ಬೆಂಗಳೂರು: ನಗರದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಗೊವಿಂದರಾಜನಗರ ಪೊಲೀಸರು 20 ಸಿಲಿಂಡರ್ ಜಪ್ತಿ ಮಾಡಿದ್ದಾರೆ.
ಲೋಕೇಶ್ ಮತ್ತು ಹೇಮಂತ್ ಬಂಧಿತರು.
ನಗರದ ಗೊವಿಂದರಾಜನಗರ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆ ಆರೋಪಿಗಳು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದರು. ಬೈಕ್‌ನಲ್ಲಿ ಬಂದು ನಗರದ ವಿವಿಧೆಡೆ ಓಡಾಡುತ್ತಿದ್ದರು. ಮನೆ ಹೊರಗಡೆ ಇಟ್ಟಿರುವ ಸಿಲಿಂಡರ್‌ಗಳನ್ನು ಗಮನಿಸುತ್ತಿದ್ದರು. ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಹಾಡಹಗಲೇ ಕಳ್ಳತನ ಮಾಡುತ್ತಿದ್ದರು. ಕದ್ದ ಸಿಲಿಂಡರ್‌ಗಳನ್ನು ತಮ್ಮ ಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ಹಲವು ಅಡುಗೆ ಗ್ಯಾಸ್ ಸಿಲಿಂಡರ್ ಕಳವಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳ್ಳತನವಾದ ಸಿಲಿಂಡರ್ ಆಸು-ಪಾಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಆರೋಪಿಗಳು ಕೃತ್ಯ ಎಸಗಲು ಬರುತ್ತಿದ್ದ ಬೈಕ್ ನಂಬರ್ ಆಧರಿಸಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಹಳೆ ಆರೋಪಿ ಮತ್ತೆ ಸೆರೆ:
ಆರೋಪಿ ಲೋಕೇಶ್ ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದು ಮತ್ತೆ ಹಳೆ ಚಾಳಿ ಮುಂದುವರಿಸಿದ್ದ. ಈ ಹಿಂದೆ ಒಂಟಿಯಾಗಿ ಸಿಲಿಂಡರ್ ಕಡಿಯುತ್ತಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಸ್ನೇಹಿತ ಹೇಮಂತ್ ಎಂಬಾತನ ಜತೆಗೆ ಕಳ್ಳತನಕ್ಕೆ ಇಳಿದಿದ್ದ. ಈ ಹಿಂದೆ ಲೋಕೇಶ್ ಬಂಧನವಾದ ಸಂದರ್ಭದಲ್ಲಿ ಪೊಲೀಸರು ಆತನಿಗೆ ಬುದ್ಧಿವಾದ ಹೇಳಿ ಈ ಕೆಲಸ ಬಿಟ್ಟು ಒಳ್ಳೆಯ ಕೆಲಸ ಮಾಡಿಕೊಂಡು ಬದುಕುವಂತೆ ಸಲಹೆ ನೀಡಿದ್ದರು.