ಗದಗ: ಸ್ವಚ್ಛ ಭಾರತ ಯೋಜನೆಯಡಿ ಮನೆ ಮುಂದೆ ಶೌಚಾಲಯ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದಲ್ಲದೇ, ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿರುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದಲಿತ ಬಹುಜನ ಚಳವಳಿ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.
ಈ ಕುರಿತು ಗದಗ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿ, ರೋಣ ತಾಲೂಕು ಅಬ್ಬಿಗೇರಿ ಗ್ರಾಮದಲ್ಲಿ ಮಂಜುನಾಥ ಚಿ. ಹಾದಿಮನಿ ಹಾಗೂ ಶಿವಾನಂದ ಹಾದಿಮನಿ ಅವರು ಕುಟುಂಬ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯ ಕಟ್ಟುತ್ತಿದ್ದು, ಈ ಕುರಿತು 11-06-2019ರಂದು ಶಮಶಾದಬೇಗಂ ದಾವಲಸಾಬ ತಹಶೀಲ್ದಾರ, ದಾವಲಸಾಬ ಕಾಶೀಂಸಾಬ ತಹಶೀಲ್ದಾರ, ಮಮತಾ ಬೇಗಂ ಮೋದಿನಸಾಬ ಹುಡೇದ, ದಾವಲ ಸಾಬ ಮೋದಿನಸಾಬ ಹುಡೇದ, ಮೋಲಾಸಾಬ ಇಮಾಮಸಾಬ ತಹಶೀಲ್ದಾರ, ಶಿವನಗೌಡ ಮೆಣಸಗಿ(ಪಿಡಿಒ) ಎಲ್ಲರೂ ಸೇರಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ್ದಾರೆ.
ಘಟನೆ ಬಗ್ಗೆ ಎಫ್‌ಐಆರ್ ಮಾಡಿರಿ ಎಂದು ನರೇಗಲ್ ಪೊಲೀಸ್ ಠಾಣೆಗೆ ಹೋಗಿದ್ದಾಗ ಪೊಲೀಸರು ದೂರನ್ನು ತಿರಸ್ಕರಿಸಿದ್ದಾರೆ. ಪಿಡಿಒ ಸಹಾಯದಿಂದ ಸವರ್ಣಿಯರಿಂದ ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ. ನಂತರ ದಲಿತರಿಂದ ದೂರನ್ನು ಸ್ವೀಕರಿಸಿದ್ದಾರೆ. ಆದರೆ ಈವರೆಗೆ ಯಾವುದೇ ಒಬ್ಬ ಆರೋಪಿಯನ್ನೂ ನರೆಗಲ್ಲ ಪೊಲೀಸರು ಬಂಧಿಸಿಲ್ಲ. ದಲಿತ ಕುಟುಂಬಕ್ಕೆ ರಕ್ಷಣೆ ಒದಗಿಸಿಲ್ಲ. ಹೀಗಾಗಿ ಪೊಲೀಸರ ಕ್ರಮ ಸಂಶಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ದಲಿತರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ ಆರೋಪದ ಮೇಲೆ ನರೇಗಲ್ಲ ಪಿಎಸ್‌ಐ ಹಾಗೂ ಹವಾಲ್ದಾರ, ಅಬ್ಬಿಗೇರಿ ಗ್ರಾಮದ ಪಿ.ಡಿ.ಒ. ಅವರನ್ನು ಅಮಾನತು ಮಾಡಬೇಕು. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡರಾದ ಎಲ್. ನಾರಾಯಣಸ್ವಾಮಿ, ನಾಗಮ್ಮ ಎಂ. ಹಾಲಿನವರ, ಮಾರುತಿ ಅಂಗಡಿ, ಮಾಬುಬಿ, ಮಲ್ಲಮ್ಮ, ನೀಲಮ್ಮ, ಎ.ಸಿ. ಹಾದಿಮನಿ, ವಿ.ಎ. ಹಾದಿಮನಿ, ಮೀನಾಕ್ಷಿ, ಪಿ.ಎಸ್. ಹಾದಿಮನಿ, ಪುಷ್ಪಾ ಹಾದಿಮನಿ, ಶಾಂತಮ್ಮ ಚಳಗೇರಿ, ಶಶಿಕಲಾ ಶಿ. ಹಾದಿಮನಿ, ಚಂದ್ರಶೇಖರ ಚ. ಚಳಗೇರಿ, ಗಿರಜವ್ವ, ಕಾಳವ್ವ, ಜುಬೇದಾ, ಪಾರವ್ವ ಪಾಲ್ಗೊಂಡಿದ್ದರು.