ಬೆಂಗಳೂರು: ಇತ್ತೀಚೆಗೆ ಶಾಂತಿನಗರದಲ್ಲಿರುವ ಆದಿನಾಥ ಜೈನ ಮಂದಿರದಲ್ಲಿ ಕಳವು ಮಾಡಿದ್ದ ಪ್ರಕರಣ ಪತ್ತೆ ಹಚ್ಚಿರುವ ಅಶೋಕನಗರ ಠಾಣೆ ಪೊಲೀಸರು ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ಪ್ರವೀಣ್ ಕುಮಾರ್ (29), ಜೋಶಿ ರಾಮ್ (24), ಗೋವಿಂದಕುಮಾರ್ (32) ಮತ್ತು ರಾಜೇಂದ್ರ ಕುಮಾರ್ (30) ಬಂಧಿತರು.
ಆರೋಪಿಗಳಿಂದ 9.70 ಲಕ್ಷ ರೂ. ಮೌಲ್ಯದ 14 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸೆ.9ರಂದು ಜೈನ ಮಂದಿರದಲ್ಲಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಜೋಶಿರಾಮ್ ಎಂಬಾತ ಕೆಲ ತಿಂಗಳ ಹಿಂದೆ ಜೈನ ಮಂದಿರದಲ್ಲಿ ಟೈಲ್ಸ್ ಅಳವಡಿಸುವ ಕೆಲಸಕ್ಕೆ ಬಂದಿದ್ದ. ಈ ವೇಳೆ ಮಂದಿರದಲ್ಲಿ ಲಕ್ಷಾಂತರೂ. ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಗಮನಿಸಿದ್ದ. ಜೂನ್ ತಿಂಗಳಲ್ಲಿ ಟೈಲ್ಸ್ ಕೆಲಸ ಮುಗಿಸಿಕೊಂಡು ತನ್ನ ಊರಾದ ರಾಜಸ್ಥಾನದ ಪಾಲಿ ಜಿಲ್ಲೆಯ ಗ್ರಾಮಕ್ಕೆ ಹೋಗಿದ್ದ. ಈ ವೇಳೆ ಜೈನ ಮಂದಿರದಲ್ಲಿ ಬೆಳ್ಳಿಯ ವಸ್ತುಗಳಿರುವ ಬಗ್ಗೆ ಸ್ನೇಹಿತರಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ಸೆಪ್ಟಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದು ಎರಡು ದಿನಗಳ ಕಾಲ ಶಾಂತಿನಗರದಲ್ಲೇ ತಂಗಿದ್ದರು. ಸೆ.9ರಂದು ರಾತ್ರಿ ಮಂದಿರದ ಬೀಗ ಮುರಿದು ಒಳ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಕೇಂದ್ರ ವಿಭಾಗ ಡಿಸಿ’ಇ ಎಚ್.ಟಿ.ಶೇಖರ್, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಸಿ.ಬಾಲಕೃಷ್ಣ, ಅಶೋಕನಗರ ಠಾಣಾಧಿಕಾರಿ ಕೆ.ಬಿ.ರವಿ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.