Advertisement

ಅಮೂಲ್ಯ ವಿಗ್ರಹ ಕದ್ದವನ ಬಂಧನ

01:32 PM Dec 01, 2017 | |

ಬೆಂಗಳೂರು: ಆ ವಿಗ್ರಹಗಳಿಗೆ ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಪಂಚಲೋಹ ಬಳಸಿ ಮಾಡಿದ ಅಮೂಲ್ಯ ವಿಗ್ರಹಗಳವು. ಆದರೆ ದೇವಾಲಯವೊಂದರಲ್ಲಿದ್ದ ಆ ವಿಗ್ರಹಗಳನ್ನು ಕದ್ದೊಯ್ದ ಚೋರನಿಗೆ ಅವುಗಳ ಅಸಲಿ ಮೌಲ್ಯವೇ ಗೊತ್ತಿರಲಿಲ್ಲ.

Advertisement

ಹೀಗಾಗಿ ಅವೆಲ್ಲಾ ಕೆಲಸಕ್ಕೆ ಬಾರದ ವಿಗ್ರಹಗಳೆಂದು ಗೋಣಿ ಚೂಲದಲ್ಲಿ ಕಟ್ಟಿ ಸ್ನೇಹಿತರ ಮನೆಯಲ್ಲಿ ಇರಿಸಿದ್ದ! ವಿಜಯನಗರ ಸಾಮ್ರಾಜ್ಯ ಕಾಲದ ಮಾತು. ಆಗ ದೊರೆ ಶ್ರೀಕೃಷ್ಣದೇವರಾಯ ಆಂಧ್ರದ ಜ್ಞಾನಾಭಿರಾಯುಡು ದೇವಾಲಯಕ್ಕೆ ನಾಲ್ಕು ಪಂಚಲೋಹದ ವಿಗ್ರಹಗಳನ್ನು ಕೊಡುಗೆ ನೀಡಿದ್ದ. ಕಳೆದೇಳು ಶತಮಾನಗಳಿಂದ ಆಲಯದಲ್ಲಿ ವಿಗ್ರಹಗಳಿಗೆ ಪೂಜೆ ಸಲ್ಲುತ್ತಿತ್ತು.

ಆದರೆ ಈಗ್ಗೆ ವರ್ಷದ ಹಿಂದೆ ದೇವಾಲಯಕ್ಕೆ ಕನ್ನ ಹಾಕಿದ ಕಳ್ಳನೊಬ್ಬ ಈ ಅಮೂಲ್ಯ ವಿಗ್ರಹಗಳನ್ನು ಕದ್ದೊಯ್ದಿದ್ದ. ಅಸಲಿಗೆ ಆ್ಯಂಟಿಕ್‌ ವಸ್ತುಗಳ ಮಾರುಕಟ್ಟೆಯಲ್ಲಿ ಈ ವಿಗ್ರಹಗಳನ್ನು ಹರಾಜಿಗಿಟ್ಟರೆ ಕೋಟ್ಯಂತರ ರೂ.ಗಳಿಗೆ ಹರಾಜಾಗುತ್ತವೆ.

ಆದರೆ ಇಂಥ ಅಮೂಲ್ಯ ವಿಗ್ರಹಗಳನ್ನು ಕದ್ದವನಿಗೆ ಅವುಗಳ ಮೌಲ್ಯವೇ ತಿಳಿದಿರಲಿಲ್ಲ. ಒಂದು ವರ್ಷದ ಹಿಂದೆ ಆಂಧ್ರದ ಚಿತ್ತೂರು ಜಿಲ್ಲೆಯ ದಾಸರಪಲ್ಲಿಯ ಇತಿಹಾಸ ಪ್ರಸಿದ್ಧ ದೇವಾಲಯದಿಂದ ದೇವರ ಪಂಚಲೋಹದ ನಾಲ್ಕು ವಿಗ್ರಹಗಳು ಕಳುವಾಗಿದ್ದವು.

ಆದರೆ ವರ್ಷ ಕಳೆದರೂ ಆರೋಪಿ ಬಗ್ಗೆ ಸುಳಿವು ಸಿಗದ ಕಾರಣ ಆತನ ಪತ್ತೆ ಅನುಮಾನ ಎಂಬ ನಿರ್ಧಾರಕ್ಕೆ ಬಂದ ಆಂಧ್ರ ಪೊಲೀಸರು “ಸಿ’ ರಿಪೋರ್ಟ್‌ ಸಲ್ಲಿಸಿದ್ದರು. ಆದರೆ ಅಂದು ವಿಗ್ರಹಗಳನ್ನು ಕದ್ದೊಯ್ದಿದ್ದ ಆರೋಪಿ ಅಂಬರೀಶ್‌ (36) ಎಂಬಾತ ಗುರುವಾರ ಕೆ.ಆರ್‌.ಪುರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ  ಪ್ರಕರಣಕ್ಕೆ ಮರುಜೀವ ದೊರೆತಿದೆ.

Advertisement

ಮತ್ತೂಂದು ಕಳವಿಗೆ ಸಂಚು: ಆರೋಪಿ ಅಂಬರೀಶ್‌ ಹಾಗೂ ಆತನ ಸ್ನೇಹಿತ ಬುಧವಾರ ಕೆ.ಆರ್‌.ಪುರದ ವೇಣುಗೋಪಾಲ ಸ್ವಾಮಿಯ ದೇವಾಲಯದ ಬಳಿ ಕಳವಿಗೆ ಸಂಚು ರೂಪಿಸಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂಬರೀಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ದಾಸರಪಲ್ಲಿ ಗ್ರಾಮದ ಜ್ಞಾನಾಭಿರಾಯುಡು ದೇವಾಲಯದಿಂದ ನಾಲ್ಕು ವಿಗ್ರಹಗಳನ್ನು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂದಗುಡಿಯ ಶನಿಮಹಾತ್ಮ ದೇವಾಲಯದಿಂದ ಎರಡು ವಿಗ್ರಹಗಳನ್ನು ಕಳವು ಮಾಡಿದ್ದಾಗಿ ತಿಳಿಸಿದ್ದಾನೆ.

ಆರೋಪಿಯಿಂದ  ಕೋಟ್ಯಂತರ ರೂ. ಮೌಲ್ಯದ ಪುರಾತನ ಕಾಲದ ನಾಲ್ಕು ಶ್ರೀರಾಮನ ವಿಗ್ರಹಗಳು ಹಾಗೂ 2 ಶನಿದೇವರ ವಿಗ್ರಹಗಳನ್ನು ಜಫ್ತಿ ಮಾಡಿಕೊಂಡಿರುವ ಪೊಲೀಸರು. ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ವಶಕ್ಕೆ  ಪಡೆದು ತನಿಖೆ ಮುಂದುವರಿಸಿದ್ದಾರೆ.  

ಪುರಾತತ್ವ ಇಲಾಖೆ ವಶಕ್ಕೆ ಪೊಲೀಸರ ವಶದಲ್ಲಿರುವ ಪುರಾತನ ವಿಗ್ರಹಗಳನ್ನು ಪುರಾತತ್ವ ಇಲಾಖೆ ವಶಕ್ಕೆ ನೀಡಲಾಗುವುದು. ಅವುಗಳ ನಿಖರ ಇತಿಹಾಸ, ಮೌಲ್ಯವನ್ನು  ಪುರಾತತ್ವ ತಜ್ಞರು ನಿರ್ಧರಿಸಲಿದ್ದಾರೆ. ಈಗಾಗಲೇ ಚಿತ್ತೂರು ಪೊಲೀಸ್‌ ಅಧಿಕಾರಿಗಳೊಂದಿಗೆ ವಿಗ್ರಹ ಪತ್ತೆ ಸಂಬಂಧ ಚರ್ಚೆ ನಡೆಸಲಾಗಿದೆ.

ಅಲ್ಲಿನ ಸ್ಥಳೀಯ ಪೊಲೀಸರು ಪ್ರಕರಣ ಸಂಬಂಧ “ಸಿ’ ರಿಪೋರ್ಟ್‌ ಸಲ್ಲಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಅವರೇ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿ ತಿಳಿಸಿದರು.  ಕಳವು ಮಾಡಲೆಂದೇ ಬೈಕ್‌ ಕದ್ದಿದ್ದ  ಜೈಲಿನಿಂದ ಬಿಡುಗಡೆಯಾದ ಬಳಿಕ ಆರೋಪಿ ಸರಗಳ್ಳತನ ಮುಂದುವರಿಸುವ ಸಲುವಾಗಿ ಮೊದಲು ಬೈಕ್‌ ಕಳವು ಮಾಡಲು ನಿರ್ಧರಿಸಿದ್ದ.

ಹೀಗಾಗಿ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಮನೆಮುಂದೆ ನಿಲ್ಲಿಸಿದ್ದ ರೆಡ್‌ ಪಲ್ಸರ್‌ ಬೈಕ್‌ ಹಾಗೂ ಸ್ಕೂಟಿಪೆಪ್‌ ಬೈಕ್‌ ಕಳವು ಮಾಡಿದ್ದ. ಬಳಿಕ ಇದೇ ಬೈಕ್‌ಗಳಲ್ಲಿ ಓಡಾಡುತ್ತಿದ್ದ. ಒಬ್ಬಂಟಿಯಾಗಿ ಓಡಾಡುವ ಮಹಿಳೆಯರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಸರಕಳವು ಮಾಡುತ್ತಿದ್ದ.  

ಸದ್ಯ ಆರೋಪಿ ಬಂಧನದಿಂದ ಕೆ.ಆರ್‌ಪುರ ,ಮಾರತ್ತಹಳ್ಳಿ, ಕಾಡುಗೋಡಿ ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ  ಎಸಗಿದ್ದ 11 ಪ್ರಕರಣಗಳು ಬೆಳಕಿಗೆ ಬಂದಿದ್ದು, 200 ಗ್ರಾಂ ಚಿನ್ನಾಭರಣ ಒಂದು ಪಲ್ಸರ್‌ ಹಾಗೂ ಸ್ಕೂಟಿ ಪೆಪ್‌ ಬೈಕ್‌ಗಳನ್ನು ಜಫ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.  

ಕದ್ದ ನಂತರ ಮಾರುವುದು ಹೇಗೆಂದೇ ಗೊತ್ತಿರಲಿಲ್ಲ!
ಕೋಲಾರ ಮೂಲದ ಆರೋಪಿ ಅಂಬರೀಶ್‌, ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಸರ, ಬೈಕ್‌, ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಕಳವು ಪ್ರಕರಣವೊಂದರಲ್ಲಿ ವರ್ತೂರು ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ಕಳೆದ ಒಂದೂವರೆ ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ, ಪುನಃ ಹಳೇ ಕಸುಬು ಮುಂದುವರಿಸಿಕೊಂಡಿದ್ದ.

ಅಂಬರೀಶ್‌ ಜೈಲಿನಲ್ಲಿದ್ದಾಗ ಪುರಾತನ ವಿಗ್ರಹ ಮಾರಾಟಕ್ಕೆ ಕೋಟ್ಯಾಂತರ ರೂ. ಬೆಲೆಯಿದೆ ಎಂದು ಕೆಲವರು ಸಲಹೆ ನೀಡಿದ್ದರು. ಹೀಗಾಗಿ ದೇವಾಲಯಗಳ ವಿಗ್ರಹ ಕಳವಿಗೆ ಇಳಿದು ಚಿತ್ತೂರು ಜಿಲ್ಲೆಯ ಜ್ಞಾನಾಭಿರಾಯುಡು  ದೇವಾಲಯದ ಬೀಗ ಮುರಿದು 4 ಶ್ರೀರಾಮನ ವಿಗ್ರಹ  ಹಾಗೂ ನಂದಗುಡಿಯ ಶನಿಮಹಾತ್ಮ ದೇವಾಲಯಗಳಲ್ಲಿ 2 ವಿಗ್ರಹಗಳನ್ನು ಕಳವು ಮಾಡಿದ್ದ. ಈ ವಿಗ್ರಹಗಳನ್ನು ವಿಜಯನಗರದ ಅರಸ ಶ್ರೀಕೃಷ್ಣ ದೇವರಾಯ ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದ ಎನ್ನಲಾಗಿದೆ.

 ಆರೋಪಿಯು 2016ರ ಅವಧಿಯಲ್ಲಿ ಎರಡೂ ದೇವಾಲಯಗಳ ಬೀಗ ಮುರಿದು ದೇವರ ವಿಗ್ರಹಗಳನ್ನು ಕದ್ದಿದ್ದಾನೆ. ಆದರೆ, ಈ ವಿಗ್ರಹಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ ಎಂಬ ಸಂಗತಿ ಗೊತ್ತಿರಲಿಲ್ಲ. ಹೀಗಾಗಿ ವಿಗ್ರಹಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಸ್ನೇಹಿತರ ಮನೆಗಳಲ್ಲಿ ಇಡುತ್ತಿದ್ದ.

ಇತ್ತೀಚೆಗೆ ವಿದ್ಯಾರಣ್ಯಪುರದಲ್ಲಿರುವ ತನ್ನ ಸ್ನೇಹಿತ ಆನಂದ್‌ ಎಂಬಾತನ ಮನೆಯಲ್ಲಿ ಈತ ಬಚ್ಚಿರಿಸಿದ್ದ ವಿಗ್ರಹಗಳನ್ನ ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ಆನಂದ್‌ನನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next