ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟಗಾರರ ವಿರುದ್ಧ ಇನ್ಮುಂದೆ ಪಿಐಟಿ- ಎನ್‌ಡಿಪಿಎಸ್(ಮಾದಕ ವಸ್ತು ಗಳ ಅಕ್ರಮ ಸಾಗಾಣಿಕೆ ಮತ್ತು ಸೈಕೋ ಟ್ರಾಫಿಕ್ ವಸ್ತುಗಳ ನಿಗ್ರಹ ಕಾಯ್ದೆ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಕಲ್ಲಸಂದ್ರದ ಶಂಕರ್ ಫೌಂಡೇಷನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಮಾತ ನಾಡಿ, ಸಭೆಯಲ್ಲಿ ಭಾಗಿಯಾಗಿದ್ದ ನೂರಾರು ಮಂದಿ ಸಾರ್ವಜನಿಕರು ನಗರದಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಿ, ಅದರಿಂದ ವಿದ್ಯಾರ್ಥಿಗಳು ಮಾತ್ರವಲ್ಲ, ಪೋಷಕರು ಕೂಡ ಪರೋಕ್ಷವಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಮನವಿ ಮಾಡಿದರು.
ಅದಕ್ಕೆ ಉತ್ತರಿಸಿದ ಆಯುಕ್ತರು, ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ಇತ್ತೀಚಿನ ಯುವಪೀಳಿಗೆ ವೇಗವಾಗಿ ಮಾದಕ ವಸ್ತುಗಳಿಗೆ ಆಕರ್ಷಣೆಯಾಗುತ್ತಿದೆ. ವಿಪರ್ಯಾಸವೆಂದರೆ ಕೆಲ ದೇಶಗಳಲ್ಲಿ ಡ್ರಗ್ಸ್ ಸೇವನೆಗೆ ಅವಕಾಶ ನೀಡಲಾಗಿದೆ. ಅದರಿಂದ ಪ್ರಭಾವಿತರಾದ ಯುವಕರು ಫ್ಯಾಶನ್ ರೀತಿ ಅದನ್ನು ಬಳಸುತ್ತಿದ್ದಾರೆ. ಅದನ್ನು ತಡೆಯಲು ಗೂಂಡಾ ಕಾಯ್ದೆ ಮಾದರಿಯಲ್ಲೇ ಪೆಡ್ಲರ್‌ಗಳ ಮೇಲೆ ಪಿಟ್-ಎನ್‌ಡಿಪಿಎಸ್ ಕಾಯ್ದೆ ಹಾಕುವ ಅವಕಾಶ ಕಾನೂನಿನಲ್ಲಿದ್ದು, ಅದನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ ವಾಡ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದ್ದರು.
ನಗರದ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮರಾಗಳ ಜತೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆ ಮತ್ತು ದಟ್ಟಣೆ ನಿರ್ವಹಣೆಗೆ ಠಾಣೆಯಿಂದಲೇ ಮಾತನಾಡುವ ಮೂಲಕ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
-ಬಿ.ದಯಾನಂದ, ನಗರ ಪೊಲೀಸ್ ಆಯುಕ್ತ.