್ನು ಕುಡಿಯುವ ನೀರಿಗೆ ಅಥವಾ ಆಹಾರಕ್ಕೆ ಸೇರಿಸಿ ಅತ್ಯಧಿಕ ಸಂಖ್ಯೆಯ ಅಮಾಯಕರನ್ನು ಕೊಲ್ಲುವ ಯೋಜನೆ ಹೊಂದಿದ್ದರೆಂದು ಗೊತ್ತಾಗಿದೆ.
ಉಮ್ಮತ್ ಎ ಮೊಹಮ್ಮದೀಯ ಎಂಬ ಹೆಸರಿನ ಸಂಘಟನೆಯನ್ನು ಕಟ್ಟಿಕೊಂಡಿರುವ ಈ ಶಂಕಿತರು ಪ್ರಯಾಗ್‌ರಾಜ್‌ನಲ್ಲೀಗ ಸೇರಿರುವ ಕೋಟ್ಯಂತರ ಶ್ರದ್ಧಾಳುಗಳ ಮೇಲೆ ದಾಳಿ ನಡೆಸುವ ಹುನ್ನಾರ ಹೊಂದಿದ್ದರೇ ಎಂಬುದನ್ನು ಈಗ ಎಟಿಎಸ್ ತನಿಖೆ ಮಾಡುತ್ತಿದೆ.
ಈ ನಿಟ್ಟಿನಲ್ಲಿ ತಾನು ಕಲೆ ಹಾಕಿರುವ ಅಮೂಲ್ಯ ಗುಪ್ತ ಮಾಹಿತಿಗಳನ್ನು ಎಟಿಎಸ್, 2019ರ ಕುಂಭಮೇಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವುದಾಗಿ ವರದಿಗಳು ತಿಳಿಸಿವೆ.
ಎಟಿಎಸ್ ಅಧಿಕಾರಿಗಳು ಬಂಧಿತ ಶಂಕಿತರಿಂದ ಹೈಡ್ರೋಜನ್ ಪೆರಾಕ್ಸೆ„ಡ್ ಲೇಬಲ್ ಇದ್ದ ರಾಸಾಯನಿಕ ಬಾಟಲನ್ನು ವಶಪಡಿಸಿಕೊಂಡಿರುವುದು ಸಂಭಾವ್ಯ ರಾಸಾಯನಿಕ ದಾಳಿ ಯೋಜನೆಗೆ ಪುಷ್ಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಟಿಎಸ್ ಅಧಿಕಾರಿಗಳು ಬಂಧಿತ ಶಂಕಿತರ ಬಳಿ ಇದ್ದ ಕೆಮಿಕಲ್ ದ್ರಾವಣ, ಬಿಳಿ ಪುಡಿ, ಆರು ಚೂರಿಗಳು, ಆರು ಪೆನ್ ಡ್ರೈವ್‌ಗಳು, 24ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು, ಆರಕ್ಕೂ ಹೆಚ್ಚು ಲ್ಯಾಪ್ ಟಾಪ್‌ಗ್ಳು, ಆರಕ್ಕೂ ಅಧಿಕ ವೈಫೈ ರೂಟರ್‌ಗಳು, ಹಾರ್ಡ್ ಡ್ರೈವ್‌ಗಳು, ಮಾಡೆಮ್‌ಗಳು, ಡಾಂಗಲ್‌ಗಳು ಮತ್ತು RAM ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ 9 ಮಂದಿಯಲ್ಲಿ ಒಬ್ಬನನ್ನು ಮಝರ್ ಮಲಬಾರಿ ಎಂದು ಗುರುತಿಸಲಾಗಿದೆ. ಈತನು ದೇಶಭ್ರಷ್ಟ ಭೂಗತ ಪಾತಕಿ ರಶೀದ್ ಮಲಬಾರಿಯ ಮಗನೆಂದೂ, ದಾವೂದ್ ಇಬ್ರಾಹಿಂ ಗ್ಯಾಂಗಿನ ಒಬ್ಬ ಶಾರ್ಪ್ ಶೂಟರ್ ಎಂದೂ ಗೊತ್ತಾಗಿದೆ.