ಆನೇಕಲ್: ತನ್ನ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮಹಿಳೆ ಸೇರಿದಂತೆ ಆಕೆಯ ಪತಿಯನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರವತಿ ಮೂಲದ ಕಿರಣ್‌ಕುಮಾರ್(25) ಕೊಲೆಯಾಗಿದ್ದಾತ. ಈತನನ್ನು ಆರೋಪಿಗಳು 38 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಘಟನೆ ವಿವರ: ಸುರೇಖಾ(38) ಮುನ್ನ(41)ದಂಪತಿ ಕೊಲೆ ಮಾಡಿದ ಆರೋಪಿಗಳು. ಇವರು ಮೂಲತಃ ದಾವಣಗೆರೆಯವರು. ಓದುವಾಗಲೇ ಇಬ್ಬರಿಗೂ ಪ್ರೇಮಾಂಕುರವಾಗಿ ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಿದ್ದರು. ಮದುವೆಯಾಗಿ ಸಂಸಾರ ಚೆನ್ನಾಗಿತ್ತು. ಆದರೆ, ಸುರೇಖಾ ಆಸ್ಪತ್ರೆಯ ನರ್ಸಿಂಗ್ ಕೆಲಸ ಕಾರಣಕ್ಕೆ ಚಿಕ್ಕಮಗಳೂರು ಕಡೆಗೆ ತರಬೇತಿಗೆ ಹೋಗಿದ್ದರು.
ಈ ವೇಳೆ ಭದ್ರಾವತಿ ಮೂಲದ ಕಿರಣ್‌ಕುಮಾರ್ ಎಂಬಾತ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿದ್ದ. ಇಬ್ಬರ ಪರಿಚಯ ಕೆಲ ದಿನಗಳ ನಂತರ ಅನೈತಿಕ ಸಂಬಂಧಕ್ಕೆ ಕಾರಣವಾಯಿತು. ಕಟ್ಟಿಕೊಂಡ ಗಂಡನನ್ನು ಬಿಟ್ಟು ಫೇಸ್ ಬುಕ್ ಜಾಲದಲ್ಲಿ ಪರಿಚಯವಾಗಿದ್ದ ಕಿರಣ್‌ಕುಮಾರ್ ಜತೆಗೇ ಸುರೇಖಾ ಜಿಗಣಿಯಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಕಿರಣ್‌ಕುಮಾರ್‌ಗೆ ಬೇರೆ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಇದರಿಂದ ಕುಪಿತಗೊಂಡ ಸುರೇಖಾ, ತನ್ನ ಮೊದಲ ಪತಿಯನ್ನು ಕರೆಸಿಕೊಂಡು 38 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಮಾಡಿದ ಬಳಿಕ ಗಂಡ ಹೆಂಡತಿ ಇಬ್ಬರೂ ಬೆಳಗಾವಿ ಕಡೆಗೆ ಪರಾರಿಯಾಗಿದ್ದರು.
ಅಕ್ರಮ ಸಂಬಂಧದ ಹಿನ್ನೆಲೆ ನಡೆದ ಕೊಲೆ ಪ್ರಕರಣ ಬೇಧಿಸಲು ಜಿಗಣಿ ಸಿಪಿಐ ವಿಶ್ವನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇವರನ್ನು ಪತ್ತೆ ಮಾಡಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತ್ವರಿತ ಕೊಲೆ ಪತ್ತೆ ಎಂಬ ಪ್ರಶಂಸೆಗೆ ಜಿಗಣಿ ಪೊಲೀಸರು ಪಾತ್ರರಾಗಿದ್ದಾರೆ.
ಕೊಲೆಗೆ ಪತಿಯ ಸಹಾಯ: ಸುರೇಖಾ ಅಕ್ರಮ ಸಂಬಂಧದ ಬಗ್ಗೆ ತನ್ನ ಮೊದಲ ಗಂಡನಾದ ಮುನ್ನಾಗೆ ಎಲ್ಲಾ ವಿಷಯ ತಿಳಿಸಿದ್ದು ಅದರಂತೆ ಪತಿಯ ಸಹಾಯ ಪಡೆದು, ಜಿಗಣಿ ಎಪಿಸಿ ಸರ್ಕಲ್ ಕೆಇಬಿ ಬಳಿ ಇರುವ ಕಿರಣ್ ಕುಮಾರ್ ಮನೆಗೆ ನ.18ರಂದು ಮಾತನಾಡಲು ಬಂದಿದ್ದರು. ಬಳಿಕ ಸುರೇಖಾ “ನಿನ್ನಿಂದ ನನ್ನ ಜೀವನ ಹಾಳಾಗಿದೆ. ಈಗ ನೀನು ಬೇರೆ ಮದುವೆಯಾದರೆ ನನ್ನ ಕಥೆ ಏನಾಗುತ್ತೆ’ ಎಂದು ಜಗಳವಾಡಿದ್ದಳು.
ಈ ವೇಳೆ ಕಿರಣ್‌ಕುಮಾರ್ ಒಪ್ಪದ ಕಾರಣಕ್ಕೆ ಸುರೇಖಾ ಮತ್ತು ಗಂಡ ಮುನ್ನ ಚಾಕುವಿನಿಂದ ಕತ್ತುಕೊಯ್ದು, 38 ಬಾರಿ ಮನಬಂದಂತೆ ಇರಿದು ಭೀಕರವಾಗಿ ಹತ್ಯೆಗೈದು ಅಲ್ಲಿಂದ ಪರಾರಿಯಾದೆವು’ ಎಂದು ಪೊಲೀಸರ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.