Advertisement

ಮನೆಗಳಿಗೆ ಕನ್ನ ಹಾಕಿದ್ದ ವೃತ್ತಿಪರ ಕಳ್ಳರ ಸೆರೆ

03:41 PM Jun 15, 2023 | Team Udayavani |

ಮೈಸೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ಮೂವರು ವೃತ್ತಿ ನಿರತ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತರಿಂದ 18 ಲಕ್ಷ ರೂ.ಮೌಲ್ಯದ 289 ಗ್ರಾಂ ಚಿನ್ನಾಭರಣ ಮತ್ತು 2.4 ಕೆಜಿ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ಹೇಳಿದರು.

ನಗರದಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಹುಣಸೂರು ಪಟ್ಟಣದ ಮಾರುತಿ, ಮಂಜುನಾಥ ಬಡಾವಣೆಯಲ್ಲಿ ಮನೆ ಕಳವು ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಹುಣಸೂರು ಪಟ್ಟಣ ಪೊಲೀಸರು, ಹಾಸನ ಜಿಲ್ಲೆಯ ಚನ್ನರಾಯಪ್ಪಣ್ಣದ ಮಂಜುನಾಥ್‌ ಅಲಿಯಾಸ್‌ ಚೂಟಿ ಮಂಜು (40), ಮುರುಗೇಶ್‌ ಅಲಿಯಾಸ್‌ ಕಪ್ಪೆ (40), ಹುಣಸೂರಿನ ಗೋಪಿಕೃಷ್ಣ ಅಲಿಯಾಸ್‌ ಗೋಪಿ (58) ಎಂಬ ವೃತ್ತಿನಿರತ ಖದೀಮರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನಾಲ್ಕು ಪ್ರಕರಣಗಳು ದಾಖಲಾಗಿದ್ದವು: ಹುಣಸೂರು ಪಟ್ಟಣದ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾರುತಿ ಬಡಾವಣೆ ಮತ್ತು ಮಂಜುನಾಥ ಬಡಾವಣೆಗಳಲ್ಲಿ ರಾತ್ರಿ ಕಳವು ಪ್ರಕರಣಗಳು ಆಗಿದ್ದವು, ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಮೇ ತಿಂಗಳಿನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಡಾ.ನಂದಿನಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡವು ಮೂರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ವಿರುದ್ಧ ಹುಣಸೂರು ಪಟ್ಟಣ ಠಾಣೆಯಲ್ಲಿ 5, ಪಿರಿಯಾಪಟ್ಟಣ ಠಾಣೆಯಲ್ಲಿ 1, ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ 1, ಒಟ್ಟು ಮೈಸೂರು ಜಿಲ್ಲೆಯಲ್ಲಿ 7 ಪ್ರಕರಣಗಳು ಇವರ ವಿರುದ್ಧ ದಾಖಲಾಗಿರುವುದು ಕಂಡು ಬಂದಿದೆ ಎಂದರು.

ಸ್ವತ್ತನ್ನು ಗಿರವಿ ಇಡಲು ಹೋಗುವ ವೇಳೆ ಸೆರೆ: ಬಂಧಿತರಿಂದ 18 ಲಕ್ಷ ರೂ.ಮೌಲ್ಯದ 289 ಗ್ರಾಂ ಚಿನ್ನಾಭರಣ ಮತ್ತು 2.4 ಕೆಜಿ ಬೆಳ್ಳಿ ಪದಾರ್ಥಗಳು ಮತ್ತು ಮನೆಗಳ ಬಾಗಿಲ ಲಾಕ್‌ ಮುರಿಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ಸ್ವತ್ತನ್ನು ಗಿರವಿ ಇಡಲು ಹೋಗುವ ವೇಳೆ ಇಬ್ಬರನ್ನು ಹುಣಸೂರಿನಲ್ಲಿ ಮತ್ತು ಒಬ್ಬರನ್ನು ಕೆ.ಆರ್‌. ನಗರದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು. ಮೂವರು ಆರೋಪಿಗಳು ಹಳೆಯ ಕಳ್ಳರೇ: ಮೂವರು ಆರೋಪಿಗಳು ಹಳೆಯ ಕಳ್ಳರೇ (ಎಂಒಬಿ) ಆಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಇವರ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ವಿಚಾರಣಾಧೀನ ಕೈದಿಗಳಾಗಿದ್ದಾರೆ. ಇವರಲ್ಲಿ ಇಬ್ಬರು ಜ್ಯುಡಿಷಿಯಲ್‌ ಕಸ್ಟಡಿಯಲ್ಲಿ ಶಿಕ್ಷೆ ಅನುಭವಿಸಿ ಹೊರಗೆ ಬಂದಿದ್ದಾರೆ. ಜತೆಗೆ ಈ ಮೂವರು ಜೈಲಿನಲ್ಲಿರುವಾಗಲೇ ಸ್ನೇಹಿತರಾಗಿದ್ದವರಾಗಿದ್ದಾರೆ ಎಂದರು.

Advertisement

ಮಧ್ಯಮ ವರ್ಗದ ಕುಟುಂಬಗಳ ಮನೆಗಳೇ ಗುರಿ: ಮಧ್ಯಮ ವರ್ಗದ ಕುಟುಂಬಗಳ ಮನೆಯಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಖದೀಮರ ತಂಡ, ಯಾವ ಮನೆಯ ಲಾಕ್‌ ಆಗಿದೆ ಎಂಬುದನ್ನು ಪತ್ತೆ ಮಾಡಿಕೊಂಡು ರಾತ್ರಿ ವೇಳೆ ಕಬ್ಬಿಣದ ಸಲಕರಣೆಗಳನ್ನು ಬಳಸಿಕೊಂಡು, ಮನೆಯ ಮುಂಬಾಗಿಲ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೇಳಿದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಡಾ.ನಂದಿನಿ, ಹುಣಸೂರು ಉಪವಿಭಾಗ ಡಿಎಸ್ಪಿ ಎಂ.ಕೆ.ಮಹೇಶ್‌, ಹುಣಸೂರು ಪಟ್ಟಣ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಎಂ. ದೇವೇಂದ್ರ, ಎಎಸ್‌ಐ ಪುಟ್ಟನಾಯಕ ಹಾಗೂ ಸಿಬ್ಬಂದಿ ಇದ್ದರು.

ಜಿಲ್ಲೆಯಲ್ಲಿವೆ ಒಟ್ಟು 28 ಬ್ಲಾಕ್‌ ಸ್ಪಾಟ್‌: ಇತ್ತೀಚೆಗೆ ತಿ.ನರಸೀಪುರದ ಮೂಗೂರು ಬಳಿಯ ಹೆದ್ದಾರಿಯಲ್ಲಿ ನಡೆದಿದ್ದ ಅಪಘಾತಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೈವೇಯಲ್ಲಿ ಅಪಘಾತ ತಡೆಗೆ ತಕ್ಷಣಕ್ಕೆ ಮತ್ತು ದೀರ್ಘ‌ಕಾಲಿಕವಾಗಿ ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಒಂದು ಸಲಹೆ ನೀಡಿದ್ದೇವೆ. ಜತೆಗೆ ನಮ್ಮ ಪೊಲೀಸ್‌ ಇಲಾಖೆಯಿಂದ ಜಿಲ್ಲೆಯಲ್ಲಿ 28 ಬ್ಲಾಕ್‌ ಸ್ಪಾಟ್‌ ಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಪಘಾತ ತಡೆಗೆ ಮುನ್ನೆಚ್ಚರಿಕೆ ವಹಿ ಸಲು ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಮನೆಯ ಬೀಗ ಹಾಕಿರುವುದು, ಮನೆಗೆ ಹಾಕಲಾಗಿದ್ದ ಪೇಪರ್‌, ಹಾಲಿನ ಪ್ಯಾಕೆಟ್‌ ಬಿದ್ದಲ್ಲೆ ಬಿದ್ದಿರುವುದು, ಮನೆಯ ಮುಂಬಾಗಿಲ ಕಸ ಗುಡಿಸದೇ ಇರುವುದನ್ನು ಗಮನಿಸುವ ಖದೀಮರು ಮನೆ ಕಳ್ಳತನಕ್ಕೆ ಮುಂದಾಗುತ್ತಾರೆ. ಹಾಗಾಗಿ, ಸಾರ್ವಜನಿಕರು ಹಲವು ದಿನಗಳ ಮಟ್ಟಿಗೆ ಮನೆಗೆ ಬೀಗ ಹಾಕಿ ಬೇರೆಡೆಗೆ ತೆರಳುವಾಗ ಮುಂಚಿತವಾಗಿ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಅಂತಹ ಸಮಯದಲ್ಲಿ ಪೊಲೀಸ್‌ ಗಸ್ತನ್ನು ಅಲ್ಲಿ ಹೆಚ್ಚಿಸಲು, ಗಮನ ಇಡಲು ಅನುಕೂಲವಾಗುತ್ತದೆ. – ಸೀಮಾ ಲಾಟ್ಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next