ಕನಕಪುರ: ಮನೆ ಮನೆ ಆರೋಗ್ಯ ಸರ್ವೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಆರೋಪಿಯನ್ನು ಹಾರೋಹಳ್ಳಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ತಾಲೂಕಿಹಾರೋಹಳ್ಳಿಹೋಬಳಿಯ ಕಣಿವೆ ಮಾದಾಪುರ ಗ್ರಾಮದಲ್ಲಿ ಅದೇ ಗ್ರಾಮದ ಬಂಜಾರ ಸಮುದಾಯದ ನಿರ್ಮಲ ಎಂಬ ಅಂಗನವಾಡಿ ಕಾರ್ಯಕರ್ತೆ ಆರೋಗ್ಯ ಇಲಾಖೆ ಆದೇಶದ ಮೇರೆಗೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ವಿವಿಧ ಆರೋಗ್ಯ ತಪಾಸಣೆ ಮಾಡುವಕರ್ತವ್ಯದಲ್ಲಿದ್ದರು. ಈ ವೇಳೆ ಅದೇ ಗ್ರಾಮದ ವೆಂಕಟೇ ಗೌಡ ಎಂಬುವವರ ಮನೆಯ ಸದಸ್ಯರಿಗೆ ಆರೋಗ್ಯ ತಪಾಸಣೆಗೆ ಮುಂದಾದ ವೇಳೆ ವೆಂಕಟೇಗೌಡ ಅವರ ಮಗ ರಾಮಕೃಷ್ಣ ಅಂಗನ ವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದ.
ಈ ಸಂಬಂಧ ಹಾರೋಹಳ್ಳಿ ಠಾಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ದೂರು ದಾಖಲಿಸಿದ್ದರು. ಆರೋಪಿ ರಾಮಕೃಷ್ಣ ಪ್ರತಿ ದೂರು ದಾಖಲು ಮಾಡಿದ್ದ ನಂತರ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಂಜಾರ ಮತ್ತು ದಲಿತ ಸಂಘಟನೆ ಮುಖಂಡರು ಒತ್ತಾಯಿಸಿದ್ದರು.
ಆರೋಪಿ ರಾಮಕೃಷ್ಣ ತಪ್ಪಿತಸ್ತ ಎಂಬುದು ಮೇಲ್ನೋಟಕ್ಕೆ ಪೊಲೀಸರಿಗೆ ಕಂಡು ಬಂದಿತ್ತು. ಬಳಿಕ ತಲೆ ಮರೆಸಿಕೊಂಡಿದ್ದ ರಾಮಕೃಷ್ಣ ಜಿಗಣಿ ಬಳಿಯ ರಾಗಿಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಎಸ್‌ಪಿ ಗಿರೀಶ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ತನಿಖಾಧಿಕಾರಿ ಡಿ.ವೈಎಸ್‌ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಪಿ.ಎಸ್.ಐ. ಮುರಳಿ, ಸಿಬ್ಬಂದಿ ಬೋರೇಗೌಡ, ಸತೀಶ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.