Advertisement

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಬಂಧಿಸಿ

03:56 PM Nov 15, 2019 | Suhan S |

ಮಾಲೂರು: ಸಂವಿಧಾನ ರಚನೆಯ ವಿಚಾರವಾಗಿ ಮಕ್ಕಳಿಗೆ ಗೊಂದಲಗಳನ್ನು ಮೂಡಿಸುವ ಕಾರ್ಯಚಿಂತನೆ ನಡೆಸಿದ್ದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌, ವಿನಾಕಾರಣ ಸುತ್ತೋಲೆ ಹೊರಡಿಸಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಪಟ್ಟಣದಲ್ಲಿ ಸರ್ಕಾರದ ಅಣುಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿತು.

Advertisement

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎಸ್‌.ಎಂ.ವೆಂಕಟೇಶ್‌ ಹಾಗೂ ಚವ್ವೆನಹಳ್ಳಿ ವಿಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪಟ್ಟಣ ಪ್ರಮುಖ ಬೀದಿಗಳಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಣಕು ಶವಯಾತ್ರೆ ನಡೆಸಿದರು.

ಬಂಧನಕ್ಕೆ ಆಗ್ರಹ: ನಂತರ ಬಿಇಒ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸುತ್ತೋಲೆ ಹೊರಡಿಸಿ ಸಂವಿಧಾನ ರಚನೆಯ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸುವ ಕಾರ್ಯಕ್ರಮವನ್ನು ರೂಪಿಸಿದ್ದವರನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿದರು.

ಸುತ್ತೋಲೆಯಿಂದ ಗೊಂದಲ: ಈ ವೇಳೆ ಮಾತನಾಡಿದ ಎಸ್‌.ಎಂ.ವೆಂಕಟೇಶ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರದಾನ ಕಾರ್ಯದರ್ಶಿ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸುವ ಸುತ್ತೋಲೆ ಯನ್ನು ಹೊರಡಿಸಿ, ಸಂವಿಧಾನವನ್ನು ಅಂಬೇಡ್ಕರ್‌ ಒಬ್ಬರೇ ರಚಿಸಿಲ್ಲ ಅವರು, ಅನೇಕರು ರಚಿಸಿದ್ದ ಪುಟಗಳನ್ನು ವಿನ್ಯಾಸ ಮಾಡಿದ್ದಾರೆ ಎಂಬ ಅರ್ಥದಲ್ಲಿ ಶಾಲೆಗಳಲ್ಲಿ ನಾಟಕಗಳನ್ನು ಮಾಡುವಂತೆ ತಿಳಿಸಿದ್ದರು. ಇದು ಸರಿಯಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವದ ವಿರೋಧಿ: ಇದು ದಲಿತರ ಹಕ್ಕು ಮತ್ತು ಅವರ ಕರ್ತವ್ಯಗಳನ್ನು ಸಾರ್ವಜನಿಕರಿಂದ ಮರೆಮಾಚುವ ಹುನ್ನಾರವಾಗಿದ್ದು, ಉಮಾಶಂಕರ್‌ ಓರ್ವ ಪ್ರಜಾಪ್ರಭುತ್ವದ ವಿರೋಧಿ ಎನ್ನುವುದು ಸಾಬೀತುಪಡಿಸುತ್ತದೆ. ಈ ಕೂಡಲೇ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಸೇವೆಯಿಂದ ವಜಾಗೊಳಿಸಿ, ಬಂಧಿಸಬೇಕಾಗಿದೆ ಎಂದು ಒತ್ತಾಯಿಸಿದರು.

Advertisement

ಅದೇ ರೀತಿಯಲ್ಲಿ ಇಲಾಖೆಯಲ್ಲಿ ಭಾರಿ ಪ್ರಮಾಣ ಮಸಲತ್ತುಗಳು ನಡೆಯುತ್ತಿದ್ದರೂ ತಮಗೇನು ತಿಳಿಯದಂತೆ ಮೌನವಾಗಿರುವ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ತಹಶೀಲ್ದಾರ್‌ಅವರಿಗೆ ಮನವಿ ಸಲ್ಲಿಸಿ, ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಕೃತಿಗಳನ್ನು ದಹನ ಮಾಡಿದರು. ಪ್ರತಿಭಟನೆಯಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next