Advertisement

ಇಬ್ಬರು ಖತರ್ನಾಕ್‌ ಸರಗಳ್ಳರ ಬಂಧನ

12:28 AM Jan 29, 2020 | Team Udayavani |

ಬೆಂಗಳೂರು: ಯೂಟ್ಯೂಬ್‌ನಲ್ಲಿ ಸರಚೋರರ ಕರಾಮತ್ತು ವೀಕ್ಷಣೆ, ಆನ್‌ಲೈನ್‌ ತಾಣದಲ್ಲಿ ಕೃತ್ಯಕ್ಕೆ ಬೈಕ್‌ ಖರೀದಿ, ಪೊಲೀಸರಿಗೆ ಸಿಕ್ಕಿಬೀಳಬಾರದು ಎಂದು ದೇವರಿಗೆ ಪೂಜೆ..! ಬಸವನಗುಡಿ ಪೊಲೀಸರ ಬಲೆಗೆ ಬಿದ್ದಿರುವ ಇಬ್ಬರು ಸರಗಳ್ಳರ ಹಿನ್ನೆಲೆಯಿದು.

Advertisement

ಕಳೆದ 6 ತಿಂಗಳಿನಿಂದ ಬೆಂಗಳೂರು ದಕ್ಷಿಣ ವಿಭಾಗ ಸೇರಿ ಹಲವು ಕಡೆ ವೃದ್ಧ ಮಹಿಳೆಯರನ್ನು ಗುರುತಿಸಿ ಸರ ದೋಚುತ್ತಿದ್ದ ಚಿಕ್ಕಬಾಣಸವಾಡಿಯ ರಾಮಮೂರ್ತಿ (33) ಎಲೆಕ್ಟ್ರಾನಿಕ್‌ ಸಿಟಿಯ ಕಾರ್ತಿಕ್‌ (35) ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಆರೋಪಿಗಳಿಂದ 3 ಬೈಕ್‌ಗಳು ಹಾಗೂ 12.28 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಜ.11ರಂದು ಮಧ್ಯಾಹ್ನ ಎನ್‌.ಆರ್‌ ಕಾಲೋನಿಯಲ್ಲಿ ನಡೆದುಹೋಗುತ್ತಿದ್ದ ವಿನೋದ ಲಕ್ಷ್ಮೀ (69) ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ್ದ ಇಬ್ಬರು ದುಷ್ಕರ್ಮಿಗಳು ಆಕೆಯ ಕತ್ತಿನಲ್ಲಿದ್ದ ಸುಮಾರು ಐವತ್ತು ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಇನ್ಸ್‌ಪೆಕ್ಟರ್‌ ಕೆಂಪೇಗೌಡ, ಪಿಎಸ್‌ಐ ರೇಷ್ಮಾ ನೇತೃತ್ವದ ತಂಡ ಆರೋಪಿಗಳಾದ ರಾಮ ಮೂರ್ತಿ ಹಾಗೂ ಕಾರ್ತಿಕ್‌ನನ್ನು ಬಂಧಿಸಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆಸಿದ್ದ 9 ಸರಕಳವು ಪ್ರಕರಣಗಳು ಪತ್ತೆಯಾಗಿವೆ.

ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ ರಾಮಮೂರ್ತಿ ಹಾಗೂ ಕಾರ್ತಿಕ್‌ ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ಸುಲಭವಾಗಿ ಹಣ ಗಳಿಸಿ ಐಶಾರಾಮಿ ಜೀವನ ನಡೆಸಲು ಸರಕಳವು ಕೃತ್ಯಗಳಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದರು.

Advertisement

ಅದರಂತೆ ಯೂಟ್ಯೂಬ್‌ನಲ್ಲಿ ಮಹಿಳೆಯರ ಸರ ಹೇಗೆ ಕದಿಯುತ್ತಾರೆ ಎಂದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಆನ್‌ಲೈನ್‌ ಮಾರಾಟ ತಾಣದಲ್ಲಿ ಮೂರು ಬೈಕ್‌ಗಳನ್ನು ಕೂಡ ಖರೀದಿ ಮಾಡಿದ್ದರು. ಬಳಿಕ ಪೊಲೀಸರಿಗೆ ಸಿಕ್ಕಿ ಬೀಳಬಾರದು ಎಂಬ ಉದ್ದೇಶದಿಂದ ಮೈಸೂರು ರಸ್ತೆಯಲ್ಲಿರುವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಳ್ಳುತ್ತಿದ್ದರು.

ರಸ್ತೆಬದಿ ನಡೆದುಕೊಂಡು ಹೋಗುವ ವೃದ್ಧ ಮಹಿಳೆಯರನ್ನು ಟಾರ್ಗೆಟ್‌ ಮಾಡುತ್ತಿದ್ದ ಆರೋಪಿಗಳು ಬೈಕ್‌ನಲ್ಲಿ ಅವರನ್ನು ಹಿಂಬಾಲಿಸಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಕೃತ್ಯದ ವೇಳೆ ಇಬ್ಬರು ಹೆಲ್ಮೆಟ್‌ ಧರಿಸುತ್ತಿದ್ದರು. ಕಳವು ಮಾಡಿದ ಸರಗಳನ್ನು ಮಾರಿ ಬಂದ ಹಣದಲ್ಲಿ ದುಶ್ಚಟಗಳಿಗೆ ಹಾಗೂ ಶೋಕಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next