ಬೆಂಗಳೂರು: ತಮಿಳುನಾಡಿನ ದೇವಾಲಯವೊಂದರಲ್ಲಿ 150 ವರ್ಷಗಳ ಹಳೇ ವಿಗ್ರಹಗಳನ್ನು ಕಳವು ಮಾಡಿ ನಗರದಲ್ಲಿ ಮಾರಾಟ ಮಾಡಲು ಯತಿಸಿದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಅರುಣ್ (25), ಷೌಕೀರ್ (23) ಬಂಧಿತರು. ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ. ಆರೋಪಿಗಳಿಂದ ಮೂರು ಪಂಚಲೋಹ ವಿಗ್ರಹಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ತಮಿಳುನಾಡು ಪೊಲೀಸರು ಬೈಕ್ ಕಳವು, ಕಳ್ಳತನ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲಿ ಪರಸ್ಪರ ಪರಿಚಯವಾದ ಆರೋಪಿಗಳು ಹೊರಬಂದ ಬಳಿಕ ಬೆಂಗಳೂರಿಗೆ ಬಂದು ಎಚ್‌ಎಸ್‌ಆರ್ ಲೇಔಟ್, ಹೊಸೂರಿನಲ್ಲಿ ಬೈಕ್ ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಬೈಕ್ ಬಿಟ್ಟು ವಿಗ್ರಹ ಕದ್ದರು: ಕದ್ದ ಬೈಕ್‌ಗೆ ನಿರೀಕ್ಷಿತ ಬೆಲೆ ಸಿಗದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪಂಚಲೋಹ ವಿಗ್ರಹಗಳನ್ನು ಕದ್ದು ಮಾರಾಟ ಮಾಡಲು ಸಂಚು ರೂಪಿಸಿದ್ದರು. ಅದರಂತೆ ತಮಿಳುನಾಡಿನ ಕೆಲ ದೇವಾಲಯಗಳಿಗೆ ಭಕ್ತರ ಸೋಗಿನಲ್ಲಿ ಭೇಟಿ ನೀಡುತ್ತಿದ್ದ ಆರೋಪಿಗಳು, ಸಿಸಿಟಿವಿ ಕ್ಯಾಮೆರಾ ಹಾಗೂ ಭದ್ರತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು.
ವೇಲೂರು ಜಿಲ್ಲೆಯ ವಾಲಗ ತಾಲೂಕಿನ ಸಾತಂಬಾಕಂನಲ್ಲಿರುವ ಭಜನಾ ಮಂದಿರಕ್ಕೆ ಭೇಟಿ ನೀಡಿದ್ದ ಷೌಕೀರ್ ಮತ್ತು ಇತರೆ ಆರೋಪಿಗಳು, ಭದ್ರತೆ ಇಲ್ಲದಿರುವುದನ್ನು ಗಮನಿಸಿ ಮಂದಿರದಲ್ಲಿದ್ದ 150 ವರ್ಷ ಹಳೆಯ ಪಂಚೊಲೋಹದ ವೇಣುಗೋಪಾಲ ಸ್ವಾಮಿ, ಶ್ರೀಕೃಷ್ಣ, ಗಣಪತಿ ಸೇರಿ ನಾಲ್ಕು ವಿಗ್ರಹಗಳನ್ನು ಆರು ತಿಂಗಳ ಹಿಂದೆ ಕಳವು ಮಾಡಿದ್ದರು.
ಖಾಸಗಿ ವಾಹನದಲ್ಲಿ ವಿಗ್ರಹಗಳನ್ನು ನಗರಕ್ಕೆ ಸಾಗಿಸಿದ್ದ ಷೌಕೀರ್, ಗೊಲ್ಲಹಳ್ಳಿಯ ಬಾಡಿಗೆ ಮನೆಯಲ್ಲಿ ಇರಿಸಿ ವಿಗ್ರಹ ಕೊಳ್ಳುವವರ ಹುಡುಕಾಟ ನಡೆಸುತ್ತಿದ್ದ. ಈ ಮಧ್ಯೆ ಒಂದು ವಿಗ್ರಹವನ್ನು ಮಂಗಳೂರು ಮೂಲದ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಇನ್ನುಳಿದ ಮೂರು ವಿಗ್ರಹಗಳನ್ನು ಮಂಗಳೂರು ಮೂಲದ ವ್ಯಾಪಾರಿಯೊಬ್ಬರಿಗೆ 15 ಲಕ್ಷ ರೂ.ಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.