ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಇನ್ಸ್‌ಪೆಕ್ಟರ್ ಹೆಸರಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯ ಪಾಲಕ ಎಂಜಿನಿಯರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟೇಗಾರಪಾಳ್ಯ ನಿವಾಸಿ ತ್ಯಾಗರಾಜ್ (68) ಬಂಧಿತ.
ಆರೋಪಿ ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿ ಯರ್ ಕೆ.ಬಿ.ರಾಮದಾಸಪ್ಪಗೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಸೋಗಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅ.4ರಂದು ಆರೋಪಿ ಆರೋಪಿ ತ್ಯಾಗರಾಜ್ ರಾಮದಾಸಪ್ಪಗೆ ಕರೆ ಮಾಡಿ, “ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಅದನ್ನು ಮುಕ್ತಾಯ ಗೊಳಿಸಲು ಮೇಲಧಿಕಾರಿಗಳಿಗೆ ದೊಡ್ಡಮಟ್ಟದಲ್ಲಿ ವ್ಯವಹಾರ ಮಾಡಬೇಕಿದೆ. ಇಲ್ಲವಾದರೆ ನಿಮಗೆ ತೊಂದರೆಯಾಗುವ ಸಂಭವ ಇದೆ. ಕೂಡಲೇ ನನ್ನನ್ನು ಭೇಟಿ ಮಾಡಿ’ ಎಂದು ಹೇಳಿದ್ದ.
ರಾಮದಾಸಪ್ಪ ಅವರು ಯಾವುದೋ ಫೇಕ್ ಕಾಲ್ ಇರಬೇಕೆಂದು ಆರಂಭದಲ್ಲಿ ನಿರ್ಲಕ್ಷ್ಯಿಸಿದ್ದರು. ಆದರೆ, ಅ.27ರಂದು ರಾಮದಾಸಪ್ಪ ಕಾರ್ಯ ನಿಮಿತ್ತ ತಮ್ಮ ಇಲಾಖೆಯ ವಿಜೆಎನ್‌ಎಲ್ ಎಂಡಿ ಕಚೇರಿಗೆ ಹೋಗಿದ್ದಾಗ, ಮತ್ತೂಮ್ಮೆ ಕರೆ ಮಾಡಿದ ಆರೋಪಿ “ನಾನು ಲೋಕಾಯುಕ್ತ ಇನ್ ಸ್ಪೆಕ್ಟರ್ ಮಾತನಾಡುವುದು, ನಮ್ಮ ಎಡಿಜಿಪಿ ಸಾಹೇಬರು ನಿಮ್ಮ ಜತೆ ಮಾತನಾಡುತ್ತಾರೆ ಎಂದು ಹೇಳಿ ಧ್ವನಿ ಬದಲಾಯಿಸಿ ಆತನೆ ಮಾತನಾಡಿ ನಿಮ್ಮ ಮೇಲೆ ಆರೋಪ ಕೇಳಿ ಬಂದಿದ್ದು ಅದನ್ನು ಮುಕ್ತಾಯ ಮಾಡಲು ನಮ್ಮ ಲೋಕಾಯುಕ್ತ ಇನ್‌ಸ್ಪೆಕ್ಟರ್ ಭೇಟಿ ಮಾಡಿ’ ಎಂದಿದ್ದ. ಈ ಬಗ್ಗೆ ಅನುಮಾನಗೊಂಡ ರಾಮದಾಸಪ್ಪ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.