ಮಂಡ್ಯ: ಲಾಕ್‌ಡೌನ್ ಸಂದರ್ಭ ಉಪಯೋಗಿಸಿಕೊಂಡ ಕಳ್ಳರು ಮಂಡ್ಯ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಕಳ್ಳತನ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಮಂಡ್ಯ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗಮಂಗಲ ತಾಲ್ಲೂಕಿನ ಚಾಕೇನಹಳ್ಳಿ ಗ್ರಾಮದ ನಿವಾಸಿ ಸಿ.ರವಿಕುಮಾರ್, ಮಂಡ್ಯ ತಾಲ್ಲೂಕಿನ ಸೂನಗಹಳ್ಳಿ ಗ್ರಾಮದ ಎಸ್.ಆರ್.ಮಂಜುನಾಥ, ಎಸ್.ಪಿ.ನಾಗರಾಜು, ಸಿ.ಬಿ.ಹೇಮಂತ್‌ಕುಮಾರ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಎನ್.ವೈ.ರಾಮಕೃಷ್ಣ, ಅನ್ನಪೂರ್ಣೇಶ್ವರಿ ನಗರದ ಬಿ.ಜಿ.ವೆಂಕಟೇಶ್, ಮಂಡ್ಯ ನಗರದ ಯತ್ತಗದಹಳ್ಳಿ ರಸ್ತೆಯ ವಿವಿ ಪುರಂ ನಿವಾಸಿ ಸಾದಿಕ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಕಾರ್ತಿಕ್‌ಗಾಗಿ ಶೋಧ ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಿಂದ 61 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 160 ಕಂಪ್ಯೂಟರ್, 16 ಬ್ಯಾಟರಿ, 3 ಟಿವಿ, 1 ವಾಷಿಂಗ್‌ಮಿಷಿನ್, 1 ವೇಯಿಂಗ್ ಮಿಷಿನ್, 2 ಯುಪಿಎಸ್, 3 ಜೆರಾಕ್ಸ್ ಮಿಷನ್, 1 ಪ್ರಿಂಟರ್ ಹಾಗೂ ಕಳ್ಳತನಕ್ಕೆ ಬಳಸಲಾಗುತ್ತಿದ್ದ 1 ಸ್ಕಾರ್ಪಿಯೋ ಕಾರು, 1 ಬೊಲೊರೋ ಲಗೇಜ್ ವಾಹನ, 1 ಟಾಟಾ ಸುಮೋ ಕಾರು, ಒಂದು ಇನ್ನೊವಾ ಕಾರು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ರಾಮನಗರದಲ್ಲಿ 1, ಹಾಸನದಲ್ಲಿ 2, ತುಮಕೂರು 5, ಮೈಸೂರು 5, ಮಂಡ್ಯ 20 ಹಾಗೂ ಬೆಂಗಳುರು ನಗರದಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 34 ಪ್ರಕರಣಗಳು ದಾಖಲಾಗಿವೆ. ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಕಳ್ಳತನ ಮಾಡಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಂ, ಆನ್‌ಲೈನ್ ಕ್ಲಾಸ್ ಸೇರಿದಂತೆ ವಿವಿಧ ಅಗತ್ಯತೆಗಳಿಗೆ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡು ಸರ್ಕಾರಿ ಶಾಲೆಗಳಲ್ಲಿ ಯಾವುದೇ ಭದ್ರತೆ ಇಲ್ಲದಿರುವುದರಿಂದ ಒಂದು ದಿನ ಮುಂಚಿತವಾಗಿಯೇ ಕಳ್ಳತನ ಮಾಡುವ ಶಾಲೆಗಳ ಪರಿಶೀಲನೆ ನಡೆಸಿ ನಂತರ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಅದನ್ನು ಡೀಲರ್ಸ್ ಗಳ ಮೂಲಕ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು.